ಕುಸಿದು ಬಿದ್ದಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯ ಆಡಳಿತ ವ್ಯವಸ್ಥೆಯನ್ನು ಸರಿಪಡಿಸಿ: ಡಿಸಿಎಂ ಅಶ್ವಥ್ ನಾರಾಯಣಗೆ ಕರವೇ ಮನವಿ.

ನ್ಯೂಸ್ ಕನ್ನಡ ವರದಿ: ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಸಚಿವರು ಹಾಗೂ ಕನ್ನಡ ವಿಶ್ವವಿದ್ಯಾಲಯದ ಸಮಕುಲಾಧಿಪತಿಗಳು ಆಗಿರುವ ಸನ್ಮಾನ್ಯ ಶ್ರೀ ಸಿ.ಎನ್.ಅಶ್ವತ್ಥ ನಾರಾಯಣ ಅವರಿಗೆ ಗೌರವಪೂರ್ವಕ ನಮಸ್ಕಾರಗಳು.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಜಗತ್ತಿನಲ್ಲಿಯೇ ಭಾಷೆಗಾಗಿ ಇರುವ ಏಕೈಕ ವಿಶ್ವವಿದ್ಯಾಲವೆಂಬ ಹೆಗ್ಗಳಿಕೆ ಹೊಂದಿರುವ ನಾಡಿನ ಹೆಮ್ಮೆಯ ಹಂಪಿ ಕನ್ನಡ ವಿಶ್ವವಿದ್ಯಾಲಯವು ಕನ್ನಡ ನಾಡು, ನುಡಿ, ಸಂಸ್ಕೃತಿಗಳ ಶೋಧನೆ, ಸಂಶೋಧನೆ ಮತ್ತು ಅಧ್ಯಯನಕ್ಕಾಗಿ ಹುಟ್ಟಿಕೊಂಡಿರುವದು ತಮಗೆಲ್ಲ ತಿಳಿದ ವಿಷಯವಾಗಿದೆ. ಸಾರ್ಥಕತೆಯ ಇಪ್ಪತ್ತೈದು ವರ್ಷಗಳನ್ನು ಪೂರೈಸಿರುವ ಕನ್ನಡ ವಿಶ್ವವಿದ್ಯಾಲಯವು ಆರಂಭದಿಂದ ಡಾ. ಚಂದ್ರಶೇಖರ ಕಂಬಾರ, ಡಾ. ಎಂ.ಎಂ.ಕಲಬುರ್ಗಿ, ಡಾ. ಎಚ್.ಜೆ.ಲಕ್ಕಪ್ಪಗೌಡ, ಡಾ. ಬಿ.ಎ.ವಿವೇಕ ರೈ, ಡಾ. ಕೆ.ವಿ.ನಾರಾಯಣ, ಡಾ. ಎ. ಮುರಿಗೆಪ್ಪ ಮತ್ತು ಡಾ. ಮಲ್ಲಿಕಾ ಘಂಟಿ ಅವರಂತ ಸಮರ್ಥ, ದಕ್ಷ, ಪ್ರಾಮಾಣಿಕ ಕುಲಪತಿಗಳನ್ನು ಕಂಡಿದೆ. ಕನ್ನಡದ ಬಗ್ಗೆ ಇವರಿಗಿದ್ದ ಕಳಕಳಿಯ ಫಲವಾಗಿ ಮತ್ತು ಹಗಲಿರುಳಿನ ಅವಿರತ ಪರಿಶ್ರಮ, ದುಡಿತದಿಂದ ಉತ್ಕೃಷ್ಟವಾದ ಕೆಲಸಗಳು ಆಗಿವೆ ಎಂಬುದು ಸತ್ಯ. ಇಂಥಹ ದಿಗ್ಗಜರ ಮಾರ್ಗದರ್ಶನದಲ್ಲಿ ಕಳೆದ ಇಪ್ಪತೈದು ವರ್ಷಗಳಿಂದ ಕನ್ನಡ ವಿಶ್ವವಿದ್ಯಾಲಯದ ಎಲ್ಲ ವರ್ಗದ ನೌಕರರು ಭೇದ ಭಾವವಿಲ್ಲದೇ, ಸ್ಥಾನಮಾನಗಳೆನ್ನದೇ ವಿಶ್ವವಿದ್ಯಾಲಯದ ಏಳ್ಗೆಗಾಗಿ ತಮ್ಮದೇ ಆದ ಸೇವೆಯನ್ನು ಸಲ್ಲಿಸುವ ಮೂಲಕ ಜಗತ್ತು ತಿರುಗಿ ನೋಡುವ ಹಾಗೆ ಮಾಡಿದ್ದಾರೆ.

ಆದರೆ ದುರದೃಷ್ಟವಶಾತ್ ಕಳೆದ ಎರಡು ವರ್ಷದಿಂದ ಕರಾಳ ಛಾಯೆ ಕನ್ನಡ ವಿಶ್ವವಿದ್ಯಾಲಯದಲ್ಲಿ ಆವರಿಸಿಕೊಂಡಿದೆ. ಕನ್ನಡ ವಿಶ್ವವಿದ್ಯಾಲಯದಲ್ಲಿ ಕಳೆದೆರಡು ವರ್ಷಗಳಿಂದ ಸಂಶೋಧನೆ, ಬೋಧನೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಇದರ ಫಲವಾಗಿಯೇ ನ್ಯಾಕ್ನಿಂದ ಎ+ ಶ್ರೇಣಿ ಹೊಂದಿದ್ದ ವಿಶ್ವವಿದ್ಯಾಲಯ ಬಿ ಶ್ರೇಣಿಯ ಕೆಳಹಂತಕ್ಕೆ ಇಳಿದಿರುವುದು ನಾಚಿಕೆಗೇಡಿತನ ಸಂಗತಿಯಾಗಿದೆ. ಇದರಿಂದಾಗಿ ಯುಜಿಸಿ ಅನುದಾನಗಳು ಸ್ಥಗಿತಗೊಂಡಿರುವುದು ತಮಗೆ ತಿಳಿದ ವಿಷಯವೇ ಆಗಿದೆ. ಗಾಯದ ಮೇಲೆ ಬರೆ ಎಳೆದಂತೆ ರಾಜ್ಯ ಸರ್ಕಾರವೂ ಅನುದಾನವನ್ನು ನೀಡದೆ ಇರುವುದರಿಂದ ವಿಶ್ವವಿದ್ಯಾಲಯದ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದು ಹೋಗಿದೆ.

ಕಳೆದ ಎರಡು ವರ್ಷಗಳಲ್ಲಿ ವಿದ್ಯಾರ್ಥಿಗಳ ಪ್ರವೇಶ ಸಂಖ್ಯೆ ಏಕಾಏಕಿ ಕುಸಿದಿದೆ. ವಿಶ್ವವಿದ್ಯಾಲಯ ಕೆಲವು ಕೋರ್ಸ್ಗಳನ್ನು ವಿನಾಕಾರಣ ಮುಚ್ಚಿರುವುದು ಇದಕ್ಕೆ ಮುಖ್ಯ ಕಾರಣ. ಎರಡು ವರ್ಷಗಳ ಅವಧಿಯಲ್ಲಿ ಪಿಎಚ್.ಡಿ ಕೋರ್ಸ್ಗಳ ಪ್ರವೇಶಕ್ಕೆ ಅರ್ಜಿ ಆಹ್ವಾನಿಸದೇ ಇರುವುದು, ದೂರಶಿಕ್ಷಣ ಕೋರ್ಸ್ಗಳನ್ನು ಮುಚ್ಚುತ್ತಿರುವುದರಿಂದ ವಿಶ್ವವಿದ್ಯಾಲಯಕ್ಕೆ ಬರುತ್ತಿದ್ದ ಅಲ್ಪಸ್ವಲ್ಪ ಆದಾಯವು ನಿಂತು ಹೋಗಿದೆ.

ಕಳೆದ ಎಂಟು ತಿಂಗಳುಗಳಿಂದ ವಿಶ್ವವಿದ್ಯಾಲಯದಲ್ಲಿ ಕೆಲಸ ನಿರ್ವಹಿಸುತ್ತಿರುವ ತಾತ್ಕಾಲಿಕ ಸಿಬ್ಬಂದಿಗಳಿಗೆ ವೇತನ ನೀಡದೇ ಅವರ ಪರಿಸ್ಥಿತಿ ಚಿಂತಾಜನಕವಾಗಿದೆ.  ಇನ್ನು ಖಾಯಂ ನೌಕರರ ಅಳಲು ಸಹ ಇದೇ ಆಗಿದೆ. ಕಳೆದ ಮೂರು ತಿಂಗಳಿಂದ ವೇತನ ಇಲ್ಲದೇ ಪರದಾಡುತ್ತಿರುವ ಖಾಯಂ ನೌಕರರು ವೇತನ ಕೇಳಲು ಹೋದರೆ ಬೇರೆ ಊರುಗಳಲ್ಲಿರುವ ವಿಸ್ತರಣಾ ಕೇಂದ್ರಗಳಿಗೆ ವರ್ಗಾವಣೆ ಮಾಡುವ ಬೆದರಿಕೆಯೊಡ್ಡಲಾಗುತ್ತಿದೆ. ವಿಶ್ವವಿದ್ಯಾಲಯದ ನೌಕರರಿಗೆ ಸಿಗಬೇಕಾದ ವೈದ್ಯಕೀಯ ವೆಚ್ಚದ ಮರುಪಾವತಿ ಸೌಲಭ್ಯವನ್ನು ಸಹ ನೀಡಲಾಗುತ್ತಿಲ್ಲ.

ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಬೇಕಾದ ಮೂಲಭೂತ ಸೌಲಭ್ಯಗಳನ್ನು ಒದಗಿಸುವ, ಶಿಕ್ಷಕ ಮತ್ತು ಶಿಕ್ಷಕೇತರ ನೌಕರರ ಹಿತ ಕಾಯುವ, ಸಂಶೋಧನಾತ್ಮಕ ಚಟುವಟಿಕೆಗಳ ಆಯೋಜನೆಗೆ ಒತ್ತು ಕೊಡುವ ನಿಟ್ಟಿನಲ್ಲಿ ಮತ್ತು ವಿಶ್ವವಿದ್ಯಾಲಯಗಳ ಆರ್ಥಿಕ ಸಬಲತೆಗೆ ಬೇಕಾದ ಅಗತ್ಯ ಪ್ರಯತ್ನಗಳನ್ನು ಮಾಡುವುದು ಕುಲಪತಿಗಳು ಮತ್ತು ಕುಲಸಚಿವರ ಕರ್ತವ್ಯವಾಗಿದೆ. ಆದರೆ ಕುಲಪತಿಗಳಾದ ಡಾ.ಸ.ಚಿ.ರಮೇಶ್, ಕುಲಸಚಿವರಾದ ಡಾ. ಎ.ಸುಬ್ಬಣ್ಣರೈ, ಹಣಕಾಸು ಅಧಿಕಾರಿಗಳಾದ ಡಾ.ರಮೇಶ್ ನಾಯಕ ಅವರು ಸರ್ಕಾರದೊಂದಿಗೆ ಸಮನ್ವಯ ಸಾಧಿಸಿ, ಅಗತ್ಯ ಅನುದಾನವನ್ನು ಮಂಜೂರು ಮಾಡಿಸಿಕೊಂಡು ವಿಶ್ವವಿದ್ಯಾಲಯದ ಬೆಳವಣಿಗೆಗೆ ಶ್ರಮಿಸಲು ವಿಫಲರಾಗಿರುವುದರಿಂದ ವಿಶ್ವವಿದ್ಯಾಲಯ ಹಾಗು ಸರ್ಕಾರ ಎರಡಕ್ಕೂ ಕೆಟ್ಟ ಹೆಸರು ತಂದಿರುತ್ತಾರೆ.

ಈಗಾಗಲೇ ಸರ್ಕಾರವು ಸ್ನಾತಕೋತ್ತರ ಪದವಿ ತರಗತಿಗಳ ಆರಂಭಕ್ಕೆ ಒಪ್ಪಿಗೆ ನೀಡಿದ್ದರೂ ಕೋವಿಡ್ ೧೯ರ ನೆಪವೊಡ್ಡಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸಲಾಗುತ್ತಿದೆ ಮತ್ತು ವಸತಿನಿಲಯಗಳ ಪ್ರಾರಂಭಕ್ಕೆ ತಡೆಯೊಡ್ಡುವ ಕೆಲಸ ಮಾಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ನ್ಯಾಯವಾಗಿ ದೊರೆಯಬೇಕಾದ ಶಿಷ್ಯವೇತನವನ್ನು ಮಂಜೂರು ಮಾಡದೇ, ಅನಗತ್ಯವಾಗಿ ಕಿರುಕುಳ ಕೊಡಲಾಗುತ್ತಿದೆ.

ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಸರ್ಕಾರ ಅನುದಾನ ನೀಡದೇ ಇರುವುದು ಮತ್ತು ಅಲ್ಲಿನ ಆಡಳಿತ ವ್ಯವಸ್ಥೆ ಕುಸಿದು ಬಿದ್ದಿರುವ ಹಿನ್ನೆಲೆಯಲ್ಲಿ ಕರ್ನಾಟಕದ ಪ್ರಜ್ಞಾವಂತ ನಾಗರಿಕರು, ಸಾಹಿತಿಗಳು, ಬುದ್ಧಿಜೀವಿಗಳ ಮನವಿಯ ಮೇರೆಗೆ ಕರ್ನಾಟಕ ರಕ್ಷಣಾ ವೇದಿಕೆ ದಿನಾಂಕ ೧೮-೧೨-೨೦೨೦ರಂದು ‘#ಕನ್ನಡವಿವಿಉಳಿಸಿ’ ಎಂಬ ಟ್ವಿಟರ್ ಆಂದೋಲನ ನಡೆಸಿತು. ಈ ಆಂದೋಲನದಲ್ಲಿ ದೇಶವಿದೇಶದ ಸಾವಿರಾರು ಕನ್ನಡಿಗರು ಭಾಗವಹಿಸಿ ಸರ್ಕಾರ ಕೂಡಲೇ ಹಂಪಿ ವಿಶ್ವವಿದ್ಯಾಲಯದಕ್ಕೆ ಅನುದಾನ ಬಿಡುಗಡೆ ಮಾಡುವುದರ ಜತೆಗೆ ಅಲ್ಲಿನ ಆಡಳಿತ ವ್ಯವಸ್ಥೆಯನ್ನು ಸುಧಾರಿಸಬೇಕು ಎಂದು ಆಗ್ರಹಿಸಿರುತ್ತಾರೆ. ಟ್ವಿಟರ್ ದಾಖಲೆಗಳ ಪ್ರಕಾರ ಒಟ್ಟು ೧೦,೬೦೦ ಕ್ಕೂ ಹೆಚ್ಚು ಟ್ವೀಟ್ ಗಳು ಬಂದಿದ್ದು, ೧೫,೯೦೦ಕ್ಕೂ ಹೆಚ್ಚು ಮಂದಿ ಈ ಆಂದೋಲನದಲ್ಲಿ ತೊಡಗಿಕೊಂಡಿದ್ದರು. ಒಟ್ಟು ೪೦ ಲಕ್ಷ ಮಂದಿ ಈ ಆಂದೋಲನವನ್ನು ಗಮನಿಸಿರುತ್ತಾರೆ. ಕನ್ನಡ ನುಡಿಗಾಗಿ ಇರುವ ಏಕೈಕ ವಿಶ್ವವಿದ್ಯಾಲಯವನ್ನು ಸರ್ಕಾರ ಯಾವುದೇ ಕಾರಣಕ್ಕೂ ನಾಶವಾಗಲು ಬಿಡಕೂಡದು ಎಂಬುದು ಎಲ್ಲರ ಅಭಿಪ್ರಾಯವಾಗಿರುತ್ತದೆ.

ಇದೆಲ್ಲ ಹಿನ್ನೆಲೆಯಲ್ಲಿ  ಉಪಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಸಚಿವರು ಹಾಗೂ ಕನ್ನಡ ವಿಶ್ವವಿದ್ಯಾಲಯದ ಸಮಕುಲಾಧಿಪತಿಗಳು ಆಗಿರುವ ತಾವು ಈ ಕೂಡಲೇ ಸಮಸ್ತ ಕನ್ನಡ ಜನತೆಯ ಈ ಅಹವಾಲುಗಳಿಗೆ ತಕ್ಷಣ ಸ್ಪಂದಿಸಬೇಕೆಂದು ಕೋರುತ್ತೇವೆ.
೧. ಹಂಪಿ ವಿಶ್ವವಿದ್ಯಾಲಯದ ತಾತ್ಕಾಲಿಕ ಸಿಬ್ಬಂದಿ ಮತ್ತು ಖಾಯಂ ಸಿಬ್ಬಂದಿ ಸಂಬಳವಿಲ್ಲದೆ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಈ ಕೂಡಲೇ ಇವರುಗಳ ವೇತನ ನೀಡಲು ಆದೇಶಿಸಬೇಕು.
೨. ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಈಗಾಗಲೇ ತಮಗೆ ಮನವಿ ಮಾಡಿರುವ ಪ್ರಕಾರ ಕೂಡಲೇ ಅಭಿವೃದ್ಧಿ ಅಂದಾಜುಗಳ ವಾರ್ಷಿಕ ಅಂದಾಜು ವೆಚ್ಚ ಆರು ಕೋಟಿ ರುಪಾಯಿಗಳ ಅನುದಾನವನ್ನು ನೀಡಬೇಕು.
೩. ವಿದ್ಯಾರ್ಥಿಗಳಿಗೆ ಕೂಡಲೇ ಫೇಲೋಶಿಪ್ ನೀಡಬೇಕು. ಸ್ಥಗಿತಗೊಂಡಿರುವ ಎಲ್ಲ ಕೋರ್ಸ್ಗಳನ್ನು ಪುನರಾರಂಭಿಸಬೇಕು. ಸರ್ಕಾರದ ಮಾರ್ಗಸೂಚಿಯಂತೆ ಪ್ರವೇಶಾತಿ ಆರಂಭಗೊಳ್ಳಬೇಕು ಮತ್ತು ವಸತಿ ನಿಲಯಗಳನ್ನು ತೆರೆಯಬೇಕು.
೪. ಪಿಎಚ್.ಡಿ ಕೋರ್ಸ್ಗಳ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಬೇಕು, ದೂರಶಿಕ್ಷಣ ಕೋರ್ಸ್ಗಳನ್ನು ಮುಂದುವರೆಸಬೇಕು.
೫. ಡಾ.ಚಂದ್ರಶೇಖರ ಕಂಬಾರರು ಕುಲಪತಿಗಳಾಗಿದ್ದಾಗ ಸರ್ಕಾರಕ್ಕೆ ನೀಡಿದ್ದ ಶಿಫಾರಸಿನಂತೆ ಕನ್ನಡ ವಿಶ್ವವಿದ್ಯಾಲಯಕ್ಕೆ ಹೆಚ್ಚುವರಿಯಾಗಿ ೫೦೦ ಎಕರೆ ಜಮೀನು ಮಂಜೂರು ಮಾಡಬೇಕು.
೬. ವಾರ್ಷಿಕ ಅನುದಾನದ ಜತೆಯಲ್ಲಿ ವಿಶ್ವವಿದ್ಯಾಲಯಕ್ಕೆ ಬೇರೆ ಬೇರೆ ಯೋಜನೆಗಳ ಮೂಲಕ ಇನ್ನಷ್ಟು ಅನುದಾನಗಳನ್ನು ನೀಡಿ ಅಭಿವೃದ್ಧಿ ಕಾರ್ಯಗಳನ್ನು ಹೆಚ್ಚಿಸಬೇಕು. ೨೦೧೭-೧೮ರ ಸಾಲಿನಲ್ಲಿ ಡಾ.ಮಲ್ಲಿಕಾ ಘಂಟಿಯವರ ಅವಧಿಯಲ್ಲಿ ಸರ್ಕಾರದಿಂದ ಸುಮಾರು ೨೫.೧೬ ಕೋಟಿ ರುಪಾಯಿಗಳ ಅನುದಾನ ದೊರೆತಿದ್ದು, ಆ ಯೋಜನೆಗಳನ್ನು ಪೂರ್ಣಗೊಳಿಸುವುದು, ಹೊಸ ಯೋಜನೆಗಳನ್ನು ಹಮ್ಮಿಕೊಳ್ಳುವುದು ಸರ್ಕಾರದ ಕರ್ತವ್ಯವಾಗಿರುತ್ತದೆ.
೭. ವಿಶ್ವವಿದ್ಯಾಲಯವನ್ನು ಬೆಳೆಸುವುದು ಎಂದರೆ ಕಟ್ಟಡಗಳನ್ನು ಕಟ್ಟಿಬಿಡುವುದಲ್ಲ, ಜ್ಞಾನವನ್ನು ಬೆಳೆಸುವುದು. ಜ್ಞಾನವನ್ನು ಬೆಳೆಸುವೆಡೆಗೆ ಹೆಚ್ಚು ಹಣ ಮತ್ತು ಮಾನವ ಸಂಪನ್ಮೂಲಗಳನ್ನು ಬಳಸಬೇಕು.
೮. ಹಂಪಿ ಕನ್ನಡ ವಿಶ್ವವಿದ್ಯಾಲಯದ ಇಂದಿನ ದಯನೀಯ ಸ್ಥಿತಿಗೆ ಕಾರಣರಾದ ಎಲ್ಲರ ಮೇಲೂ ಸೂಕ್ತ ಕ್ರಮ ಜರುಗಿಸಬೇಕು ಮತ್ತು ಸಂಸ್ಥೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಸಾಮರ್ಥ್ಯ ಮತ್ತು ಯೋಗ್ಯತೆ ಇರುವವರನ್ನು ನೇಮಿಸಬೇಕು.

ತಾವು ಕನ್ನಡ ನಾಡು  ನುಡಿ ಸಂಸ್ಕೃತಿಯ ಕುರಿತಾಗಿ ಅಪಾರವಾಗಿ ಕಾಳಜಿ ಹೊಂದಿರುವವರಾದ್ದರಿಂದ ಕೂಡಲೇ ಮೇಲಿನ ಎಲ್ಲ ವಿಷಯಗಳನ್ನು ಪರಿಗಣಿಸಿ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತೇವೆ.


ವಂದನೆಗಳೊಂದಿಗೆ,          ತಮ್ಮ ವಿಶ್ವಾಸಿ
     

     (ಟಿ.ಎ.ನಾರಾಯಣಗೌಡ)
         ರಾಜ್ಯಾಧ್ಯಕ್ಷರು

Leave a Reply

Your email address will not be published. Required fields are marked *