ನೆಹರೂ- ಗಾಂಧಿ ಕುಟುಂಬದ ಕುರಿತ ಹೇಳಿಕೆಗೆ ಅನುರಾಗ್ ಠಾಕೂರ್ ವಿಷಾದ! ಹೇಳಿದ್ದೇನು? ಓದಿ..
ನ್ಯೂಸ್ ಕನ್ನಡ ವರದಿ: ವಿವಾದಾತ್ಮಕ ಹೇಳಿಕೆ ನೀಡಿ ಸದಾ ಸುದ್ದಿಯಲ್ಲಿರುವ ಕೇಂದ್ರ ಸಚಿವ ಅನುರಾಗ್ ಠಾಕೂರ್ ಈ ಬಾರಿ ಮತ್ತೊಮ್ಮೆ ವಿವಾದದ ಕೇಂದ್ರಬಿಂದು ಆದರು. ಅನುರಾಗ್ ಠಾಕೂರ್ ನೆಹರೂ-ಗಾಂಧಿ ಕುಟುಂಬದ ಬಗ್ಗೆ ನೀಡಿದ ಹೇಳಿಕೆಗೆ ಲೋಕಸಭೆಯಲ್ಲೇ ವಿಷಾದ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರದ ಪಿಎಂ ಕೇರ್ ಫಂಡ್ ಪರವಾಗಿ ಬ್ಯಾಟಿಂಗ್ ನಡೆಸಿದ ಅನುರಾಗ್ ಠಾಕೂರ್ ಶತಾಯ ಗತಾಯ ಪಿಎಂ ಕೇರ್ ಫಂಡ್ ಬೆಂಬಲಿಸಿ ಮಾತನಾಡುವ ಭರದಲ್ಲಿ ಇಕ್ಕಟ್ಟಿಗೆ ಸಿಲುಕಿಕೊಂಡರು. “ಹೈಕೋರ್ಟ್, ಸುಪ್ರೀಂ ಕೋರ್ಟ್, ಪ್ರತಿಯೊಬ್ಬ ಭಾರತೀಯರೂ ಪಿಎಂ ಕೇರ್ಸ್ ಗೆ ಮಾನ್ಯತೆ ನೀಡಿದ್ದಾರೆ. ಮಕ್ಕಳಿಂದ ಹಿಡಿದು ಎಲ್ಲರೂ ಪಿಎಂ ಕೇರ್ಸ್ ಗೆ ದೇಣಿಗೆಗಳನ್ನು ಸಲ್ಲಿಸಿದ್ದಾರೆ. ನೀವು ಪಿಎಂ ಕೇರ್ಸ್ ಬಗ್ಗೆ ಮಾತನಾಡುವುದಾದರೆ ,1948ರಲ್ಲಿ ನೆಹರೂ ಜಿ ಸ್ಥಾಪಿಸಿದ್ದ ಪಿಎಂ ನ್ಯಾಶನಲ್ ರಿಲೀಫ್ ಫಂಡ್ ಬಗ್ಗೆಯೂ ನೋಡಿ. 1948ರಿಂದ ಇಂದಿನವರೆಗೆ ಅದು ಇನ್ನೂ ನೋಂದಣಿಯಾಗಿಲ್ಲ. ಹಾಗಾದರೆ ಅದಕ್ಕೆ ವಿದೇಶಿ ದೇಣಿಗೆಯ ಕ್ಲಿಯರೆನ್ಸ್ ಸಿಗುವುದು ಹೇಗೆ? ಎಂದು ಅನುರಾಗ್ ಪ್ರಶ್ನಿಸಿದರು.

ಅಲ್ಲದೇ ‘ಪಿಎಂ ಕೇರ್ ಈಗಾಗಲೇ ನೋಂದಣಿಯಾಗಿದೆ. ಇದು 130 ಕೋಟಿ ಜನರಿಗಾಗಿ ಇರುವುದು. ನೀವು ಟ್ರಸ್ಟ್ ರಚಿಸಿದ್ದು ಗಾಂಧಿ ಕುಟುಂಬಕ್ಕಾಗಿ. ನೆಹರೂ, ಸೋನಿಯಾ ಗಾಂಧಿ ಪಿಎಂ ನ್ಯಾಶನಲ್ ರಿಲೀಫ್ ಫಂಡ್ ನ ಸದಸ್ಯರಾಗಿದ್ದರು. ಈ ಬಗ್ಗೆ ತನಿಖೆಯಾಗಬೇಕು’ ಎಂದು ಹೇಳಿದಾಗ ಠಾಕೂರ್, ಅವರ ಈ ಹೇಳಿಕೆ ವಿರುದ್ಧ ವಿಪಕ್ಷಗಳ ಸಂಸದರು ಭಾರೀ ಆಕ್ರೋಶ ವ್ಯಕ್ತಪಡಿಸಿದರು. “ಈ ಹಿಮಾಚಲದ ಹುಡುಗ ಯಾರು?, ಈ ಚರ್ಚೆಯಲ್ಲಿ ನೆಹರೂ ಬಂದದ್ದು ಹೇಗೆ?, ನಾವು ಪ್ರಧಾನಿ ಮೋದಿಯವರ ಹೆಸರನ್ನು ಹೇಳಿದ್ದೇವೆಯೇ?” ಎಂದು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಆಕ್ರೋಶ ವ್ಯಕ್ತಪಡಿಸಿದರು. ಸಂಸತ್ತಿನಲ್ಲಿದ್ದ ಕಾಂಗ್ರೆಸ್ ನಾಯಕರು, ‘ಗೋಲಿ ಮಾರೋ ಮಂತ್ರಿ ರಾಜೀನಾಮೆ ನೀಡಲಿ” ಎಂದು ಘೋಷಣೆಗಳನ್ನು ಕೂಗಿದರು.
ಈ ಗದ್ದಲದ ನಂತರ ಸಂಜೆ 6 ಗಂಟೆಗೆ ಮತ್ತೆ ಕಲಾಪ ಆರಂಭವಾದಾಗ ಮಾತನಾಡಿದ ಅನುರಾಗ್ ಠಾಕೂರ್, ಯಾರಿಗೂ ನೋವುಂಟು ಮಾಡುವ ಉದ್ದೇಶ ಇರಲಿಲ್ಲ. “ನಾನು ಯಾರಿಗಾದರೂ ನೋವುಂಟು ಮಾಡಿದ್ದರೆ ವಿಷಾದಿಸುತ್ತೇನೆ” ಎಂದು ಅನುರಾಗ್ ಠಾಕೂರ್ ಹೇಳಿ ವಿವಾದಕ್ಕೆ ಅಂತ್ಯ ಹಾಡಲು ಯತ್ನಿಸಿದರು.