ಕೇಂದ್ರ ಸರ್ಕಾರದ ಜಿಎಸ್ಟಿ, ಕ್ಯಾಷ್‌ಲೆಸ್‌, ಮೇಕಿನ್‌ ಇಂಡಿಯಾ ಸಂಪೂರ್ಣ ವಿಫಲ!: ದೇವೇಗೌಡ

ನ್ಯೂಸ್ ಕನ್ನಡ ವರದಿ: ರಾಜ್ಯದಲ್ಲಿ ಚುನಾವಣೆ ಹತ್ತಿರ ಬಂದಿದೆ. ಹೇಗಾದರೂ ಮಾಡಿ ಮತ್ತೊಮ್ಮೆ ಅಧಿಕಾರಕ್ಕೆ ಬರುವ ಉದ್ದೇಶದಿಂದ ಎರಡು ರಾಷ್ಟ್ರೀಯ ಪಕ್ಷಗಳು ತಮ್ಮದೇ ಶೈಲಿಯಲ್ಲಿ ಅಬ್ಬರದ ಪ್ರಚಾರದಲ್ಲಿ ತೊಡಗಿದ್ದರೆ ಇತ್ತ ಪ್ರಾದೇಶಿಕ ಪಕ್ಷ ಜೆಡಿಎಸ್ ಬಿಎಸ್ಪಿ ಜೊತೆಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡು ಬೃಹತ್ ಸಮಾವೇಶ ಆಯೋಜಿಸಿ ತಮ್ಮ ಶಕ್ತಿ ಪ್ರದರ್ಶನ ನಡೆಸಿದೆ.

ಈ ಬಾರಿ ಅಧಿಕಾರಕ್ಕೆ ಬರಬೇಕು ಇಲ್ಲದಿದ್ದರೆ ಕಿಂಗ್ ಮೇಕರ್ ಆದರೂ ಆಗಬೇಕು ಎಂದು ರಾಜಕೀಯ ಲೆಕ್ಕಾಚಾರದಲ್ಲಿ ತೊಡಗಿರುವ ಜಾತ್ಯಾತೀತ ಜನತಾದಳದ ವರಿಷ್ಠ ನಾಯಕ ದೇವೇಗೌಡ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಗದು ರಹಿತ ವ್ಯವಹಾರವನ್ನು ಕಾರ್ಯರೂಪಕ್ಕೆ ತರಲು ಸಾಧ್ಯವಾಗಿಲ್ಲ ಹಾಗೂ ಮೇಕ್‌ ಇನ್‌ ಇಂಡಿಯಾ ಕೂಡ ಯಶಸ್ವಿಯಾಗಲಿಲ್ಲ ಎಂದು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

ಕೇಂದ್ರ ಸರ್ಕಾರವು ಜಿಎಸ್‌ಟಿಯನ್ನು ಜಾರಿಗೊಳಿಸಿದೆ. ಇದರಿಂದ ಜನಸಾಮಾನ್ಯರಿಗೆ ಯಾವುದೇ ಪ್ರಯೋಜನವಾಗಲಿಲ್ಲ. ಬದಲಿಗೆ ಸಮಸ್ಯೆಗೆ ಸಿಲುಕುವಂತಾಯಿತು. ವ್ಯಾಪಾರಸ್ಥರು ಸಾಕಷ್ಟುತೊಂದರೆ ಅನುಭವಿಸುವಂತಾಗಿದೆ. ಇದು ಕೇಂದ್ರ ಸರ್ಕಾರಕ್ಕೆ ಈಗ ಮನವರಿಕೆಯಾಗಿದೆ ಎಂದು ಲೇವಡಿ ಮಾಡಿದರು.

ರಾಷ್ಟ್ರದಲ್ಲಿ ನಗದು ರಹಿತ ವ್ಯವಹಾರ ಜಾರಿಗೊಳಿಸುವ ಭರವಸೆಯನ್ನು ಕೇಂದ್ರ ಸರ್ಕಾರ ನೀಡಿತ್ತು. ಆದರೆ ಅದು ವಿಫಲವಾಯಿತು. ನಗದು ರಹಿತ ವ್ಯವಹಾರ ಕಾರ್ಯರೂಪಕ್ಕೆ ತರುವಲ್ಲಿ ಎಡವಿತು. ಪರಿಣಾಮ ಕಾರ್ಯಕ್ರಮ ಅನುಷ್ಠಾನಗೊಳಿಸಲು ಸಾಧ್ಯವಾಗಲಿಲ್ಲ. ಇನ್ನು ಮೇಕ್‌ ಇನ್‌ ಇಂಡಿಯಾದ ಬಗ್ಗೆ ಕೇವಲ ಹೇಳಿಕೆ ನೀಡಿದ್ದೆ ಬಂತೇ ಹೊರತು ನಿರೀಕ್ಷಿತಮಟ್ಟದಲ್ಲಿ ಯಶಸ್ವಿಯಾಗಲಿಲ್ಲ ಎಂದರು.

Leave a Reply

Your email address will not be published. Required fields are marked *