ದೇಶದ ಮೊದಲ ಸ್ವಾಭಿಮಾನಿ ಯುದ್ಧ ” ಭೀಮಾ ಕೊರೆಗಾಂವ ವಿಜಯೋತ್ಸವದ ಬಗ್ಗೆ ನಿಮಗೆಷ್ಟು ಗೊತ್ತು?
ನ್ಯೂಸ್ ಕನ್ನಡ ವರದಿ: “ಭೀಮಾ ಕೊರೆಗಾಂವ ಯುದ್ಧ” ಇತಿಹಾಸದಲ್ಲಿ ಮುಚ್ಚಿಹೋದ ಐತಿಹಾಸಿಕ ಸಾಹಸದ ಘಟನೆ. 28ಸಾವಿರ ಪೇಶ್ವೆ ಸೈನಿಕರನ್ನ ಕೇವಲ ಐನೂರು ಜನ ಮಹಾರ ಸೈನಿಕರು ಸೇರಿಕೊಂಡು ಸೋಲಿಸಿದ ಕದನ. ಜಾತಿವಾದಿ ಪೇಶ್ವೆಗಳ ಆಡಳಿತದಲ್ಲಿದ್ದ ಜಾತಿಯತೆ, ಅಸ್ಪೃಶ್ಯತೆ, ಮೇಲು ಕೀಳುಗಳ ವಿರುದ್ಧ ಸೆಟೆದು ನಿಂತು ಮಾನವೀಯ ಮೌಲ್ಯಗಳನ್ನು ಪಡೆದುಕೊಳ್ಳಲು ಹಂಬಲಿಸುವ ಮಹಾರ ಸೈನಿಕರ ಧೈರ್ಯ ಸಾಹಸ, ಕೆಚ್ಚೆದೆಯ ಹೋರಾಟ. ಶೋಷಿತರು ಪೇಶ್ವೇ ಎಂಬ ಶೋಷಕರ ವಿರುದ್ಧ, ಅವರ ಶೋಷಣೆಯ ನಡವಳಿಕೆಯ ವಿರುದ್ಧ ಯುದ್ಧ ನಡೆಸಿ ಗೆದ್ದ ಗೆಲುವು. ಅದು ಭೀಮಾ ತೀರದಲ್ಲಿ ನಡೆದಿದ್ದರಿಂದ ಅದು ಇತಿಹಾಸದಲ್ಲಿ ‘ಭೀಮಾ ಕೋರೇಗಾಂವ್ ಯುದ್ಧ’ವೆಂದೇ ಪ್ರಸಿದ್ಧವಾಗಿದೆ
ಶಿವಾಜಿ ಮಹಾರಾಜರ ಸೇನೆಯಲ್ಲಿ ತುಂಬಾ ನಿಷ್ಠೆಯಿಂದ, ಶ್ರದ್ಧೆಯಿಂದ ಕೆಲಸ ಮಾಡಿದವರು ಮಹಾರ ಜನಾಂಗದವರು(ಶೂದ್ರರು). ಯಾರು ಶಿವಾಜಿ ಮಹಾರಾಜರ ಪಟ್ಟಾಭಿಷೇಕಕ್ಕೆ ವಿರೋಧ ಮಾಡಿದರೋ! ಯಾವ ಶಿವಾಜಿ ಮಹಾರಾಜರನ್ನ ಜಾತಿವಾದಿ ಪೇಶ್ವೇಗಳು ಮೋಸದಿಂದ ಕೊಂದರೋ ಅದೇ ಪೇಶ್ವೇಗಳನ್ನ ಅವಮಾನಕರ ರೀತಿಯಲ್ಲಿ ಭೀಮಾ ಕೊರೆಗಾಂವನಲ್ಲಿ ಸೋಲಿಸಿದ್ದು ನಮ್ಮ ಹೆಮ್ಮೆಯ ಮಹಾರ ಜನಾಂಗದ ಐನೂರು ಜನ ವೀರರು.
ಅಂದಿನ ಯುದ್ಧದಲ್ಲಿ ಭಾಗವಹಿಸಿದ್ದ ಮಹಾರ ಸೈನಿಕರ ಸಂಖ್ಯೆ ಕೇವಲ ಐದೆ-ಐದನೂರು. ಅದು ಕೂಡ ಕಾಲ್ದಳ ಸೈನಿಕರು ಮಾತ್ರ. ಅವರ ಹತ್ತಿರ ಇದ್ದ ಆಯುಧ ಕತ್ತಿ ಮಾತ್ರ. ಅವರು ಎದುರಿಸಿದ್ದು 20000 ಅಶ್ವದಳ ಮತ್ತು 8000 ಕಾಲ್ದಳ ಪೇಶ್ವೆ ಸೈನ್ಯವನ್ನ ಒಟ್ಟು 28000 ರಾಕೆಟ್ ದಳ ಮತ್ತು ಫಿರಂಗಿದಳ ಹೊಂದಿದ್ದ ಸೈನಿಕರನ್ನ. ಈ ಯುದ್ಧ ನಡೆದಿದ್ದು ಹೆಣ್ಣಿಗಾಗಿ ಹೊನ್ನಿಗಾಗಿ ಮಣ್ಣಿಗಾಗಿ ಅಲ್ಲ! ಈ ಯುದ್ಧ ನಡೆದಿದ್ದು ಸಾವಿರಾರು ವರ್ಷಗಳ ಕಾಲ ಒಂದು ಸಮುದಾಯದ ಮೇಲೆ ನಡೆದ ದೌರ್ಜನ್ಯದ ವಿರುದ್ಧ ಒಡೆದ ಒಂದು ಸಣ್ಣ ಆಕ್ರೋಶವಸ್ಟೇ. ಅದರ ಪರಿಣಾಮವೇ 28000 ಸಾವಿರದಷ್ಟಿದ್ದ ಪೇಶ್ವೆಯ ಅಷ್ಟು ದೊಡ್ಡ ಸೈನ್ಯವನ್ನ ಕೇವಲ ಐನೂರು ಜನ ಮಹಾರ ಸೈನಿಕರು ಸೋಲಿಸಿದ್ದು.. ಅಂದರೆ ಲೆಕ್ಕದಲ್ಲಿ ಯೋಚಿಸಿದಾಗ ಒಬ್ಬ ಮಹಾರ ಸೈನಿಕ ಎದುರಿಸಿದ್ದು ಸರಾಸರಿ 56 ಪೇಶ್ವೆಗಳನ್ನ!!..
1817ರ ಡಿಸೆಂಬರ್ 31ರ ಮಧ್ಯರಾತ್ರಿ ಹೊರಟ ಮಹಾರ ಸೇನೆಯು ಮರುದಿನ ಬೆಳಗ್ಗೆ 9ಗಂಟೆಗೆ ಅಂದರೆ 1818ರ ಜನೇವರಿ 1ರಂದು ಹೊಸ ವರ್ಷದ ದಿನ ಭೀಮಾ ಕೊರೆಗಾಂವ ರಣಾಂಗಣ ತಲುಪುತ್ತೇ. ಕೋರೇಗಾಂವ್ ಗ್ರಾಮವನ್ನು ಪ್ರವೇಶಿಸಿದ್ದೇ ತಡ ಎರಡೂ ಪಡೆಗಳೂ ಬೀದಿ ಬೀದಿಗಳಲ್ಲಿ, ಮನೆ-ಗುಡಿಸಲುಗಳ ಮುಂದೆ ಕೈ ಕೈ ಮಿಲಾಯಿಸುತ್ತಾ ನೇರಾ-ನೇರ ಕಾದಾಟಕ್ಕಿಳಿಯುತ್ತವೆ. ಆ ಕ್ಷಣಕ್ಕೆ ಮಹಾರರ ಸೈನ್ಯಕ್ಕೆ ಬಹಳ ಹಾನಿಯಾಗುತ್ತದೆ. ಆದರೂ ಎದೆಗುಂದದ ಮಹಾರ್ ಸೈನಿಕರು ಅತ್ಯುತ್ಕೃಷ್ಟ ಧೈರ್ಯದಿಂದ ಮುನ್ನುಗ್ಗುತ್ತಲೇ ಹೋಗುತ್ತಾರೆ.
ಮಹಾರ ಸೈನಿಕರ ನೇತೃತ್ವ ವಹಿಸಿದ್ದ ಸಿದ್ಧನಾಕನು ‘‘ಕಡೆಯ ಸೈನಿಕನಿರುವ ತನಕ, ಕಡೆಯ ಕತ್ತಿ ಇರುವ ತನಕ ಹೋರಾಡುತ್ತಲೇ ಇರಿ’’ ಎಂದು ಹುರಿದುಂಬಿಸುತ್ತಲೇ ಇರುತ್ತಾನೆ. ಪರಿಣಾಮವಾಗಿ ಮಹಾರ್ ಸೈನಿಕರು ಅತ್ಯಮೋಘ ಧೈರ್ಯದಿಂದ, ಎಲ್ಲ ದುರದೃಷ್ಟಗಳ ನಡುವೆ ಹೋರಾಡುತ್ತ ವೀರಾವೇಶದಿಂದ ಮುನ್ನುಗ್ಗುತ್ತಾರೆ. ಮಹಾರ್ ಸೈನಿಕರ ಅಂತಹ ಮುನ್ನುಗ್ಗುವಿಕೆಯಲ್ಲಿ ಅದೆಂತಹ, ಅದೆಷ್ಟು ಶತಮಾನಗಳ ನೋವಿನ ಆಕ್ರೋಶವಿತ್ತು? ತತ್ಫಲವಾಗಿ ಬಹುಸಂಖ್ಯೆಯಲ್ಲಿದ್ದರೂ ಕೂಡ ಪೇಶ್ವೆಯ ಸೈನ್ಯ ಹಿಮ್ಮೆಟ್ಟಿ ಸೋತು ರಾತ್ರಿ 9ಗಂಟೆಗೆ ಗುಂಡಿನ ದಾಳಿಯನ್ನು ನಿಲ್ಲಿಸುತ್ತದೆ. ಹಾಗೂ ವಿಧಿಯಿಲ್ಲದೆ ಕೋರೇಗಾಂವ್ನಿಂದ ರಾತ್ರೋರಾತ್ರಿ ಕಾಲ್ಕೀಳುತ್ತದೆ!
ಒಟ್ಟಾರೆ ಅತ್ಯಮೋಘ ಧೈರ್ಯ ಮತ್ತು ಶಿಸ್ತುಬದ್ಧ ಶೌರ್ಯವನ್ನು ಪ್ರದರ್ಶಿಸಿದ ಮಹಾರ್ ಸೈನಿಕರು ಶೋಷಕ ಪೇಶ್ವೆಗಳ ವಿರುದ್ಧ ಅಭೂತ ಪೂರ್ವ ಜಯ ದಾಖಲಿಸುತ್ತಾರೆ. ಈ ಯುದ್ಧದ ನಂತರ ಮಹಾರಾಷ್ಟ್ರದಲ್ಲಿ ಪೇಶ್ವೆಗಳ ಆಡಳಿತ ಕೊನೆಗೊಳ್ಳುತ್ತದೆ. ಹಾಗೆಯೇ ಅಸ್ಪಶ್ಯರ ಮಹಾರರ ದಯನೀಯ ಸ್ಥಿತಿ ಕೂಡ ಸುಧಾರಣೆ ಕಾಣಲು ಆರಂಭಿಸುತ್ತದೆ. ಈ ಯುದ್ಧದಲ್ಲಿ ಜಯ ತಂದುಕೊಟ್ಟು ಮಡಿದ 22 ಮಹಾರ್ ಸೈನಿಕರ ಸ್ಮರಣಾರ್ಥ ಕೋರೇಗಾಂವ್ನಲ್ಲಿ ಮಹಾರ್ ಸೈನಿಕರು ಪ್ರಥಮ ಗುಂಡು ಸಿಡಿಸಿದ ಸ್ಥಳದಲ್ಲೇ 65 ಅಡಿ ಎತ್ತರದ ಒಂದು ಹುತಾತ್ಮ ಸ್ಮಾರಕ ಕೂಡ 1821 ಮಾರ್ಚ್ 26ರಂದು ನಿರ್ಮಾಣ ಗೊಳ್ಳುತ್ತದೆ ಹಾಗೂ ಆ ಸ್ಮಾರಕದಲ್ಲಿ ಮಡಿದ 22 ಸೈನಿಕರ ಜೊತೆಗೆ ಗಾಯಗೊಂಡವರ ಹೆಸರನ್ನೂ ಕೆತ್ತಿಸಲಾಗುತ್ತದೆ.
‘‘ಇತಿಹಾಸ ಮರೆತವರು ಇತಿಹಾಸ ಸೃಷ್ಟಿಸಲಾರರು’’ ಎಂದು ಹೇಳಿದ ಬಾಬಾಸಾಹೇಬ್ ಅಂಬೇಡ್ಕರರಿಗೆ ತನ್ನ ಜನರ ಇಂತಹ ಅದ್ಭುತ ಐತಿಹಾಸಿಕ ಜಯದ ಬಗ್ಗೆ ಬಹಳ ಹೆಮ್ಮೆ ಇತ್ತು. ಆ ಕಾರಣಕ್ಕಾಗಿ ಕೋರೆಗಾಂವ್ನಲ್ಲಿನ ಮಹಾರ್ ಸೈನಿಕರ ಈ ಸ್ಮಾರಕಕ್ಕೆ ಅಂಬೇಡ್ಕರರು ಪ್ರತಿ ವರ್ಷ ಸಕುಟುಂಬ ಸಮೇತರಾಗಿ ಭೇಟಿ ನೀಡುತ್ತಿದ್ದರು. ಅಲ್ಲದೆ ಅಗಲಿದ ಯೋಧರಿಗೆ ಬಾಬಾಸಾಹೇಬರು ತಮ್ಮ ಅಭೂತಪೂರ್ವ ನಮನ ಸಲ್ಲಿಸುತ್ತಿದ್ದರು. ಅಂಬೇಡ್ಕರರಿಗೆ ತಿಳಿದಿತ್ತು ಕೋರೇಗಾಂವ್ನಲ್ಲಿ ಮಹಾರ್ ಸೈನಿಕರು ಹೋರಾಡಿದ್ದು ಒಂದು ಸಾಮ್ರಾಜ್ಯದ ವಿರುದ್ಧವಲ್ಲ ವ್ಯವಸ್ಥೆಯ ವಿರುದ್ಧ ಅಂತ. ಯಾವ ವ್ಯವಸ್ಥೆ ತಮ್ಮನ್ನು ಕೀಳಾಗಿ ಕಾಣುತ್ತಿತ್ತೋ, ಪ್ರಾಣಿಗಳಿಗಿಂತ ಹೀನಾಯವಾಗಿ ನಡೆಸಿಕೊಳ್ಳುತ್ತಿತ್ತೋ ಅಂತಹ ದೌರ್ಜನ್ಯಕೋರ ಸಂಸ್ಕೃತಿಯ ವಿರುದ್ಧ. ಒಂದು ವೇಳೆ ಕೋರೇಗಾಂವ್ ಯುದ್ಧ ನಡೆಯದಿದ್ದರೆ ಪೇಶ್ವೆಗಳ ಅಟ್ಟಹಾಸ ಮತ್ತೂ ಮುಂದುವರಿದಿರುತ್ತಿತ್ತು.
28000%500=56 ಲೆಕ್ಕ ಸರಿ ಇದೆಯಾ..
ಸುಮಾರು ಎರಡು ಶತಮಾನಗಳ ಕಾಲದಿಂದಲೂ ಹಿಡಿದು ಇಲ್ಲಿಯವರೆಗೆ ಮಹಾರಾಷ್ಟ್ರದಲ್ಲಿ ಆಡು ಭಾಷೆಯಲ್ಲಿ ಒಂದು ಮಾತಿದೆ. ” ತುಮ್ಚಾ ಸರ್ಕಾ 56 ಪಹಿಲೇ” (ನಿಮ್ಮಂತಹ 56ಜನರ ನೋಡಿದಿವಿ) ಅಂತ ಗರ್ವದಿಂದ ಹೇಳುವ ಮಾತಿದೇ. ಇದನ್ನ ಮಹಾರಾಷ್ಟ್ರದ ಜನ ಬಹಳ ಹೆಮ್ಮೆಯಿಂದ ಹೇಳುತ್ತಾರೆ
‘ ಭೀಮಾ ಕೊರೆಗಾಂವ ಯುದ್ಧ ಸಾವಿರಾರು ವರ್ಷಗಳ ಕಾಲ ಒಂದು ಸಮುದಾಯದ ವಿರುದ್ಧ ನಡೆದ ದೌರ್ಜನ್ಯಕ್ಕೆ ಪ್ರತಿಯಾಗಿ ನೀಡಿದ ಉತ್ತರ. ಭೀಮಾ ಕೊರೆಗಾಂವ ಯುದ್ಧ ಶೂದ್ರ ರಾಜ ಶಿವಾಜಿ ಮಹಾರಾಜರ ಮತ್ತು ಸಂಭಾಜಿಯ ಹತ್ಯೆಗೆ ತೀರಿಸಿಕೊಂಡ ಪ್ರತೀಕಾರ ‘
ಇಂದಿನ ಯುವ ಜನತೆ ಹೊಸ ವರ್ಷ ಬಂತು ಅಂತ ಮೋಜು ಮಸ್ತಿಯಲ್ಲಿ ಕಾಲ ಕಳೆಯದೆ ಭೀಮಾ ಕೋರೆಗಾವ ವೀರಯೋಧರನ್ನ ನೆನೆದು. ಆ ಸ್ವಾಭಿಮಾನಿ ವಿಜಯೋತ್ಸವದ ಬಗ್ಗೆ ಎಲ್ಲರಿಗೂ ತಿಳಿಸೋಣ..
~ Veeresh Nk