ಮಾದಕ ವಸ್ತುಗಳ ದಂಧೆಯಲ್ಲಿ ಪಾಲ್ಗೊಂಡಿದ್ದರೆ ನನ್ನನ್ನು ನೇಣಿಗೇರಿಸಲಿ: ಶಾಸಕ ಜಮೀರ್ ಅಹ್ಮದ್
ನ್ಯೂಸ್ ಕನ್ನಡ ವರದಿ: ನಾನು ಜೆಡಿಎಸ್ ಪಕ್ಷದಲ್ಲಿದ್ದ ಸಂದರ್ಭದಲ್ಲಿ ಕೊಲಂಬೊಗೆ ಹೋಗಿದ್ದು ನಿಜ. ಆದರೆ, ಪ್ರಶಾಂತ್ ಸಂಬರಗಿ ಮಾಡುತ್ತಿರುವ ಆರೋಪದಂತೆ ನಟಿ ಸಂಜನಾ ಜತೆ ನಾನು ಹೋಗಿಲ್ಲ. ಶ್ರೀಲಂಕಾದ ಕೊಲಂಬೊಗೆ ಎಲ್ಲರೂ ಹೋಗುತ್ತಾರೆ. ನಾನು ಪ್ರತಿವರ್ಷವೂ ಹೋಗುತ್ತೇನೆ. ಎಚ್.ಡಿ.ಕುಮಾರಸ್ವಾಮಿ ಅವರ ಜತೆಯೂ ಕೊಲಂಬೊಗೆ ಹೋಗಿದ್ದೆ. 26 ಶಾಸಕರು ಕೊಲಂಬೊಗೆ ಹೋಗಿದ್ದೆವು. ಇನ್ನು ಕ್ಯಾಸಿನೋ ಕಾನೂನು ಬಾಹಿರವೇನೂ ಅಲ್ಲ. ಹಾಗಂತ ಕೇಂದ್ರ ಸರಕಾರ ಹೇಳಿದೆಯೇ? ಎಂದು ಜಮೀರ್ ಅಹ್ಮದ್ ಖಾನ್ ಹೇಳಿದರು.
ಮಾದಕ ವಸ್ತುಗಳ(ಡ್ರಗ್ಸ್) ಜಾಲದ ಜತೆ ನನಗೆ ಯಾವುದೇ ರೀತಿಯ ನಂಟು ಇಲ್ಲ. ನನಗೆ ಡ್ರಗ್ಸ್ ಮಾಫಿಯಾ ನಂಟಿದೆ ಎಂಬುದಾದರೆ ನನ್ನನ್ನು ಗಲ್ಲಿಗೇರಿಸಲಿ. ಡ್ರಗ್ಸ್ ದಂಧೆಯಲ್ಲಿ ಪಾಲ್ಗೊಂಡಿರುವ ಬಗ್ಗೆ ಸಾಬೀತುಪಡಿಸಿದರೆ ನನ್ನನ್ನು ನೇಣಿಗೇರಿಸಿ ಎಂದು ನಾನೇ ನ್ಯಾಯಾಧೀಶರಿಗೆ ಬರೆದುಕೊಡುತ್ತೇನೆ. ಈ ಕೃತ್ಯದಲ್ಲಿ ಜನಪ್ರತಿನಿಧಿಯಾಗಿ ಆಯ್ಕೆಯಾದವರು ಇಂತಹ ಕೆಲಸದಲ್ಲಿದ್ದರೆ ಅವರಿಗೆ ಗಲ್ಲುಶಿಕ್ಷೆಯಾಗಬೇಕು ಎಂದು ಜಮೀರ್ ಅಹ್ಮದ್ ಖಾನ್ ಒತ್ತಾಯ ಮಾಡಿದರು.