ಕರ್ನಾಟಕದ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಅಂತಿಮ ನಿರ್ಧಾರ ಕೈಗೊಂಡಿಲ್ಲ: ಅಸಾದುದ್ದೀನ್ ಓವೈಸಿ
ನ್ಯೂಸ್ ಕನ್ನಡ.ವರದಿ(09-04-2018): ಮುಂಬರುವ ಕರ್ನಾಟಕ ವಿಧಾನ ಸಭಾ ಸಭಾ ಚುನಾವಣೆಯಲ್ಲಿ ನಮ್ಮ ಎಐಎಂಐಎಂ ಪಕ್ಷ ಸ್ಪರ್ಧಿಸಬೇಕೆ ಬೇಡವೇ ಎಂಬ ಕುರಿತು ಅಂತಿಮ ನಿರ್ಧಾರವನ್ನು ಇನ್ನೂ ಕೈಗೊಂಡಿಲ್ಲ ಎಂದು ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.
ಎಪ್ರಿಲ್ 10 ಮಂಗಳವಾರದಂದು ಪಕ್ಷದ ಸಭೆಯನ್ನು ಕರೆಯಲಾಗಿದೆ. ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಬೇಕೋ ಅಥವಾ ಬೇಡವೋ ಎಂಬುದನ್ನು ಸಭೆಯಲ್ಲಿ ಚರ್ಚೆ ನಡೆಸಿ, ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಎಐಎಂಐಎಂ ರಾಜ್ಯ ಮುಖ್ಯಸ್ಥ ಉಸ್ಮಾನ್ ಅವರು ತಿಳಿಸಿದ್ದಾರೆ.
ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲಿ ಎಷ್ಟು ಕ್ಷೇತ್ರಗಳಲ್ಲಿ ಸ್ಪರ್ಧೆಗಿಳಿಯಲಾಗುತ್ತದೆ ಎಂಬುದರ ಕುರಿತು ನಾವು ಎಂದಿಗೂ ಹೇಳಿಕೆಯನ್ನು ನೀಡಿಲ್ಲ. ಚುನಾವಣೆ ವೇಳೆ ಏನೇನು ಮಾಡಬೇಕೆಂಬುದರ ಬಗ್ಗೆ ಚರ್ಚೆ ನಡೆಸಿದ ಬಳಿಕ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.