ಬಿಜೆಪಿಯ ದೆಹಲಿ ಕೇಂದ್ರ ಕಚೇರಿಯಲ್ಲಿ ಅಧಿಕೃತವಾಗಿ ಬಿಜೆಪಿ ಪಕ್ಷ ಸೇರಿದ ಮಾಲೀಕಯ್ಯ ಗುತ್ತೇದಾರ್!
ನ್ಯೂಸ್ ಕನ್ನಡ ವರದಿ: ರಾಜ್ಯದಲ್ಲಿ ಚುನಾವಣೆ ಹತ್ತಿರವಾಗುತ್ತಿದ್ದಂತೆ ಹಲವಾರು ಹೊಸ ಹೊಸ ರಾಜಕೀಯ ಬೆಳವಣಿಗೆಗಳು ಕಂಡುಬರುತ್ತಿದೆ. ರಾಜಕೀಯ ನಾಯಕರು ಪಕ್ಷಾಂತರ ಮಾಡುವ ಪರ್ವ ಶುರುವಾಗಿದೆ. ರಾಷ್ಟ್ರೀಯ ಪಕ್ಷಗಳು ಟಿಕೆಟ್ ಘೋಷಣೆ ಮಾಡುತ್ತಿದ್ದಂತೆ ಟಿಕೆಟ್ ಸಿಗದವರು ಬಂಡಾಯವೆದ್ದು ಪಕ್ಷ ಬಿಟ್ಟು ಹೋಗುವ ಬೆದರಿಕೆ ಒಡ್ಡುವ ಪ್ರಕ್ರಿಯೆಯೂ ಶುರುವಾಗಲಿದೆ!. ಆದರೆ ಒಬ್ಬ ಹಿರಿಯ ರಾಜಕಾರಣಿಗೆ ಸರಿಯಾಗಿ ಮಾನ್ಯತೆ ಕೊಡದ ಕಾರಣ ಕಾಂಗ್ರೆಸ್ ಇದೀಗ ಒಬ್ಬ ಪ್ರಭಾವಿ ಹಿಂದುಳಿದ ವರ್ಗದ ನಾಯಕನನ್ನು ಕಳೆದುಕೊಂಡಿದೆ.
ನಿನ್ನೆ ನವದೆಹಲಿಯ ಭಾರತೀಯ ಜನತಾ ಪಾರ್ಟಿಯ ಕೇಂದ್ರ ಕಚೇರಿಯಲ್ಲಿ, ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರ ಸಮ್ಮುಖದಲ್ಲಿ, ಉತ್ತರ ಕರ್ನಾಟಕದ ಪ್ರಭಾವಿ ಮುಖಂಡರು, ಆರು ಬಾರಿ ಶಾಸಕಾಗಿ ಆಯ್ಕೆಯಾಗಿ, ಮಾಜಿ ಸಚಿವರಾಗಿ ಸೇವೆ ಸಲ್ಲಿಸಿರುವ ಹಿಂದುಳಿದ ವರ್ಗಗಳ ನಾಯಕ, ಲೋಕಸಭೆಯಲ್ಲಿ ಕಾ0ಗ್ರೆಸ್ ಪಕ್ಷದ ನಾಯಕ ಶ್ರೀ ಮಲ್ಲಿಕಾರ್ಜುನ ಖರ್ಗೆಯವರ ಕ್ಷೇತ್ರದ ವ್ಯಾಪ್ತಿಯ ಅಫ್ಝಲ್ ಪುರದ ಶಾಸಕರಾಗಿದ್ದ ಮಾಲೀಕಯ್ಯ ಗುತ್ತೇದಾರ್ ಮತ್ತು ಯಾದಗಿರಿ ನಗರಸಭೆಯ ಅಧ್ಯಕ್ಷೆ ಲಲಿತಾ ಅಂಪುರ್ ರವರು ಬಿಜೆಪಿಗೆ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ, ಕೇಂದ್ರ ಸಚಿವ ಅನಂತಕುಮಾರ್, ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಮುರಳೀಧರ್ ರಾವ್, ಸಂಸತ್ ಸದಸ್ಯರಾದ ಶ್ರೀ ಶ್ರೀರಾಮುಲು ಮೊದಲಾದ ನಾಯಕರು ಉಪಸ್ಥಿತರಿದ್ದರು.