ಕಸಬಾ ಬೆಂಗ್ರೆ: ಮೂವರು ಯುವಕರ ಮೇಲೆ ತಲವಾರು ದಾಳಿ, ಆರೋಪಿಗಳು ಪರಾರಿ!
ನ್ಯೂಸ್ ಕನ್ನಡ ವರದಿ-(09.04.18): ಮಂಗಳೂರಿನ ಬಂದರು ಪ್ರದೇಶವಾದ ಕಸಬಾ ಬೆಂಗ್ರೆ ಎಂಬಲ್ಲಿ ಮುಸುಕುಧಾರಿಗಳ ತಂಡವೊಂದು ಮೂವರು ಯುವಕರ ಮೇಲೆ ತಲವಾರು ದಾಳಿ ನಡೆಸಿದ್ದು, ಪರಿಸ್ಥಿತಿ ಗಂಬೀರವಾಗಿದೆ ಎಂದು ತಿಳಿದು ಬಂದಿದೆ. ಪ್ರಕರಣವು ನಿನ್ನೆ ರಾತ್ರಿ ಸುಮಾರು 11 ಗಂಟೆಗೆ ಸಂಭವಿಸಿದ್ದು, ಗಾಯಾಳು ಯುವಕರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ದಾಳಿಗೊಳಗಾದ ಯುವಕರನ್ನು ಸ್ಥಳೀಯ ನಿವಾಸಿಗಳಾದ ಅನ್ವೀಝ್, ಮುಹಮ್ಮದ್ ಸಿರಾಜ್ ಹಾಗೂ ಇಝಾದ್ ಎಂದು ಗುರುತಿಸಲಾಗಿದೆ. ಸುಮಾರು 5,6 ಮಂದಿಯಿದ್ದ ತಂಡವೊಂದು ಮುಸುಕುಧಾರಿಗಳಾಗಿ ಬಂದು ಕೃತ್ಯ ಎಸಗಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದು, ಕಾರಣವಿನ್ನೂ ಸ್ಪಷ್ಟವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಪಣಂಬೂರು ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.