ಹಿಂದಿಯನ್ನು ತೃತೀಯ ಭಾಷೆಯಾಗಿ ಸೇರಿಸಿ ಮುಂದೆ ಕನ್ನಡವನ್ನು ಹೊರದಬ್ಬುವ ಹುನ್ನಾರವೆಂಬುದು ಸಾಬೀತಾಗಿದೆ!: ಕನ್ನಡ ಚಿತ್ರರಂಗ ನಿರ್ದೇಶಕ ಕವಿ ರಾಜ್
ನ್ಯೂಸ್ ಕನ್ನಡ ವರದಿ: ನಾನು ಎಲ್ಲಾ ಭಾಷೆಗಳನ್ನು ಗೌರವಿಸುತ್ತೇನೆ.ಯಾವ ಭಾಷೆಯನ್ನು ದ್ವೇಷಿಸುವುದಿಲ್ಲ.ನಾನು ಹಿಂದಿ ಹಾಡು,ಘಜಲ್ ಗಳನ್ನು ಇಷ್ಟ ಪಟ್ಟು ಕೇಳುತ್ತೇನೆ.ಹಿಂದಿ ಅಷ್ಟೇ ಅಲ್ಲಾ ಮಲೆಯಾಳಂ,ತಮಿಳು ಮುಂತಾದ ಭಾಷೆಗಳ ಒಳ್ಳೆ ಸಿನಿಮಾಗಳನ್ನು ನೋಡುತ್ತೇನೆ. ಅದು ನನ್ನ ಆಯ್ಕೆ. ಆದರೆ ನನ್ನ ಕನ್ನಡ ನಾಡಿನ ರಸ್ತೆ, ರೈಲ್ವೇ ಫಲಕ ಸರ್ಕಾರಿ ಕಛೇರಿ, ಸರ್ಕಾರಿ ಯೋಜನೆಗಳು,ಸರ್ಕಾರಿ ಪ್ರಕಟಣೆಯಲ್ಲಿ ಹಿಂದಿಯನ್ನು ತೂರಿಸಿದರೆ ಅದು ಹೇರಿಕೆ.
ಕನ್ನಡ ನಾಡಿನಲ್ಲಿ ಕನ್ನಡ ಭಾಷೆಗೆ ಪ್ರಮುಖ ಸ್ಥಾನ ಇರಬೇಕು.ಜೊತೆಗೆ ನಮ್ಮ ಸಂವಿಧಾನ ಅನುಸಾರವಾಗಿ ಒಪ್ಪಿಕೊಂಡಿರುವ ಒಂದು ಸಂಪರ್ಕ ಭಾಷೆಯಾಗಿ ಇಂಗ್ಲೀಷ್ ಇರಬಹುದು. ಅದರೊಂದಿಗೆ ಇನ್ನೊಂದು ಭಾಷೆ ಇದ್ದರೆ ಏನಾಗುತ್ತದೆ ? ಎಂದು ಹಿಂದಿಯನ್ನು ತೂರಿಸಿದರೆ ಅದು ಹೇರಿಕೆಯಾಗುತ್ತದೆ. ಹಿಂದಿ ನಮ್ಮ ದೇಶದಲ್ಲಿ ರಾಜಕೀಯ , ವ್ಯಾವಹಾರಿಕ, ಆರ್ಥಿಕವಾಗಿ ಬಲಾಢ್ಯ ಬೆಂಬಲವಿರುವ ಭಾಷೆ . ಇಂದು ಮೂರನೆಯ ಭಾಷೆಯಾಗಿ ಸೇರಿಕೊಂಡು ಮುಂದಿನ ದಿನಗಳಲ್ಲಿ ಕನ್ನಡವನ್ನು ಹೊರದಬ್ಬುವುದು ಅದರ ಹುನ್ನಾರವೆಂಬುದು ಬ್ಯಾಂಕ್ ಚೆಕ್, ಪಾಸ್ ಪುಸ್ತಕ ಮತ್ತು ಇತ್ತೀಚಿನ ಬ್ಯಾಂಕ್ ಆಫ್ ಬರೋಡಾ ಬೋರ್ಡ್ ಸೇರಿದಂತೆ ಹತ್ತು ಹಲವು ನಿದರ್ಶನಗಳ ಮೂಲಕ ಸಾಬೀತಾಗಿದೆ. ಈಗಾಗಲೇ ಹಳ್ಳಿಹಳ್ಳಿಗಳ ಬ್ಯಾಂಕಿನ ತುಂಬಾ ಕನ್ನಡ ಬಾರದ ಹಿಂದಿ ಭಾಷಿಕ ನೌಕರರನ್ನು ತುಂಬಿಸಿ ಕೇವಲ ಕನ್ನಡ ಬಲ್ಲ ಗ್ರಾಮೀಣ ಜನರಿಗೆ ಬ್ಯಾಂಕ್ ವ್ಯವಹಾರಗಳಲ್ಲಿ ಸಾಕಷ್ಟು ತೊಡಕುಂಟಾಗುತ್ತಿದೆ.
‘ವಿವಿಧತೆಯಲ್ಲಿ ಏಕತೆ’ ಎಂಬ ಉದಾತ್ತ ಧ್ಯೇಯದ ಅಡಿಪಾಯದ ಮೇಲೆ ಕಟ್ಟಿದ ಈ ದೇಶದಲ್ಲಿ ಉತ್ತರ ಭಾರತೀಯರ ವ್ಯಾವಹಾರಿಕ ಹಿತಾಸಕ್ತಿಯನ್ನು ಪೊರೆಯಲು ‘ವಿವಿಧತೆಯನ್ನು ಕೊಂದು ಏಕತೆ’ ಎಂಬ ಕುತಂತ್ರದಿಂದ ‘ಒಂದು ದೇಶ ಒಂದು ಭಾಷೆ’ ಎಂಬ ಗುರಿ ಸಾಧಿಸಲು ವಿವಿಧ ಸ್ತರಗಳಲ್ಲಿ ಹಿಂದಿ ಹೇರಿಕೆಯು ಸ್ವಾತಂತ್ರ್ಯಾನಂತರ ನಡೆಯುತ್ತಲೇ ಬಂದಿದೆ. ಹಾಗೇ ಅದರ ವಿರುದ್ಧ ಪ್ರತಿಭಟನೆ ಕೂಡಾ ಕೇವಲ ಇಂದಿನದಲ್ಲ. ಅದಕ್ಕೂ ಕೂಡಾ ಅಷ್ಟೇ ದೊಡ್ಡ ಇತಿಹಾಸವಿದೆ. ಇದು ಕೇವಲ ಇಂದಿನ ಸರ್ಕಾರ ಅಥವಾ ತಮ್ಮ ಪಕ್ಷದ ವಿರುದ್ಧದ ಪ್ರತಿಭಟನೆ ಎಂದು ಕೊಂಡು ಭಿನ್ನರಾಗ ಎಳೆಯುವವರ ಇತಿಹಾಸದ ಸಾಮಾನ್ಯ ಜ್ಞಾನದ ಬಗ್ಗೆ ವಿಷಾದವಿದೆ.
ಹಿಂದಿಯನ್ನು ಮಾತ್ರ ಏಕೆ ವಿರೋಧಿಸುತ್ತೀರಿ ಉರ್ದು , ತಮಿಳು, ತೆಲುಗು , ಮಲಯಾಳಂ ವಿರೋಧಿಸಿ ಎನ್ನುವವರಿಗೆ ಈ ಯಾವ ಭಾಷೆಗಳನ್ನು ಸರ್ಕಾರಿ ಪ್ರಾಯೋಜಕತ್ವದಲ್ಲಿ ನಮ್ಮ ಮೇಲೆ ಹೇರಲಾಗುತ್ತಿಲ್ಲ. ಬೇರೆ ಭಾಷೆಗಳ ರಾಜ್ಯದ ತೆರಿಗೆಯಲ್ಲಿ ಹಿಂದಿಯನ್ನು ಮೆರೆಸುವ ಮಲತಾಯಿ ಧೋರಣೆಯ ಹಿಂದಿ ದಿವಸಕ್ಕೆ ನನ್ನ ವಿರೋಧವಿದೆ. ಹಿಂದಿ ಹೇರಿಕೆಗೆ ನನ್ನ ವಿರೋಧವಿದೆ