ಯುಎಇ ಅನಿವಾಸಿ ಕನ್ನಡಿಗರಿಗೆ ರಾಜ್ಯ ಸರಕಾರದ ಘೋರ ಅನ್ಯಾಯ ಮತ್ತು ನಿರ್ಲಕ್ಷ್ಯ!
ನ್ಯೂಸ್ ಕನ್ನಡ ವರದಿ: (05.05.2020): ಕೇಂದ್ರ ಸರ್ಕಾರದಿಂದ ಕೊರೋನ ಸಂಕಷ್ಟದಿಂದ ವಿದೇಶದಲ್ಲಿ ಸಿಲುಕಿರುವ ಅನಿವಾಸಿ ಭಾರತೀಯರನ್ನು ವಾಪಾಸು ಕರೆತರುವ ವಿಮಾನ ಪ್ರಯಾಣದ ವೇಳಾಪಟ್ಟಿ, ಪ್ರಯಾಣಿಸಲಿರುವ ಸ್ಥಳಗಳ ಮೊದಲ ಪಟ್ಟಿ ಬಿಡುಗಡೆಯಾಗಿದ್ದು, ಈ ಪಟ್ಟಿಯಲ್ಲಿ ಯುಎಈಯಿಂದ ಕರ್ನಾಟಕಕ್ಕೆ ಯಾವುದೇ ವಿಮಾನ ಪ್ರಯಾಣ ನಿಗದಿಯಾಗಿಲ್ಲ.
ಯುಎಈಯಲ್ಲಿರವ ಕರ್ನಾಟಕ ಎನ್ಆರೈ ಫೋರಂ ಭಾರತಕ್ಕೆ ವಾಪಸಾಗಲು ಇಚ್ಚಿಸಿರುವ ಅನಿವಾಸಿ ಕನ್ನಡಿಗರ ಮಾಹಿತಿಯನ್ನು ರಿಜಿಸ್ಟರ್ ಮೂಡಿಸುವ ಮೂಲಕ ಕಲೆಹಾಕಿದ್ದು, ವಿಸಿಟ್ ವಿಸಾ, ಗರ್ಭಿಣಿ ಮಹಿಳೆಯರು,ತುರ್ತು ಚಿಕಿತ್ಸೆಗೆ ಹೋಗುವವರ ಸಂಪೂರ್ಣ ವಿವರ ಹೊಂದಿದ್ದು, ಈ ಕುರಿತು ರಾಜ್ಯ ಸರ್ಕಾರದ ಮಂತ್ರಿಗಳೊಂದಿಗೆ ನಿರಂತರ ಮಾಹಿತಿ ವಿನಿಮಯ ಮಾಡಿತ್ತು, ಈಗಾಗಲೇ 100ಕ್ಕಿಂತಲೂ ಹೆಚ್ಚು ಗರ್ಭಿಣಿ ಸ್ತ್ರೀಯರು ಹೆಸರು ರಿಜಿಸ್ಟರ್ ಮಾಡಿದ್ದು ಹಾಗಾಗಿ ಯುಎಈಯಿಂದ ಕನಿಷ್ಠ ಒಂದು ವಿಮಾನವನ್ನು ಕರ್ನಾಟಕಕ್ಕೆ ಮೊದಲ ಪಟ್ಟಿಯಲ್ಲಿ ಕಳುಹಿಸಲೇಬೇಕಾದ ತುರ್ತು ಅವಶ್ಯಕತೆ ಇದೆ.
ಆದರೆ ರಾಜ್ಯ ಸರ್ಕಾರ ಈ ಕುರಿತು ತಲೆಕೆಡಿಸಿಕೊಂಡ ಹಾಗೆ ಕಾಣುತ್ತಿಲ್ಲ, ಕೇಂದ್ರಕ್ಕೆ ಕೇರಳ ಸರ್ಕಾರ ಒತ್ತಡ ತಂದಂತೆ ಕರ್ನಾಟಕ ಸರಕಾರ ಪ್ರಯತ್ನವೇ ಮಾಡಿಲ್ಲ, ಹಾಗಾಗಿ ಬೇರೆ ರಾಜ್ಯಗಳಿಗೇ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ. ಈಗಲಾದರೂ ರಾಜ್ಯ ಸರ್ಕಾರ
ಈ ಕುರಿತು ಕೇಂದ್ರ ಸರ್ಕಾರ ಮತ್ತು ವಿದೇಶಾಂಗ ಇಲಾಖೆಯ ಜೊತೆ ಕೂಡಲೇ ಮಾತನಾಡಿ ಇವರಿಗೆ ಮೊದಲ ಪಟ್ಟಿಯಲ್ಲಿಯೇ ಪ್ರಯಾಣಿಸಲು ಅನುವು ಮಾಡಿಬೇಕಾಗಿದೆ. ಯುಎಈ ಅನಿವಾಸಿ ಕನ್ನಡಿಗರೆಲ್ಲರೂ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ಈ ಸಂದರ್ಭದಲ್ಲೂ ಅನಿವಾಸಿಗಳ ಬಗ್ಗೆ ನಿರ್ಲಕ್ಷ್ಯ ಸರ್ಕಾರದ ವಿರುದ್ಧ ದೊಡ್ಡ ಮಟ್ಟದ ಆಕ್ರೋಶಕ್ಕೆ ಕಾರಣವಾಗುವುದಂತೂ ನಿಜ.