ವಿದೇಶಿ ದೇಣಿಗೆ ನಿಯಂತ್ರಣ ತಿದ್ದುಪಡಿ ಮಸೂದೆಗೆ ಸಂಸತ್ ಅನುಮೋದನೆ; ವಿದೇಶಿ ದೇಣಿಗೆಗೆ ಆಧಾರ್ ಕಡ್ಡಾಯ.!
ನ್ಯೂಸ್ ಕನ್ನಡ ವರದಿ: ವಿಶ್ವದ ವಿವಿಧ ರಾಷ್ಟ್ರಗಳಿಂದ ಸರ್ಕಾರೇತರ ಸಂಸ್ಥೆಗಳಿಗೆ (NGOಗಳು) ಬರುವ ಹಣಕಾಸು ನೆರವು ಮತ್ತು ಇದಕ್ಕೆ ಸಂಬಂಧಪಟ್ಟ ವಹಿವಾಟುಗಳ ಕುರಿತು ಪಾರದರ್ಶಕತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ವಿದೇಶಿ ದೇಣಿಗೆಗಳ ನಿಯಂತ್ರಣ ತಿದ್ದುಪಡಿ ಮಸೂದೆ-2020ಕ್ಕೆ ಸಂಸತ್ ಇಂದು ಅನುಮೋದನೆ ನೀಡಿದೆ.
ಮಸೂದೆ ಕುರಿತ ಚರ್ಚೆ ವೇಳೆ ಮಾತನಾಡಿದ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್, ಈ ವಿದೇಯಕ ಯಾವುದೇ ಎನ್ಜಿಒಗಳ ವಿರುದ್ಧ ಅಲ್ಲ ಎಂದು ಸ್ಪಷ್ಟಪಡಿಸಿದರಲ್ಲದೇ, ಪಾರದರ್ಶಕತೆ ಕಾಯ್ದುಕೊಳ್ಳುವ ಉದ್ದೇಶವನ್ನು ಇದು ಹೊಂದಿದೆ ಎಂದರು. ದೇಶದಲ್ಲಿ ಉತ್ತಮ ಕೆಲಸಗಳನ್ನು ಮಾಡಲು ಬಯಸುವ ಸದುದ್ದೇಶದ ಎನ್ಜಿಒಗಳ ಹಿತಾಸಕ್ತಿಗಾಗಿ ಈ ತಿದ್ದುಪಡಿ ಮಸೂದೆಯನ್ನು ಜಾರಿಗೊಳಿಸಲಾಗಿದೆ ಎಂದು ಸಚಿವರು ಹೇಳಿದರು.
ವಿದೇಶಿ ದೇಣಿಗೆ ಸ್ವೀಕರಿಸುವ ಸರ್ಕಾರೇತರ ಸಂಸ್ಥೆಯ ಪದಾಧಿಕಾರಿಗಳು, ನೋಂದಣಿಯ ಸಂದರ್ಭದಲ್ಲಿ ತಮ್ಮ ಆಧಾರ್ ಸಂಖ್ಯೆ ನೀಡುವುದನ್ನು ಕಡ್ಡಾಯಗೊಳಿಸುವ ವಿದೇಶಿ ದೇಣಿಗೆ (ನಿಯಂತ್ರಣ) ಮಸೂದೆಯು ಬುಧವಾರ ರಾಜ್ಯಸಭೆಯಲ್ಲಿ ಅಂಗೀಕಾರಗೊಂಡಿತು.
ಕೃಷಿ ಮಸೂದೆ ಅಂಗೀಕಾರ ಸಂದರ್ಭದಲ್ಲಿ ಭಾರೀ ಗದ್ದಲ ಮತ್ತು ಅನುಚಿತ ವರ್ತನೆ ಆರೋಪದ ಮೇಲೆ ಅಮಾನತುಗೊಳಿಸಲಾದ ಎಂಟು ಸದಸ್ಯರ ಸಸ್ಪೆಂಡ್ ರದ್ದುಗೊಳಿಸುವಂತೆ ಆಗ್ರಹಿಸಿ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಕಲಾಪ ಬಹಿಷ್ಕರಿಸಿರುವ ನಡುವೆಯೇ ಸಂಸತ್ತಿನ ಮೇಲ್ಮನೆಯಲ್ಲಿ ಈ ವಿಧೇಯಕವನ್ನು ಅವಿರೋಧವಾಗಿ ಅನುಮೋದಿಸಲಾಯಿತು.