ಒಂದು ಕಡೆ ಕೊರೊನ ವೈರೆಸ್ ಮರಣ ಮೃದಂಗ, ಮತ್ತೊಂದು ಕಡೆ ಮಂಗನ ಕಾಯಿಲೆಯ ಅಟ್ಟಹಾಸ; ಸರ್ಕಾರದ ನಿರ್ಲಕ್ಷ್ಯ

ನ್ಯೂಸ್ ಕನ್ನಡ ವರದಿ: ಜಗತ್ತಿನಲ್ಲಿ ಈಗ ಯಾರನ್ನೇ ಕೇಳಿ ನಿಮಗೆ ಕಾಡುತ್ತಿರುವ ಭೀತಿ ಯಾವುದು ಎಂದು. ಎಲ್ಲರಿಂದಲೂ ಸಾಮಾನ್ಯವಾಗಿ ಸಿಗುವ ಉತ್ತರ ಕೊರೊನ ವೈರೆಸ್. ಅದೇ ಇತ್ತ ಮಲೆನಾಡಿಗೆ ಬನ್ನಿ. ಅಲ್ಲಿನ ಜನರ ಮುಂದೆಯೂ ಇದೇ ಪ್ರಶ್ನೆಯನ್ನು ಕೇಳಿದರೆ. ಅವರು ನೀಡುವ ಉತ್ತರ ಮಂಗನ ಕಾಯಿಲೆ ಎಂದು.

ರಾಜ್ಯದ ಮಲೆನಾಡಿಗರಿಗೆ ಕಂಟಕವಾಗಿರುವ ಕ್ಯಾಸನೂರು ಫಾರೆಸ್ಟ್‌ ಡಿಸೀಜ್‌ (KFD) ಅಥವಾ ಮಂಗನ ಕಾಯಿಲೆ ವರ್ಷದಿಂದ ವರ್ಷಕ್ಕೆ ತನ್ನ ವ್ಯಾಪ್ತಿಯನ್ನು ಹಿಗ್ಗಿಸುತ್ತಿದೆ. ಅದಕ್ಕೆ ಬಲಿಯಾಗುತ್ತಿರುವವರ ಸಂಖ್ಯೆಯೂ ಏರುತ್ತಿದೆ. ದುರಂತ ಎಂದರೆ, ಜನರ ಪ್ರಾಣವನ್ನು ಹಿಂಡುವ ಈ ಕಾಯಿಲೆಗೆ ಶಾಶ್ವತ ಮದ್ದು ಹುಡುಕುವ ಕೆಲಸ ಇಲ್ಲಿಯವರೆಗೆ ಬಂದ ಯಾವ ಸರ್ಕಾದಿಂದಲೂ ಆಗಿಲ್ಲ.

ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕು ಕ್ಯಾಸನೂರು ಅರಣ್ಯ ಪ್ರದೇಶದಲ್ಲಿ 1957ರಲ್ಲಿ ಮೊದಲ ಬಾರಿ ಈ ಕಾಯಿಲೆಯ ಲಕ್ಷಣಗಳು ಕಾಣಿಸಿಕೊಂಡಿದ್ದವು. ಇದು ಮಂಗಗಳಿಂದ ಹರಡು ಕಾಯಿಲೆ ಎಂದು ಮರುವರ್ಷ ದೃಢಪಟ್ಟಿತ್ತು. ಅಂದಿನಿಂದ ಈ ಕಾಯಿಲೆಯನ್ನು ಕ್ಯಾಸನೂರು ಫಾರೆಸ್ಟ್ ಡಿಸೀಸ್ (KFD) ಎಂದೇ ಕರೆಯಲಾಗುತ್ತಿದೆ. 1957 ರಿಂದ ಇಲ್ಲಿಯವರೆಗೆ ಸಾವಿರಾರು ಜನ ಈ ಕಾಯಿಲೆಗೆ ತುತ್ತಾಗಿದ್ದಾರೆ, ನೂರಾರು ಜನ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಬರೀ ಮಲೆನಾಡಿಗೆ ಮಾತ್ರ ಸೀಮಿತವಾಗಿದ್ದ ಈ ಕಾಯಿಲೆ ಈಗ ಚಾಮರಾಜನಗರ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಉತ್ತರ ಕನ್ನಡವಲ್ಲದೆ ಮಹಾರಾಷ್ಟ್ರ, ಗೋವಾ, ತಮಿಳುನಾಡು ಕೇರಳ ರಾಜ್ಯಗಳಿಗೂ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ.

ಮಲೆನಾಡಿನ ಅರಣ್ಯ ಪ್ರದೇಶಗಳ ಗ್ರಾಮಗಳಲ್ಲಿ ಈ ಕಾಯಿಲೆ ಸಾಮಾನ್ಯವಾಗಿ ಬೇಸಿಗೆ ಆರಂಭದಲ್ಲಿ ಕಾಣಿಸಿಕೊಂಡು ಮಳೆ ಆರಂಭವಾಗುತ್ತಿದ್ದಂತೆ ಕಡಿಮೆಯಾಗುತ್ತದೆ. ಆದರೆ, ಮೂರು ವರ್ಷಗಳಿಂದ ಚಳಿಗಾಲದ ಆರಂಭದಲ್ಲೇ ಹಬ್ಬುತ್ತಿರುವುದು ಜನರ ನೆಮ್ಮದಿ ಕೆಡಿಸಿದೆ. 2019ರಲ್ಲಿ ಮಂಗನ ಕಾಯಿಲೆಗೆ ಶಿವಮೊಗ್ಗ ಜಿಲ್ಲೆಯಲ್ಲಿ 18 ಜನ ಮೃತಪಟ್ಟಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ಈ ಬಾರಿ (2020 ಮಾರ್ಚ್ ವರೆಗೂ) 98 ಜನರಿಗೆ ಮಂಗನ ಕಾಯಿಲೆ ಇರುವುದು ದೃಢಪಟ್ಟಿದ್ದು ಸಾಗರ ತಾಲ್ಲೂಕಿನ ಇಬ್ಬರು ಮೃತಪಟ್ಟಿದ್ದಾರೆ.

ಮಂಗನ ಕಾಯಿಲೆ ಹರಡುವುದಾದರು ಹೇಗೆ? ಮತ್ತು ಅದರ ರೋಗದ ಲಕ್ಷಣಗಳು.

ಸತ್ತ ಮಂಗನ ದೇಹದ ಮೇಲಿದ್ದ ವೈರಸ್‌ ಹೊತ್ತ ಉಣ್ಣೆಗಳು (ಒಣಗು) ಕಾಡಿನಲ್ಲಿ ಓಡಾಡುವ ಜನರಿಗೆ ಕಚ್ಚಿದರೆ ರೋಗ ಹರಡುತ್ತದೆ. ಕಾಯಿಲೆಯಿಂದ ಬಳಲುವ ಮಂಗಗಳು ಸಾಯುವುದಕ್ಕೂ ಮೊದಲು ವಿಪರೀತ ನರಳಾಡುತ್ತವೆ. ಬಾಯಿ, ಜನನಾಂಗಗಳಿಂದ ರಕ್ತಸ್ರಾವ ಸಹ ಆಗುತ್ತದೆ. ಇದೊಂದು ರೀತಿ ಮಂಗಗಳಿಗೆ ಬರುವ ಡೆಂಗ್ಯೂ, ಚಿಕುನ್ ಗುನ್ಯಾ ರೀತಿಯ ಜ್ವರ. ಆಗ ಹೊರಬೀಳುವ ವೈರಾಣುಗಳು ಮೊಲ, ಹೆಗ್ಗಣ, ಜಾನುವಾರುಗಳ ಮೂಲಕ ಕಾಯಿಲೆ ಹರಡಲು ಕಾರಣವಾಗುತ್ತವೆ. ಕಾಡಿಗೆ ಹೋದ ಜಾನುವಾರುಗಳ ಮೇಲೆ ಈ ಒಣಗು ಹತ್ತಿಕೊಂಡು ಕೊಟ್ಟಿಗೆಗೆ ಬಂದಾಗ ಮನುಷ್ಯನ ರಕ್ತ ಕುಡಿಯಲು ಹತ್ತುತ್ತವೆ. ಇವು ಸಣ್ಣ ತಿಗಣೆಯಷ್ಟು ಚಿಕ್ಕ ಇರುವುದರಿಂದ ಅಷ್ಟು ಸುಲಭಕ್ಕೆ ಕಣ್ಣಿಗೆ ಕಾಣುವಂತದ್ದಲ್ಲ. ಆ ನಂತರ ರೋಗ ಲಕ್ಷಣ ಕಾಣಿಸಿಕೊಂಡವರು ಚಿಕಿತ್ಸೆ ಪಡೆಯದೇ ಇದ್ದರೆ ಎರಡನೇ ಹಂತದಲ್ಲಿ ಮೆದುಳು ಜ್ವರ, ರಕ್ತಸ್ರಾವ ಸಂಭವಿಸುತ್ತದೆ. ಸಾವು ಸಂಭವಿಸುವ ಸಾಧ್ಯತೆಯೂ ಇರುತ್ತದೆ ಎಂದು ತೀರ್ಥಹಳ್ಳಿಗೆ ಹೋದಾಗ ಗೆಳೆಯ ಪ್ರಗತ್ ಹೇಳಿದ್ದರು.

ವೈರಸ್‌ ಸೋಕಿದ 3 ರಿಂದ 4 ದಿನಗಳಲ್ಲಿ ಜ್ವರ ಕಾಣಿಸಿಕೊಳ್ಳುತ್ತದೆ. ರೋಗ ನಿರೋಧಕ ಶಕ್ತಿ ಇದ್ದವರಿಗೆ ಸಾಮಾನ್ಯ ಜ್ವರದ ಮಾತ್ರೆ ತೆಗೆದುಕೊಂಡರೂ ಕಡಿಮೆಯಾಗುತ್ತದೆ. ಅಥವಾ ಜ್ವರದ ಪ್ರಮಾಣ ಸ್ವಲ್ಪ ನಿಧಾನವಾಗಿ ಏರುತ್ತದೆ. ಇಲ್ಲದವರಿಗೆ ಮೈಕೈ ನೋವು ಕಾಣಿಸಿಕೊಳ್ಳುತ್ತದೆ. ದೇಹದಲ್ಲಿ ನೀರಿನ ಅಂಶ ಕಡಿಮೆಯಾಗುತ್ತದೆ. ಬಿಳಿ ರಕ್ತ ಕಣಗಳ ಸಂಖ್ಯೆ ಕುಸಿಯುತ್ತದೆ. ವಾರದ ನಂತರ ಮೂಗು, ಬಾಯಿ, ಮಲದಲ್ಲಿ ರಕ್ತ ಸ್ರಾವವಾಗುತ್ತದೆ. ರಕ್ತದ ಒತ್ತಡ ಕುಸಿಯುತ್ತದೆ. ಕಿಡ್ನಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಜಿಲ್ಲಾಡಳಿತದ ಕರ್ತವ್ಯ ಮತ್ತು ರಾಜ್ಯ ಸರ್ಕಾರದ ನಿರ್ಲಕ್ಷ್ಯ

ಮಂಗನ ಕಾಯಿಲೆ ನಿಯಂತ್ರಿಸುವುದು ಆಡಳಿತ ವ್ಯವಸ್ಥೆಯ ಆಧ್ಯತೆಯಾಗಿದೆ. ಆದರೆ ಸರ್ಕಾರ ಮಾತ್ರ ಮಾರಕ ಮಂಗನ ಕಾಯಿಲೆಗೆ ಸರಿಯಾದ ಜೌಷಧಿ, ಲಸಿಕೆಯನ್ನು ಸಿದ್ದಪಡಿಸಿಲ್ಲ. ಸುಮಾರು ಅರವತ್ತು ವರ್ಷಗಳಿಂದಲೂ ಇರುವ ಈ ಮಂಗನ ಕಾಯಿಲೆಗೆ ವ್ಯಾಕ್ಸಿನ್ ಬಿಟ್ಟರೆ ನಿರ್ಧಿಷ್ಟ ಔಷಧವನ್ನು ಇಲ್ಲಿಯವರೆಗೆ ಕಂಡುಹಿಡಿಯಲಾಗಿಲ್ಲ.

ಸಂಶೋಧನೆ ಪ್ರಕಾರ ಮಂಗನ ಕಾಯಿಲೆಗೆ ವ್ಯಾಕ್ಸಿನ್ ಹಾಕಿಸಿಕೊಂಡರೆ ಕಾಯಿಲೆ ಬರಬಾರದು. ಆದರೆ KFD3 BOOSTER ಡೋಸ್ ಹಾಕಿಸಿಕೊಂಡ ಬಳಿಕವೂ ರೋಗ ನಿರೋಧಕ ಶಕ್ತಿ ಸಾಮರ್ಥ್ಯ ಶೇ.83 ರಷ್ಟು ಮಾತ್ರ ಇರುತ್ತದೆ. ಶೇ. 17 ರಷ್ಟು ಜನರಲ್ಲಿ ಲಸಿಕೆ ಹಾಕಿಸಿಕೊಂಡ ಬಳಿಕವೂ ಕಾಯಿಲೆ ಕಾಣಿಸಿಕೊಳ್ಳುತ್ತದೆ. ಪ್ರತಿವರ್ಷ ನಿರಂತರ ತೆಗೆದುಕೊಂಡಾಗ ಮಾತ್ರ ರೋಗ ನಿರೋಧಕ ಶಕ್ತಿ ಪಡೆಯುವುದು ಸಾಧ್ಯವೆಂದು ಆರೋಗ್ಯ ಇಲಾಖೆಯ ಅಧಿಕಾರಿಗಳೇ ಹೇಳುತ್ತಾರೆ.

ಆದರೆ ಕಳೆದ ಐದು ವರ್ಷದಿಂದ ನಿರಂತರ ಲಸಿಕೆ ತೆಗೆದುಕೊಂಡ ಬಳಿಕವೂ ಕಾಯಿಲೆ ಕಾಣಿಸಿಕೊಳ್ಳುತ್ತಿರುವುದು ಹೇಗೆ? ವ್ಯಾಕ್ಸಿನ್ ನಲ್ಲಿ ರೋಗ ನಿರೋಧಕ ಶಕ್ತಿ ಎಷ್ಟಿದೆ? ಎಂಬ ಅನುಮಾನ ಈಗ ಸಾರ್ವಜನಿಕರಲ್ಲಿ ಕಾಡುತ್ತಿರುವುದಂತು ಸತ್ಯ ಅದಕ್ಕೆ ಪುಷ್ಟಿ ಕೊಡುವಂತೆ ಮಾರ್ಚ್ ಎರಡನೇ ವಾರ ಸಾಗರದಲ್ಲಿ ಕೃಷಿಕನೊಬ್ಬ ಮಂಗನ ಕಾಯಿಲೆಯಿಂದ ಸಾವನಪ್ಪಿದ ವರದಿ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು, ಮೂರು ತಿಂಗಳಿನಿಂದ ವ್ಯಾಕ್ಸಿನ್ ಲಸಿಕೆಯನ್ನು ಹಾಕಿಸಿಕೊಂಡೂ ಸಹ ಯಾವುದೇ ಗುಣಮುಖವಾದ ಬಗ್ಗೆ ವರದಿಯಾಗಿರಲಿಲ್ಲ. ರೋಗದಿಂದ ಇನ್ನೂ ಹಲವು ಜನ ಬಳಲುತ್ತಿದ್ದಾರೆ ಸರ್ಕಾರ ಕೂಡಲೇ ಸರಿಯಾದ ಔಷಧವನ್ನು ಕಂಡು ಹಿಡಿದು ಸಾರ್ವಜನಿಕನ್ನು ಮಾರಕ ರೋಗದಿಂದ ಮುಕ್ತಿಗೊಳಿಸಬೇಕಾಗಿದೆ.

ಮಂಗನಕಾಯಿಲೆಯ ಇತಿಹಾಸ ನೋಡಿದರೆ ಸರ್ಕಾರಗಳ ನಿರ್ಲಕ್ಷ್ಯವೇ ಎದ್ದು ಕಾಣುತ್ತೆ. ಇಷ್ಟೊಂದು ಪ್ರಮಾಣದ ಸಾವುನೋವುಗಳಾದರೂ ಕೂಡಾ ಒಂದೇ ಒಂದು ಪರಿಣಾಮಕಾರಿ ಸಂಶೋಧನೆ ನಡೆದಿಲ್ಲ. ಸಮಗ್ರ ವರದಿಯನ್ನೂ ನೀಡಿಲ್ಲ. ಈಗಂತೂ ಕರೋನಾ ಆರ್ಭಟದಲ್ಲಿ ಮಂಗನ ಕಾಯಿಲೆಯನ್ನ ಆರೋಗ್ಯ ಇಲಾಖೆ ಸಂಪೂರ್ಣವಾಗಿ ಕಡೆಗಣಿಸಿದೆ. ಇದನ್ನು ಸೂಕ್ಷ್ಮವಾಗಿ ಪರಿಗಣಿಸಿ ಜಿಲ್ಲಾಡಳಿತ ರಾಜ್ಯ ಸರ್ಕಾರಕ್ಕೆ ಒತ್ತಡ ತರಬೇಕು ಮತ್ತು ರಾಜ್ಯ ಸರ್ಕಾರವು ಈ ಕಾಯಿಲೆಯನ್ನು ನಿರ್ಲಕ್ಷ್ಯ ಮಾಡದೇ ಪರಿಹರಿಸದಿದ್ದರೆ ಅನೇಕ ಸಾವು ನೋವುಗಳಾಗುವುದು ನಿಶ್ಚಿತ.

~ ಚಂದನ್ ಕುಮಾರ್

Leave a Reply

Your email address will not be published. Required fields are marked *