ಉಪಚುನಾವಣೆ ಸಮರ: ಬಿಜೆಪಿ ಅಭ್ಯರ್ಥಿ ಮುನಿರತ್ನ ವಿರುದ್ಧ ದಾಖಲಾಯ್ತು ಎಫ್.ಐ.ಆರ್!

ನ್ಯೂಸ್ ಕನ್ನಡ ವರದಿ: ಚುನಾವಣೆ ಹತ್ತಿರ ಬಂದಂತೆ ದಿನೇದಿನೆ ಆರ್​ಆರ್​ ನಗರ ಉಪಚುನಾವಣೆ ರಂಗೇರುತ್ತಲೇ ಇದೆ. ಒಂದು ಕಡೆ ಈಗಾಗಲೇ ಆರ್ ಆರ್ ನಗರ ಪೊಲೀಸ್ ಠಾಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ‌ ವಿರುದ್ಧ ಎಫ್​ಐಆರ್​ ದಾಖಲಿಸಲಾಗಿದೆ. ಈಗ ಬಿಜೆಪಿ ಅಭ್ಯರ್ಥಿ ಮುನಿರತ್ನ ಮೇಲೆಯೂ ಮತ್ತೊಂದು ಎಫ್​ಐಆರ್​ ದಾಖಲಾಗಿದೆ. ಯಶವಂತಪುರ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಕಾಂಗ್ರೆಸ್ ಮುಖಂಡ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ನೀಡಿದ ದೂರಿನನ್ವಯ ಎಫ್ ಐ ಆರ್ ದಾಖಲಾಗಿದೆ.

ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರಿಂದ ದೂರು-ಪ್ರತಿದೂರು ದಾಖಲಾಗಿದ್ದು,  ಬಿಜೆಪಿ ಅಭ್ಯರ್ಥಿ‌ ಮುನಿರತ್ನ ಹಾಗೂ ಕಾಂಗ್ರೆಸ್​ ಎಂಎಲ್​ಸಿ ನಾರಾಯಣಸ್ವಾಮಿ ವಿರುದ್ದ FIR ದಾಖಲಾಗಿದೆ. ಮುನಿರತ್ನ ಮತದಾರರಿಗೆ ಒಂದು ವೋಟಿಗೆ 5 ಸಾವಿರದ ಆಮಿಷ ಒಡ್ಡುತ್ತಿದ್ದಾರೆ ಎಂದು ಕಾಂಗ್ರೆಸ್​ ಆರೋಪಿಸಿದೆ.

ಮುನಿರತ್ನ ಅವರ ಬೆಂಬಲಿಗರಾದ  ನಸ್ರುತುಲ್ಲಾ ಇಮ್ರಾನ್ ಜಮೀರ್ ದಿಲ್ಕದ್ ಹನೀಫ್ ಹಾಗೂ ಸುನೀತಾ ಹಣದ ಆಮಿಷ ಒಡ್ಡಿದ್ದು, ಹೆಚ್​ಎಂಟಿ ಲೇಔಟ್ ಹಾಗೂ ಲಕ್ಷ್ಮಿದೇವಿ ನಗರಗಳಲ್ಲಿ ಹಣದ ಆಮಿಷ ಒಡ್ಡುತ್ತಿದ್ದಾರೆ ಎಂದು ಸಲೀಂ ಅಹಮದ್ ದೂರು ನೀಡಿದ್ದರು. ಈ ದೂರಿನ ಅನ್ವಯವಾಗಿ ಯಶವಂತಪುರ ಪೊಲೀಸರು ಎಫ್ ಐ ಆರ್ ದಾಖಲಿಸಿದ್ದಾರೆ. ಇದರ ಜೊತೆಗೆ ಆರ್.ಆರ್ ನಗರ ಬಿಜೆಪಿ ಕಾರ್ಯಕರ್ತ ನೀಡಿದ ದೂರಿನನ್ವಯ ಕಾಂಗ್ರೆಸ್​ ಎಂಎಲ್​ಸಿ ನಾರಾಯಣಸ್ವಾಮಿ ವಿರುದ್ದ FIR ದಾಖಲಾಗಿದೆ.

Leave a Reply

Your email address will not be published. Required fields are marked *