ಭ್ರಷ್ಟಾಚಾರ ವಿರೋಧದ ಅಣ್ಣಾ ಹಜಾರೆ ಹೋರಾಟದ ಹಿಂದೆ ಆರೆಸ್ಸೆಸ್ ಇತ್ತು: ಪ್ರಶಾಂತ್ ಭೂಷಣ್
ನ್ಯೂಸ್ ಕನ್ನಡ ವರದಿ: ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಲು ಯಶಸ್ವಿಯಾಗಿದ್ದ ಅಣ್ಣಾ ಹಝಾರೆ ಹಾಗೂ ಅರವಿಂದ ಕೇಜ್ರಿವಾಲ್ ನೇತೃತ್ವದಲ್ಲಿ ನಡೆದಿದ್ದ ಭ್ರಷ್ಟಾಚಾರ ವಿರೋಧಿ ಚಳವಳಿಯ ಹಿಂದೆ ಆರೆಸ್ಸೆಸ್ ಬೆಂಬಲ ಇತ್ತು ಎಂದು ಖ್ಯಾತ ನ್ಯಾಯವಾದಿ, ಸಾಮಾಜಿಕ ಹೋರಾಟಗಾರ ಪ್ರಶಾಂತ್ ಭೂಷಣ್ ಸ್ಪೋಟಕ ಮಾಹಿತಿ ಬಹಿರಂಗ ಮಾಡಿದ್ದಾರೆ.

ಈಗಿನ ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನೀತಿನಿಷ್ಠೆಗಳಿಲ್ಲದ ನಿರ್ಲಜ್ಜ ಪ್ರವೃತ್ತಿಯನ್ನು ತಿಳಿದುಕೊಳ್ಳಲು ತನಗೆ ಸಾಧ್ಯವಾಗದೆ ಹೋಗಿದ್ದು ಬೇಸರದ ಸಂಗತಿ, ಭ್ರಷ್ಟಾಚಾರದ ವಿರುದ್ಧ ಅಭಿಯಾನದಲ್ಲಿ ಪಾಲ್ಗೊಂಡಿದ್ದಕ್ಕಾಗಿ ನನಗೆ ಬೇಸರವಿಲ್ಲ. ಆದರೆ ಎರಡು ವಿಷಯಗಳಿಗಾಗಿ ನನಗೆ ಪಶ್ಚಾತ್ತಾಪವಾಗುತ್ತಿದೆ. ಒಂದನೆಯದಾಗಿ ಈ ಚಳವಳಿಯನ್ನು ಬಿಜೆಪಿ ಹಾಗೂ ಆರೆಸ್ಸೆಸ್ ದೊಡ್ಡ ಮಟ್ಟದಲ್ಲಿ ಬೆಂಬಲಿಸಿತ್ತು ಹಾಗೂ ಅದನ್ನು ಮುಂದಕ್ಕೊಯ್ದಿತ್ತು. ಕಾಂಗ್ರೆಸ್ ಸರಕಾರವನ್ನು ಅಧಿಕಾರದಿಂದ ಇಳಿಸುವ ಹಾಗೂ ತಾವು ಅಧಿಕಾರಕ್ಕೇರುವುದು ಅವುಗಳ ರಾಜಕೀಯ ಉದ್ದೇಶವಾಗಿತ್ತು’’ ಎಂದು ಅವರು ಹೇಳಿದ್ದಾರೆ.

ಆರೆಸ್ಸೆಸ್ನ ಕಾಣದ ಕೈ ಇರುವ ಬಗ್ಗೆ ಬಹುಶಃ ಅಣ್ಣಾ ಹಝಾರೆ ಅವರಿಗೆ ತಿಳಿದಿರಲಾರದು. ಆದರೆ ಅರವಿಂದ್ ಕೇಜ್ರಿವಾಲ್ ಅವರಿಗೆ ಅದು ತಿಳಿದಿತ್ತು. ಭ್ರಷ್ಟಾಚಾರ ವಿರೋಧಿ ಅಭಿಯಾನದ ಸಂದರ್ಭದಲ್ಲಿ ತನಗೆ ಕೇಜ್ರಿವಾಲ್ ಬಗ್ಗೆ ಅಪಾರವಾದ ಮೆಚ್ಚುಗೆಯಿತ್ತು. ಆದರೆ ಅವರ ಉದ್ದೇಶವು ನೀತಿನಿಷ್ಠೆಯಿಂದ ಕೂಡಿದೆಯೇ ಎಂಬುದನ್ನು ತಾನು ಆಗ ವಿಮರ್ಶಾತ್ಮಕ ದೃಷ್ಟಿಯಿಂದ ನೋಡಿರಲಿಲ್ಲವೆಂದು ಭೂಷಣ್ ಹೇಳಿದ್ದಾರೆ.