ಟ್ವೀಟ್ ಮೂಲಕ ಕಂಗನಾ ರಣಾವತ್ ಗೆ ಟಾಂಗ್ ನೀಡಿದ ನಟ ಪ್ರಕಾಶ್ ರೈ!
ನ್ಯೂಸ್ ಕನ್ನಡ ವರದಿ: ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ
ನಟಿ ಕಂಗನಾ ರಣಾವತ್ ಭಾರಿ ಸುದ್ದಿಯಲ್ಲಿದ್ದಾರೆ. ಬಾಲಿವುಡ್ನ ಅನೇಕರ ವಿರೋಧ ಕಟ್ಟಿಕೊಂಡಿದ್ದಾರೆ. ಸದ್ಯ ಮಹಾರಾಷ್ಟ್ರ ಸರ್ಕಾರ ಹಾಗೂ ಕಂಗನಾ ನಡುವೆ ಸಮರ ಶುರುವಾಗಿದೆ. ಈ ಮಧ್ಯೆ ಬಹುಭಾಷಾ ನಟ ಪ್ರಕಾಶ್ ರೈ, ಒಂದು ಮೀಮ್ ಅನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡು, ಕಂಗನಾಗೆ ಟಾಂಗ್ ನೀಡಿದ್ದಾರೆ.

ಝಾನ್ಸಿ ರಾಣಿ ಲಕ್ಷ್ಮೀಬಾಯಿ ಜೀವನವನ್ನು ಆಧರಿಸಿದ ‘ಮಣಿಕರ್ಣಿಕಾ’ ಸಿನಿಮಾವನ್ನು ಕಂಗನಾ ಮಾಡಿದ್ದರು. ಬಹುಶಃ ಆದ್ದರಿಂದಲೇ ಅವರು ಲಕ್ಷ್ಮೀಬಾಯಿ ಆಗಿಬಿಟ್ಟರೇ ಎಂದು ಪ್ರಶ್ನೆ ಮಾಡುವಂತಹ ಪೋಸ್ಟ್ ಇದಾಗಿದೆ. ‘ಒಂದು ಸಿನಿಮಾ ಮಾಡಿ ಕಂಗನಾ, ತಾನು ಲಕ್ಷ್ಮೀ ಬಾಯಿ ಎಂದುಕೊಂಡರೇ..? ಹಾಗಾದರೆ, ದೀಪಿಕಾ ಪಡುಕೋಣೆ ಅವರು ಪದ್ಮಾವತ್, ಹೃತಿಕ್ ರೋಷನ್ ಅವರು ಅಕ್ಬರ್, ಶಾರುಖ್ ಖಾನ್ ಅವರು ಅಶೋಕ, ಅಜಯ್ ದೇವ್ಗನ್ ಅವರು ಭಗತ್ ಸಿಂಗ್, ಆಮೀರ್ ಖಾನ್ ಅವರು ಮಂಗಲ್ ಪಾಂಡೇ, ವಿವೇಕ್ ಓಬೆರಾಯ್ ಅವರು ನರೇಂದ್ರ ಮೋದಿಯೇ…’ ಎಂದು ಟ್ವೀಟ್ ಮಾಡಿರುವ ಪ್ರಕಾಶ್ ರೈ, ಎಂದಿನ #justasking ಹ್ಯಾಷ್ಟ್ಯಾಗ್ ಹಾಕಿದ್ದಾರೆ.
