ಸುದರ್ಶನ್ ಟಿವಿಯ ‘UPSC ಜಿಹಾದ್’ ಶೋಗೆ ತಡೆ ನೀಡಿದ ಸುಪ್ರೀಂಕೋರ್ಟ್ ಹೇಳಿದ್ದೇನು ಗೊತ್ತೇ?
ನ್ಯೂಸ್ ಕನ್ನಡ ವರದಿ: ಸುದರ್ಶನ್ ಟಿವಿಯ ‘ಯುಪಿಎಸ್ಸಿ ಜಿಹಾದ್’ ಶೋ ಪ್ರಸಾರಕ್ಕೆ ತಡೆ ಹೇರಬೇಕೆಂದು ಏಳು ಮಂದಿ ಮಾಜಿ ಐಎಎಸ್ ಅಧಿಕಾರಿಗಳು ಸೋಮವಾರ ಸಲ್ಲಿಸಿದ್ದ ಅಪೀಲಿನ ಕುರಿತಂತೆ ಇಂದು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಸುದರ್ಶನ್ ಟಿವಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ.

ಆಡಳಿತಾತ್ಮಕ ಸೇವೆಗಳಲ್ಲಿ ‘ಮುಸ್ಲಿಮರ ಒಳನುಸುಳುವಿಕೆ’ಯ ಹಿಂದಿನ ಸಂಚನ್ನು ಬಯಲಿಗೆಳೆಯುವ ಕಾರ್ಯಕ್ರಮ ಎಂಬ ಹಣೆಪಟ್ಟಿ ಹೊತ್ತ ಈ ಕಾರ್ಯಕ್ರಮ ಕಪಟ ಮತ್ತು ಉನ್ಮತ್ತ ಎಂದು ಹೇಳಿದ ಸುಪ್ರೀಂಕೋರ್ಟ್, ಇಂತಹ ಕಾರ್ಯಕ್ರಮ ದೇಶಕ್ಕೆ ದೊಡ್ಡ ಕೆಡುಕನ್ನು ಉಂಟು ಮಾಡಬಹುದು ಎಂದು ಇನ್ನು ಮುಂದಿನ ಎಪಿಸೋಡು ಪ್ರಸಾರ ಮಾಡದಂತೆ ತಡೆ ನೀಡಿದೆ.
ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರ ನೇತೃತ್ವದ ನ್ಯಾಯಪೀಠ, ಭಾರತದಲ್ಲಿ ಇಲೆಕ್ಟ್ರಾನಿಕ್ ಮಾಧ್ಯಮ ಬಹಳಷ್ಟು ವಿಸ್ತಾರವಾದ ಜನಸಂಖ್ಯೆಯನ್ನು ತಲುಪಿರುವುದರಿಂದ ಇಂತಹ ಕಾರ್ಯಕ್ರಮ ಕೆಲವು ನಿರ್ದಿಷ್ಟ ಸಮುದಾಯಗಳನ್ನು ಟಾರ್ಗೆಟ್ ಮಾಡಿ ದೇಶವನ್ನು ಅಸ್ಥಿರಗೊಳಿಸಲು ಕಾರಣವಾಗಬಹುದು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.