ಮೋದಿಯವರೇ, ರಾಜ್ಯ ಸರ್ಕಾರದ ಭ್ರಷ್ಟಾಚಾರದಲ್ಲಿ ನಿಮ್ಮ ಪಾಲೆಷ್ಟು ಸ್ಪಷ್ಟಪಡಿಸಿ!: ಸಿದ್ದು ಸವಾಲ್
ನ್ಯೂಸ್ ಕನ್ನಡ ವರದಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಯಡಿಯುರಪ್ಪನವರ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ‘ಕೊರೋನಾ ಕಾಲದಲ್ಲೂ ಸಹ ಆಡಳಿತ ಬಿಜೆಪಿ ಸರ್ಕಾರ ಕೊರೋನಾ ಹೆಸರಿನಲ್ಲಿ ಜನರ ಹಣವನ್ನು ಲೂಟಿ ಮಾಡಿದೆ. ಮುಂಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮಗ ಬಿ.ವೈ. ವಿಜಯೇಂದ್ರ ಈ ಲೂಟಿ ಹಿಂದಿನ ಪ್ರಮುಖ ವ್ಯಕ್ತಿ’ ಎಂದು ಆರೋಪಿಸಿದ್ದಾರೆ.
ಈ ಸಂಬಂಧ ಇಂದು ಟ್ವೀಟ್ ಮೂಲಕ ಕಟು ಸಂದೇಶವೊಂದನ್ನು ರವಾನಿಸಿದ್ದಾರೆ. ಕೊರೋನಾ ಕಾಲದಲ್ಲೂ ಭ್ರಷ್ಟಾಚಾರ ಎಸಗಿರುವ ಸರ್ಕಾರದ ವಿರುದ್ಧ ಸರಣಿ ಟ್ವೀಟ್ ಮೂಲಕ ಕಿಡಿಕಾರಿರುವ ಸಿದ್ದರಾಮಯ್ಯ, “ಮಗ, ಮೊಮ್ಮಗ ಸೇರಿದಂತೆ ತನ್ನ ಇಡೀ ಕುಟುಂಬವನ್ನೇ ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಕ್ಷಣ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಈ ಇಡೀ ಹಗರಣದ ಬಗ್ಗೆ ನ್ಯಾಯಾಲಯದ ನಿಗಾದಲ್ಲಿ ತನಿಖೆಗೆ ವಿಶೇಷ ತನಿಖಾದಳವನ್ನು ರಚಿಸಬೇಕು” ಎಂದು ಆಗ್ರಹಿಸಿದ್ದಾರೆ.
ಕೊರೋನಾ ಕಾಲದಲ್ಲೂ ಸಿಎಂ ಮಗ ವಿಜಯೇಂದ್ರ ಟೆಂಡರ್ ನೀಡಲು ಲಂಚದ ಬೇಡಿಕೆ ಇಟ್ಟಿದ್ದರು. ಖಾಸಗಿ ಸುದ್ದಿ ವಾಹಿನಿಯೊಂದು ಈ ಸಂಬಂಧ ಕುಟುಕು ಕಾರ್ಯಾಚರಣೆ ನಡೆಸಿ ಅಕ್ರಮವನ್ನು ಬಯಲಿಗೆ ಎಳೆದಿತ್ತು. ಈ ಸುದ್ದಿ ರಾಜ್ಯದಲ್ಲಿ ದೊಡ್ಡ ಕೋಲಾಹಲವನ್ನೇ ಎಬ್ಬಿಸಿತ್ತು. ಆದರೂ, ಯಡಿಯೂರಪ್ಪ ಮಾತ್ರ ಈ ಸಂಬಂಧ ತುಟಿ ಬಿಚ್ಚಿರಲಿಲ್ಲ. ಇದನ್ನು ವಿರೋಧಿಸಿ ಸಿಎಂ ಯಡಿಯೂರಪ್ಪ ಸರ್ಕಾರ ನಡೆಸಿರುವ ಭ್ರಷ್ಟಾಚಾರದ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಅವೈಜ್ಞಾನಿಕ ಕಾರ್ಯವೈಖರಿ ಕುರಿತು ಸರಣಿ ಟ್ವೀಟ್ ಮಾಡುವ ಮೂಲಕ ಆಕ್ರೋಶ ಹೊರಹಾಕಿರುವ ಮಾಜಿ ಸಿಎಂ ಸಿದ್ದರಾಮಯ್ಯ, “ನಾ ಖಾವುಂಗಾ ನಾ ಖಾನೆ ದೂಂಗಾ’ ಎನ್ನುತ್ತಲೇ ಅಧಿಕಾರಕ್ಕೆ ಬಂದಿರುವ ಪ್ರಧಾನಿ ನರೇಂದ್ರ ಮೋದಿ ಅವರ ಈ ಘೋಷಣೆಯನ್ನು ‘ಮೈ ಖಾವುಂಗಾ ಔರ್ ಖಾನೆ ದೂಂಗಾ’ ಎಂದು ತಕ್ಷಣ ಬದಲಾಯಿಸಿಕೊಳ್ಳುವುದು ಒಳಿತು. ಈ ಭ್ರಷ್ಟಾಚಾರದ ಹಣದಲ್ಲಿ ತನ್ನ ಪಾಲೆಷ್ಟು ಎನ್ನುವುದನ್ನು ಕೂಡಾ ನರೇಂದ್ರ ಮೋದಿಯವರು ತಿಳಿಸಬೇಕು.
ಅವೈಜ್ಞಾನಿಕ ಜಿಎಸ್ಟಿ ಮೂಲಕ ದೇಶದ ಜನರನ್ನು ಲೂಟಿ ಮಾಡುತ್ತಿರುವ ನರೇಂದ್ರಮೋದಿಯವರ ಜೊತೆ ಪೈಪೋಟಿಗೆ ಇಳಿದಿರುವ ಬಿಎಸ್ವೈ ಅವರು ತನ್ನ ಮಗ ವಿಜಯೇಂದ್ರನ ಮೂಲಕ ವಿಎಸ್ಟಿ (ವಿಜಯೇಂದ್ರ ಸರ್ವಿಸ್ ಟ್ಯಾಕ್ಸ್) ಮೂಲಕ ರಾಜ್ಯದ ಬೊಕ್ಕಸವನ್ನು ಲೂಟಿ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳ ಮಗ ಮತ್ತು ಮೊಮ್ಮಗ ಸೇರಿ ಟೆಂಡರ್ ಪ್ರಕ್ರಿಯೆ ಸಂಪೂರ್ಣ ಮುಗಿದಿರುವ ಕಾಮಗಾರಿಯಲ್ಲಿ ವರ್ಕ್ ಆರ್ಡರ್ ಕೊಡುವ ಹಂತದಲ್ಲಿ ಗುತ್ತಿಗೆದಾರರೊಬ್ಬರಿಂದ 17 ಕೋಟಿ ಹಣ ವಸೂಲಿಗೆ ಇಳಿದಿದ್ದು, ಈ ವ್ಯವಹಾರ ಕುದುರಿಸಿದ ಇಡೀ ಲಂಚಾವತಾರವನ್ನು ಮಾಧ್ಯಮ ಸಂಸ್ಥೆಯೊಂದು ಬಯಲಿಗೆಳೆದಿದೆ.