ನಾವು ವಿಚಲಿತಗೊಂಡ ದಿನ ನಮ್ಮೊಳಗೆ ಒಬ್ಬ ಗೀತಾ ಹುಟ್ಟುತ್ತಾಳೆ!: ಆಕ್ಟ್1978 ಮೂವಿ ರಿವ್ಯೂ: ದಾದ ಖಲಂದರ್

ನ್ಯೂಸ್ ಕನ್ನಡ ವರದಿ: ಪ್ರತಿ ಸಾರಿ ನಾನು ಯಾವುದಾದರೂ ಸರ್ಕಾರಿ ಇಲಾಖೆಯ ಕಛೇರಿಗೆ ಹೋದಾಗೆಲ್ಲ ಈ ಸರ್ಕಾರಿ ನೌಕರರನ್ನ ಹೆಂಗಪ್ಪ ನೆಟ್ಟಗಾಗಿಸೋದು ಅಂತ ಯೋಚಿಸುವುದು ತಪ್ಪಲ್ಲ. ಜನ ಸಾಮಾನ್ಯರ ಒಳಿತಿಗಾಗಿ ಕೆಲಸ ಮಾಡಲು ನಾವು ರೂಪಿಸಿಕೊಂಡ ವ್ಯವಸ್ಥೆ ಅದರೊಳಗೆ ಸರ್ಕಾರಿ ನೌಕರರು ಹಾಗೂ ರಾಜಕಾರಣಿಗಳು ನಿರ್ಮಿಸಿಕೊಂಡಿರೊ ಅವ್ಯವಸ್ಥೆ. ವ್ಯವಸ್ಥೆ ಕಾರ್ಯ ನಿರ್ವಹಿಸುತ್ತಿದೆಯೇ ಎಂದು ಸಂದೇಹ ಪಡುವಷ್ಟು ಅದರ ವೇಗವನ್ನು ಕುಂದಿಸುವ ಅವ್ಯವಸ್ಥೆಯನ್ನು ಅತ್ಯಂತ ವ್ಯವಸ್ಥಿತವಾಗಿ ಮುನ್ನಡೆಸುವ ಕೀಲೆಣ್ಣೆ ಗಿರಾಕಿಗಳು ಈ ನೌಕರಶಾಹಿ ಹಾಗೂ ರಾಜಕಾರಣಿಗಳು. ಪತ್ರಿಕೆಗಳಲ್ಲಿ ಆಗಾಗ ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧೀಜಿಯವರ ಪ್ರತಿಮೆಗಳನ್ನು ಒಡೆದರು, ಕೆಡವಿದರು, ಮಸಿ ಬಳಿದರು ಎಂಬ ಸುದ್ದಿಗಳನ್ನು ಓದಿ ವ್ಯಗ್ರರಾಗುತ್ತೇವೆ. ಆದರೆ, ಅವರುಗಳನ್ನು ಪ್ರತಿ ಕ್ಷಣ ಒಡೆಯುವ, ಕೆಡವುವ, ವಿರೂಪಗೊಳಿಸುವ ಹಾಗೂ ತಮಗಿಷ್ಟಬಂದ ಆಟಗಳಿಗೆ ಆಟಿಕೆಯಾಗಿಸಿಕೊಳ್ಳುವ ನೌಕರಶಾಹಿ ಮತ್ತು ರಾಜಕಾರಣಿಗಳು ನಮ್ಮನ್ನು ಅಷ್ಟಾಗಿ ವಿಚಲಿತಗೊಳಿಸುವುದಿಲ್ಲ.

ನಾವು ವಿಚಲಿತಗೊಂಡ ದಿನ ನಮ್ಮೊಳಗೆ ಒಬ್ಬ ಗೀತಾ ಹುಟ್ಟುತ್ತಾಳೆ. ಆಕ್ಟ್ 1978 ಸಿನಿಮಾ ಅಂತಹ ಸಾಧ್ಯತೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ನಮ್ಮ ಮುಂದೆ ಇಟ್ಟಿದೆ. ಈ ಸಿನಿಮಾದಲ್ಲಿ ಯಾರೂ ಅಭಿನಯಿಸಿಲ್ಲ, ಅವರವರ ಪಾತ್ರಗಳೇ ಆಗಿ ಪರಕಾಯ ಪ್ರವೇಶ ಮಾಡಿದ್ದಾರೆ. ನಮ್ಮ ನಡುವಿನ ಸೂಕ್ಷ್ಮ ಸಂವೇದನೆಯ ಯುವಕರಾದ Manso Re , Dayanand TK ಹಾಗೂ ವೀರೇಂದ್ರ ಮಲ್ಲಣ್ಣ ತಮ್ಮ ಸಾಮರ್ಥ್ಯಗಳನ್ನು ಬಸಿದು ಕಥೆ ಕಟ್ಟಿಕೊಟ್ಟಿರುವ ಕಾರಣಕ್ಕೊ ಏನೊ ಚಿತ್ರದಲ್ಲಿ ಸಮಕಾಲೀನ ಸಮಸ್ಯೆಗಳು ಹಾಗೂ ತಲ್ಲಣಗಳಿಗೆ ಪರಿಹಾರ, ಪರ್ಯಾಯ ಎಂಬಂತೆ ಪ್ರತಿ ಹತ್ತು-ಹದಿನೈದು ನಿಮಿಷಕ್ಕೊಮ್ಮೆಯಂತೆ ಹೊಳೆದು ಮರೆಯಾಗುವ ಅತ್ಯಂತ ಸೂಕ್ಷ್ಮ ಸಂದೇಶಗಳಿವೆ. ಬ್ರಿಟಿಷರ ಕಾಲದ ಪುರಾತನ ಸರ್ಕಾರಿ ಕಛೇರಿ, ಮರದಿಂದ ಬೀಳುವ ರೈತ, ಗಾಂಧಿ ವೇಷಧಾರಿ, ಮಾತು ತ್ಯಜಿಸಿದ ತುಪಾಕಿ ಶರಣಪ್ಪ, ಗರ್ಭಿಣಿಯ ಸಂಕಟ, ಹುಟ್ಟು ಎಲ್ಲವೂ ಇಲ್ಲಿ ಸಂಕೇತಗಳೆ ಹಾಗೂ ಪಾತ್ರಗಳೆ. ಯಜ್ಞಾ, ಬಿ.ಸುರೇಶ್, ಪ್ರಮೋದ್, ದತ್ತಣ್ಣ ಹಾಗೂ ಶೃತಿಯವರ ನಟನೆ ಕೆಲವು ದಿನಗಳಿಗಾದರೂ ಕಾಡುವಷ್ಟು ಗಾಢ. B R Bhaskar Prasad ಹಾಗೂ Rajkumar ರಂತಹ ನೈಜ ಪ್ರತಿಭೆಗಳಿಗೆ ಕನ್ನಡ ಚಿತ್ರರಂಗ ಮತ್ತಷ್ಟು ಅವಕಾಶ ನೀಡಲಿ.

ಸಿನಿಮಾ ನೋಡಿದ ಎರಡು ಗಂಟೆ ಕಾಲದಲ್ಲಿ ಒಂದು ಹೋರಾಟ, ಪ್ರತಿಭಟನೆ, ಜನಜಾಗೃತಿ, ಸಂಘಟನೆಯ ಕೆಲಸದಲ್ಲಿ ತೊಡಗಿಸಿಕೊಂಡ ತೃಪ್ತಿ ಸಿಕ್ಕಿತು. ಎಲ್ಲರೂ ಗೆಳೆಯರೊಟ್ಟಿಗೆ ಹೋಗಿ ತಪ್ಪದೆ ನೋಡಿ. I Need Respect ಎಂಬ ಟ್ಯಾಗ್ ಲೈನನ್ನು ಕೇವಲ ಕ್ಲೀಷೆಯ ಮಾತಾಗಿಸದೆ ಚಿತ್ರದುದ್ದಕ್ಕೆ ಎಲ್ಲೂ ಅಸಭ್ಯತೆ, ಅಶ್ಲೀಲತೆ, ಅವಾಚ್ಯ ನುಡಿಗಳು ನುಸುಳದಂತೆ ಎಚ್ಚರವಹಿಸಿದ ಚಿತ್ರತಂಡ Deserves Respect.

Act1978

iNeedRESPECT

~ ದಾದ ಖಲಂದರ್

Leave a Reply

Your email address will not be published. Required fields are marked *