ಸಂಪುಟ ವಿಸ್ತರಣೆಯ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಏನು ಹೇಳಿದ್ದಾರೆ ನೋಡಿ…

ಕೊಪ್ಪಳ: ಬಿಜೆಪಿಯೊಳಗಿನ ಸಂಪುಟ ವಿಸ್ತರಣೆಯ ಕಸರತ್ತು ಮುಂದುವರಿದಿದ್ದು, ಈ ಮಧ್ಯೆ ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಯಾವಾಗ ಪಕ್ಷದ ವರಿಷ್ಠರು ಸಮ್ಮತಿ ಸೂಚಿಸುತ್ತಾರೋ ಆಗ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಹೇಳಿಕೊಳ್ಳುವ ಮೂಲಕ ಜಾರಿಕೊಳ್ಳುವ ಪ್ರಯತ್ನ ಮಾಡಿದ್ದಾರೆ.

ಕೊಪ್ಪಳದ ಬಸಾಪುರ ಏರ್‌ ಸ್ಟ್ರಿಪ್‌ ನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರೋಕ್ಷವಾಗಿ ಸಂಪುಟ ಪುನರ್ರಚನೆ ಇಲ್ಲ, ಸಂಕ್ರಾಂತಿ ನಂತರ ಸಂಪುಟ ವಿಸ್ತರಣೆ ಆಗಲಿದೆ ಎಂದು ತಿಳಿಸಿದರು.

ರಾಜ್ಯದ ಬಿಜೆಪಿ ಸಚಿವರು, ಶಾಸಕರ ಜೊತೆ ಯುವರಾಜ್ ಫೋಟೋ ತೆಗೆಸಿಕೊಂಡದ್ದು ಅಪರಾಧ ಏನಲ್ಲ. ಆದರೆ ಯುವರಾಜ ಪ್ರಕರಣ ತನಿಖೆ ಹಂತದಲ್ಲಿದೆ. ತನಿಖೆ ಮುಗಿದ ನಂತರ ಸತ್ಯಾಸತ್ಯತೆ ಹೊರಬೀಳಲಿದೆ ಎಂದು ಹೇಳಿದರು.

ಕೋವಿಡ್ ಕಾರಣ, ಅತಿವೃಷ್ಟಿ, ಬರಗಾಲದ ಆಪತ್ತುಗಳಿಂದಾಗಿ ನಿರೀಕ್ಷಿಸಿದಷ್ಟು ಸರಕಾರದಿಂದ ಕೆಲಸ ಮಾಡಲಾಗಿಲ್ಲ. ರಾಜ್ಯದ ಆರ್ಥಿಕ ಸ್ಥಿತಿ ಸರಿ ಇಲ್ಲ. 40-50 ಸಾವಿರ ಬಜೆಟ್ ಖೋತಾ ಆಗಿದೆ. ಇವೆಲ್ಲವೂ ರಾಜ್ಯದ ಜನತೆಗೆ ಗೊತ್ತಿದೆ. ಜನರು ಸರಕಾರಕ್ಕೆ ಸಹಕಾರ ನೀಡಬೇಕು ಎಂದು ವಿವರಿಸಿದರು.

ದೇಶದಲ್ಲಿ ಮೊದಲ ಟಾಯ್ಸ್ ಕ್ಲಸ್ಟರ್ ಕಾರ್ಯಕ್ರಮಕ್ಕೆ ಭೂಮಿ ಪೂಜೆ ಮಾಡುತ್ತಿದ್ದೇನೆ. ಕೆಲಸ ಆರಂಭವಾದ ಬಳಿಕ ಪ್ರಧಾನಿ ಮೋದಿಯವರಿಂದ ಉದ್ಘಾಟನೆ ಮಾಡಿಸುವ ಅಪೇಕ್ಷೆ ಇದೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಸಚಿವರಾದ ಬಿ.ಸಿ.ಪಾಟೀಲ, ಆನಂದ್ ಸಿಂಗ್, ಸಂಸದ ಕರಡಿ ಸಂಗಣ್ಣ, ಶಾಸಕ ಹಾಲಪ್ಪ ಆಚಾರ್, ಪರಣ್ಣ ಮುನವಳ್ಳಿ, ಬಸವರಾಜ‌ ದಡೆಸೂಗುರು ಮತ್ತಿತರರು ಇದ್ದರು.

Leave a Reply

Your email address will not be published. Required fields are marked *