ಟ್ವಿಟರ್ ನಲ್ಲಿ ಓಟಿಂಗ್ ನಡೆಸಿ, ಸೋತು ಟ್ವೀಟ್ ಡಿಲೀಟ್ ಮಾಡಿ ಟ್ರೋಲ್ ಆದ ರಿಪಬ್ಲಿಕ್ ಭಾರತ್!
ನ್ಯೂಸ್ ಕನ್ನಡ ವರದಿ: ಸುಶಾಂತ್ ಅಸಹಜ ಸಾವಿನ ನಂತರ ಬಹಳಷ್ಟು ಸುದ್ದಿಯಲ್ಲಿರುವ ಅರ್ನಾಬ್ ಗೋಸ್ವಾಮಿ ನೇತೃತ್ವದ ರಿಪಬ್ಲಿಕ್ ಟಿವಿ ಮಹಾರಾಷ್ಟ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ ಶಿವಸೇನೆಯ ಕೆಂಗಣ್ಣಿಗೆ ಗುರಿಯಾಗಿತ್ತು. ಮಹಾರಾಷ್ಟ್ರ ಸರಕಾರವು ರಿಪಬ್ಲಿಕ್ ಟಿವಿ ಸಮಾಜದ ಸ್ವಾಸ್ಥ್ಯ ಕದಡುತ್ತೆ ಎಂದು ಅದರ ಪ್ರಸಾರದ ವಿರುದ್ಧ ಕ್ರಮ ಕೈಗೊಳ್ಳುವ ಮುನ್ಸೂಚನೆಯೂ ನೀಡಿತ್ತು. ಇದೀಗ ಆ ಕುರಿತು ಟ್ವಿಟರ್ ನಲ್ಲಿ ಟ್ವಿಟರ್ ಪೋಲ್ ನಡೆಸಿ ನಗೆಪಾಟಲಿಗೆ ಈಡಾಗಿದೆ.
ಟ್ವಿಟರ್ ಪೋಲ್ ನ ಫಲಿತಾಂಶ ತನಗೆ ಅನುಕೂಲಕರವಾದ ಬಂದಿಲ್ಲ ಎಂಬ ಕಾರಣಕ್ಕೆ ಅರ್ನಬ್ ಗೋಸ್ವಾಮಿ ಶುಕ್ರವಾರ ಡಿಲೀಟ್ ಮಾಡಿ ಟ್ವಿಟರಿಗರಿಂದ ಟ್ರೋಲ್ ಆಗಿದ್ದಾರೆ. “ಪ್ರಶ್ನೆಗಳನ್ನು ಕೇಳದಂತೆ ಅರ್ನಬ್ ಗೋಸ್ವಾಮಿಯನ್ನು ತಡೆಯಬೇಕೆಂದು ಮಹಾರಾಷ್ಟ್ರ ಸರಕಾರ ಬಯಸಿದೆ. ಸತ್ಯದ ಅನ್ವೇಷಣೆಯಲ್ಲಿ ನೀವು ಅರ್ನಬ್ ಜತೆ ಇದ್ದೀರಾ?” ಎಂಬ ಪ್ರಶ್ನೆಯನ್ನು ಈ ಟ್ವಿಟರ್ ಪೋಲ್ ನಲ್ಲಿ ಕೇಳಲಾಗಿತ್ತು. ತಮ್ಮ ಪರವಾಗಿ ಪೋಲ್ ಫಲಿತಾಂಶ ಬರುವುದೆಂದು ನಿರೀಕ್ಷಿಸಿದ್ದರು.
ಆದರೆ ಆರಂಭಿಕ ಹಂತದಲ್ಲಿ ಹಲವರು ‘ಹೌದು’ ಎಂದು ಪ್ರತಿಕ್ರಿಯೆ ನೀಡಿದ್ದರೆ ನಂತರ ಫಲಿತಾಂಶದಲ್ಲಿ ‘ಹೌದು’ ಎಂದು ಹೇಳುವವರಿಗಿಂತ ‘ಇಲ್ಲ’ ಎಂದು ಹೇಳುವವರೇ ಅಧಿಕವಾದರಲ್ಲದೆ, ಅಂತಿಮವಾಗಿ ಶೇ 53ರಷ್ಟು ಮಂದಿ ‘ಇಲ್ಲ’ ಎಂದಿದ್ದರೆ ಉಳಿದವರು ‘ಹೌದು’ ಎಂದಿದ್ದರು. ಇದರಿಂದ ಮುಜುಗರಕ್ಕೆ ಒಳಗಾದ ಅರ್ನಾಬ್ ಗೋಸ್ವಾಮಿಯ ರಿಪಬ್ಲಿಕ್ ಭಾರತ್ ಟ್ವೀಟ್ ಡಿಲೀಟ್ ಮಾಡಿದೆ.