ಬಿಜೆಪಿಗೆ ಹಿನ್ನಡೆ: ಮಹಾರಾಷ್ಟ್ರದ ಪ್ರಭಾವಿ ನಾಯಕ ಏಕನಾಥ್ ಖಡಸೆ ಎನ್’ಸಿಪಿಗೆ!
ನ್ಯೂಸ್ ಕನ್ನಡ ವರದಿ: ಮಹಾರಾಷ್ಟ್ರದ ಅಸಮಾಧಾನಿತ ಬಿಜೆಪಿ ಮುಖಂಡ ಏಕನಾಥ್ ಖಡಸೆ ತಾನು ಶರದ್ ಪವಾರ್ ನೇತೃತ್ವದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷವನ್ನು ಸೇರುತ್ತಿರುವುದಾಗಿ ತಿಳಿಸಿದ್ಧಾರೆ. ಇದರೊಂದಿಗೆ ಕೆಲ ದಿನಗಳಿಂದ ಅವರು ಬಿಜೆಪಿ ತೊರೆದು ಎನ್ಸಿಪಿ ಸೇರಬಹುದು ಎಂದು ಹರಿದಾಡುತ್ತಿದ್ದ ಸುದ್ದಿ ಈಗ ನಿಜವಾಗಿದೆ.
ಏಕನಾಥ್ ಖಡಸೆ ಅವರು ಪಕ್ಷ ತೊರೆಯುವ ನಿರ್ಧಾರಕ್ಕೆ ಫಡ್ನವಿಸ್ ಅವನ್ನು ಮಾತ್ರ ದೂರಿದ್ದಾರೆ. “ನನ್ನನ್ನು ಬಿಜೆಪಿಯಿಂದ ಹೊರ ನೂಕಲಾಗಿದೆ. ಆ ಪಕ್ಷದಲ್ಲಿ ದೇವೇಂದ್ರ ಫಡ್ನವಿಸ್ ಬಿಟ್ಟು ಬೇರೆ ಯಾರೊಂದಿಗೂ ನನಗೆ ಅಸಮಾಧಾನ ಇಲ್ಲ. ನನಗೆ ಎನ್ಸಿಪಿಯಲ್ಲಿ ಯಾವ ಭರವಸೆಯನ್ನ ನೀಡಿಲ್ಲ. ನಾನೊಬ್ಬನೇ ಆ ಪಕ್ಷ ಸೇರುತ್ತಿದ್ದೇನೆ. ಬೇರೆ ಬಿಜೆಪಿ ಶಾಸಕರಾಗಲೀ, ಸಂಸದರಾಗಲೀ ನನ್ನ ಜೊತೆ ಬರುತ್ತಿಲ್ಲ” ಎಂದು ಖಡಸೆ ಮಾಧ್ಯಮದವರಿಗೆ ಸ್ಪಷ್ಟಪಡಿಸಿದ್ದಾರೆ.
ಏಕನಾಥ್ ಖಡಸೆ ಎನ್ಸಿಪಿ ಸೇರುವ ವಿಚಾರವನ್ನು ಎನ್ಸಿಪಿ ಮಹಾರಾಷ್ಟ್ರ ಘಟಕದ ಮುಖ್ಯಸ್ಥ ಜಯಂತ್ ಪಾಟೀಲ್ ಖಚಿತಪಡಿಸಿದ್ದಾರೆ. “ಖಡಸೆ ಅವರು ಶುಕ್ರವಾರ ಮಧ್ಯಾಹ್ನ 2ಗಂಟೆಗೆ ಎನ್ಸಿಪಿ ಸೇರುತ್ತಿದ್ದಾರೆ. ಅವರ ಆಗಮನದಿಂದ ನಮ್ಮ ಪಕ್ಷದ ಬಲ ಇನ್ನಷ್ಟು ಹೆಚ್ಚಾಗಲಿದೆ” ಎಂದು ಸಚಿವರೂ ಆಗಿರುವ ಜಯಂತ್ ಪಾಟೀಲ್ ಹೇಳಿದ್ದಾರೆ.