ದೀಪಿಕಾ ಡ್ರಗ್ಸ್ ನಶೆಯಲ್ಲಿ ಜೆಎನ್’ಯು ದೇಶ ವಿರೋಧಿಗಳ ಜೊತೆ ನಿಲ್ಲುತ್ತಿದ್ದರು!: ಬಿಜೆಪಿ ನಾಯಕ
ನ್ಯೂಸ್ ಕನ್ನಡ ವರದಿ: ಸುಶಾಂತ್ ಅಸಹಜ ಸಾವಿನ ನಂತರ ನಡೆದ ಹಲವು ಬೆಳವಣಿಗೆಗಳು ಬಾಲಿವುಡ್ ನಲ್ಲಿ ಮಾದಕ ದ್ರವ್ಯ ಸೇವನೆಯ ಹಲವು ನಟ ನಟಿಯರ ಬಗ್ಗೆ ಮಾಹಿತಿಗಳು ಹೊರ ಬರುತ್ತಿದ್ದು, ಇದೀಗ ದೀಪಿಕಾ ಪಡುಕೋಣೆ ಹೆಸರು ತುಳುಕು ಹಾಕಿಕೊಂಡಿದೆ. ಆದರೆ ಯಾವಾಗ ದೀಪಿಕಾ ಹೆಸರು ಸೇರಿಕೊಂಡಿತೋ ಕೂಡಲೇ ಅದಕ್ಕೆ ಹೊಸ ಬಣ್ಣ ನೀಡಲು ಸಜ್ಜಾದ ಬಿಜೆಪಿ ನಾಯಕ, ಜೆಎನ್’ಯು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು ಎಂಬ ನೆಪ ಹಿಡಿದುಕೊಂಡು ಅವರ ವಿರುದ್ಧ ಟೀಕಾಪ್ರಹಾರ ಮಾಡಲು ಶುರುಮಾಡಿದ್ದಾರೆ.

‘ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಡ್ರಗ್ಸ್ ಸೇವನೆ ಮಾಡುತ್ತಿದ್ದರು. ಡ್ರಗ್ಸ್ ನಶೆಯಲ್ಲಿಯೇ ಬಂದು ದೇಶ ವಿರೋಧಿಗಳ ಜೊತೆ ನಿಲ್ಲುತ್ತಿದ್ದರು’ ಎಂದು ಬಿಜೆಪಿ ನಾಯಕ ಮನೋಜ್ ತಿವಾರಿ ಹೇಳಿ ಹೊಸ ರೀತಿಯ ವಿವಾದ ಹುಟ್ಟಿಹಾಕಿದ್ದಾರೆ. ಪತ್ರಕರ್ತರ ಜೊತೆ ಮಾತನಾಡಿದ ಅವರು, ಇಡೀ ಬಾಲಿವುಡ್ ಡ್ರಗ್ ಜಾಲದ ಸುಳಿಯಲ್ಲಿ ಸಿಲುಕಿದೆ. ಇಂದು ಹೆಮ್ಮೆ ಪಡುತ್ತಿದ್ದ ಸ್ಟಾರ್ ಹೆಸರು ಹೊರ ಬಂದಿದೆ. ಡ್ರಗ್ಸ್ ಸೇವನೆ ಬಳಿಕ ಅವರ ವಿಚಾರಗಳು ದೇಶದ ವಿರುದ್ಧವಾಗಿರುತ್ತವೆ. ಡ್ರಗ್ಸ್ ನಶೆಯಲ್ಲಿಯೇ ದೀಪಿಕಾ ಜೆಎನ್ಯು ನಲ್ಲಿ ನಡೆದ ದೇಶ ವಿರೋಧಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು ಎಂದು ಆರೋಪಿಸಿದ್ದಾರೆ.