ಮಹಾರಾಷ್ಟ್ರದ ಆಸ್ಪತ್ರೆಯಲ್ಲಿ ಬೆಂಕಿ ಅವಘಡದಲ್ಲಿ 10 ಮಕ್ಕಳು ಸಾವು; ತನಿಖೆಗೆ ಆದೇಶಿಸಿದ ಸಿಎಂ ಠಾಕ್ರೆ

ಮಹಾರಾಷ್ಟ್ರ: ಮಹಾರಾಷ್ಟ್ರದ ಭಂಡಾರ ಜಿಲ್ಲೆಯ ಜನರಲ್ ಆಸ್ಪತ್ರೆಯಲ್ಲಿ ನಡೆದ ಬೆಂಕಿ ಅವಘಡದಲ್ಲಿ ಇಂದು 10 ಮಕ್ಕಳು ಸಾವನ್ನಪ್ಪಿದ್ದು, ಈ ಘಟನೆಗೆ ವಿಷಾದ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಘಟನೆ ಸಂಬಂಧ ತನಿಖೆಗೆ ಆದೇಶಿಸಿದ್ದಾರೆ.

ಸಂಪೂರ್ಣ ಘಟನೆಯ ಬಗ್ಗೆ ಮಾಹಿತಿ ಕಲೆ ಹಾಕಿ ತನಿಖೆ ನಡೆಸುವಂತೆ ಮಹಾರಾಷ್ಟ್ರದ ಆರೋಗ್ಯ ಸಚಿವ ರಾಜೇಶ್ ತೋಪ್ ಅವರಿಗೆ ಉದ್ಧವ್​ ಠಾಕ್ರೆ ಸೂಚಿಸಿದ್ದಾರೆ. ಇಷ್ಟೇ ಅಲ್ಲದೇ, ಜಿಲ್ಲಾಧಿಕಾರಿ ಮತ್ತು ಎಸ್​ಪಿಗೆ ಈ ದುರಂತಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಸಿಎಂ ಉದ್ಧವ್ ಠಾಕ್ರೆ ಸೂಚನೆ ನೀಡಿದ್ದಾರೆ.

ಸಿಎಂ ಉದ್ದವ್​ ಠಾಕ್ರೆ ಮೃತಪಟ್ಟ ನವಜಾತ ಶಿಶುಗಳ ಕುಟುಂಬಗಳಿಗೆ ತಲಾ 5 ಲಕ್ಷ ರೂ.ಪರಿಹಾರವನ್ನು ಘೋಷಿಸಿದ್ದಾರೆ. ಇಂದು ಸಂಜೆ 5 ಗಂಟೆಗೆ ಅವರು ಭಂಡಾರಾ ಜಿಲ್ಲಾಸ್ಪತ್ರೆಗೆ ಭೇಟಿ ನೀಡಲಿದ್ದಾರೆ.

ಮಹಾರಾಷ್ಟ್ರದ ಭಂಡಾರ ಜಿಲ್ಲೆಯ ಜನರಲ್ ಆಸ್ಪತ್ರೆಯಲ್ಲಿ ಈ ಘಟನೆ ಸಂಭವಿಸಿದ್ದು, ರಾತ್ರಿ 2 ಗಂಟೆ ಸುಮಾರಿಗೆ ನವಜಾತ ಶಿಶುಗಳಿದ್ದ ತೀವ್ರ ನಿಗಾಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೆಲವೇ ನಿಮಿಷಗಳಲ್ಲಿ ಬೆಂಕಿಯ ಕೆನ್ನಾಲಿಗೆ ಇಡೀ ವಾರ್ಡ್‌ ವ್ಯಾಪಿಸಿದ್ದು, ವಾರ್ಡ್ ನಲ್ಲಿದ್ದ 10 ಮಕ್ಕಳು ಸಾವನ್ನಪ್ಪಿವೆ.

ಬೆಂಕಿ ಗೋಚರವಾಗುತ್ತಿದ್ದಂತೆಯೇ ಸಿಬ್ಬಂದಿಗಳು ಬೆಂಕಿ ನಂದಿಸುವ ಕಾರ್ಯಕ್ಕೆ ಮುಂದಾದರು. ಅಲ್ಲದೆ ಶಿಶುಗಳನ್ನು ಬೇರೆಡೆ ರವಾನೆ ಮಾಡುವ ಕಾರ್ಯ ಮಾಡಿದರಾದರೂ, ಅಷ್ಟುಹೊತ್ತಿಗಾಗಲೇ ಬೆಂಕಿ ಕ್ಷಣಮಾತ್ರದಲ್ಲಿ ಇಡೀ ವಾರ್ಡ್ ಅನ್ನು ವ್ಯಾಪಿಸಿತು. ಪರಿಣಾಮ 10 ಮಕ್ಕಳು ಸಾವನ್ನಪ್ಪಿದ್ದರು. ಸಿಬ್ಬಂದಿಗಳ ಹರಸಾಹಸದಿಂದಾಗಿ 7 ಮಕ್ಕಳನ್ನು ರಕ್ಷಿಸಲಾಗಿದೆ. ಮೃತಪಟ್ಟ ಮಕ್ಕಳು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ.

ಬೆಂಕಿ ಕಾಣಿಸಿಕೊಂಡುರಿವುದಕ್ಕೆ ನಿಖರವಾದ ಕಾರಣ ತಿಳಿದುಬಂದಿಲ್ಲ, ಮೇಲ್ನೋಟಕ್ಕೆ ಶಾರ್ಟ್ ಸರ್ಕ್ಯೂಟ್ ಆಗಿರಬಹುದು ಎಂದು ಹೇಳಲಾಗುತ್ತಿದೆ. ಈ ಕುರಿತು ತನಿಖೆ ನಡೆಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

3 ಮಕ್ಕಳು ಬೆಂಕಿಗಾಹುತಿ, 7 ಮಕ್ಕಳು ಉಸಿರುಗಟ್ಟಿ ಸಾವು
ಇನ್ನು ಈ ಕುರಿತಂತೆ ಮಾಹಿತಿ ನೀಡಿದ ಮಹಾರಾಷ್ಟ್ರ ಆರೋಗ್ಯ ಸಚಿವಾಲಯ ದುರ್ಘಟನೆಯಲ್ಲಿ ಒಟ್ಟು 10 ಮಕ್ಕಳು ಸಾವನ್ನಪ್ಪಿದ್ದು, 3 ಮಕ್ಕಳು ಬೆಂಕಿಗಾಹುತಿದಿವೆ. ಉಳಿದ 7 ಮಕ್ಕಳು ಬೆಂಕಿಯಿಂದ ಉಂಟಾದ ಹೊಗೆಯಿಂದಾಗಿ ಉಸಿರುಗಟ್ಟಿ ಸಾವನ್ನಪ್ಪಿವೆ ಎಂದು ಮಾಹಿತಿ ನೀಡಿದೆ.

ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಭಂಡಾರಾ ಜಿಲ್ಲಾಸ್ಪತ್ರೆಯ ದುರಂತಕ್ಕೆ ಕಂಬನಿ ಮಿಡಿದಿದ್ದಾರೆ. ನಾವು ನವಜಾತ ಶಿಶುಗಳನ್ನು ಕಳೆದುಕೊಂಡಿದ್ದೇವೆ. ಘಟನೆಯಲ್ಲಿ ಸಾವನ್ನಪ್ಪಿದ ಮಕ್ಕಳ ಕುಟುಂಬಗಳಿಗೆ ಸಂತಾಪ ಸೂಚಿಸುತ್ತೇನೆ. ಇನ್ನು ದುರಂತದಲ್ಲಿ ಗಾಯಗೊಂಡಿರುವ ಮಕ್ಕಳು ಆದಷ್ಟು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

ನವಜಾತ ಶಿಶುಗಳ ದುರ್ಮರಣ ಘಟನೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಂತಾಪ ಸೂಚಿಸಿದ್ದಾರೆ. ಟ್ವೀಟ್ ಮಾಡಿರುವ ಅವರು, ಮಹಾರಾಷ್ಟ್ರದ ಭಂಡಾರಾ ಜಿಲ್ಲಾಸ್ಪತ್ರೆಯಲ್ಲಿ ನಡೆದ ಘಟನೆ ಅತ್ಯಂತ ದುರಂತ ಮತ್ತು ದುರದೃಷ್ಟಕರ. ಮಕ್ಕಳನ್ನು ಕಳೆದುಕೊಂಡ ಕುಟುಂಬಗಳಿಗೆ ನಾನು ಸಂತಾಪ ಸೂಚಿಸುತ್ತಿದ್ದೇನೆ. ಕಂದಮ್ಮಗಳನ್ನು ಕಳೆದುಕೊಂಡ ಕುಟುಂಬಗಳಿಗೆ ಸೂಕ್ತ ಮತ್ತು ಅಗತ್ಯ ಪರಿಹಾರ ನೀಡುವಂತೆ ನಾನು ಮಹಾರಾಷ್ಟ್ರ ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *