ಗೋಹತ್ಯೆ ನಿಷೇಧಕ್ಕೂ ಮೊದಲು ಬಿಜೆಪಿ ಬೆಂಬಲಿಗರು ನಡೆಸುತ್ತಿರುವ ದನದ ಮಾಂಸ ರಫ್ತು ನಿಲ್ಲಿಸಲಿ: ಬಿಜೆಪಿ ವಿರುದ್ಧ ಗುಡುಗಿದ ಸಿದ್ದರಾಮಯ್ಯ

ಬೆಂಗಳೂರು: ಗೋಹತ್ಯೆ ನಿಷೇಧ ಮಾಡುವುದಾದರೆ ಇಡೀ ದೇಶದಲ್ಲಿ ಮಾಡಲಿ, ಜೊತೆಗೆ ದೇಶದಲ್ಲಿ ಗೋ ಮಾಂಸ ರಫ್ತು ನಿಲ್ಲಿಸಲಿ, ಅದು ಅವರು ಮಾಡಲ್ಲ. ಏಕೆಂದರೆ ಬಿಜೆಪಿ ಬೆಂಬಲಿಗರೇ ಈ ದೇಶದಿಂದ ಹೊರ ದೇಶಕ್ಕೆ ದನದ ಮಾಂಸ ರಫ್ತು ಮಾಡುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗುಡುಗಿದ್ದಾರೆ.

ಗೋ ಹತ್ಯೆ ನಿಷೇಧ ಇಡೀ ದೇಶದಲ್ಲಿ ಆಗಲಿ. ಅದಕ್ಕೂ ಮೊದಲು ದೇಶದಲ್ಲಿ ಗೋ ಮಾಂಸ ರಫ್ತು ನಿಲ್ಲಿಸಿ. ಬಿಜೆಪಿಯವರು ಸಗಣಿ ಎತ್ತಿಲ್ಲ, ಗಂಜಲ ಬಾಚಿಲ್ಲ. ಆದರೆ ಗೋಮಾತೆ ಪೂಜೆ ಮಾಡುತ್ತೇವೆ ಎನ್ನುತ್ತಾರೆ. ಬಿಜೆಪಿ ಬೆಂಬಲಿಗರೇ ದನದ ಮಾಂಸ ರಫ್ತು ಮಾಡುತ್ತಾರೆ. ಬಿಜೆಪಿಯದ್ದು ದರಿದ್ರ ಸರ್ಕಾರ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಲೇವಡಿ ಮಾಡಿದರು.

ಅಲ್ಲದೆ ಬಿಜೆಪಿ ಸರ್ಕಾರದ ಜನ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ ರಸ್ತೆಗಿಳಿದು ಪ್ರತಿಭಟನೆ ನಡೆಸುವುದಾಗಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.

ಬಿಜೆಪಿ ಸರ್ಕಾರದ ಜನ ವಿರೋಧ ಕಾಯಿದೆಗಳನ್ನು ಇಟ್ಟುಕೊಂಡು ಶೀಘ್ರದಲ್ಲೇ ಬೀದಿಗಿಳಿದು ಹೋರಾಟ ಮಾಡುತ್ತೇವೆ. ಈ ವರ್ಷ ಸಂಘರ್ಷದ ವರ್ಷ. ಸರ್ಕಾರದ ವಿರುದ್ಧ ಹೋರಾಟ ಮಾಡುತ್ತೇವೆ. ಜ. 18ರವರೆಗೂ ಪಕ್ಷದ ಕಾರ್ಯಕ್ರಮ ಇದೆ. ನಂತರ ಪಕ್ಷದಲ್ಲಿ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ. ಇದಕ್ಕಾಗಿ ಜೈಲಿಗೆ ಹೋಗೋಕೂ ಸಿದ್ಧ. ಮೊದಲು ಹೋರಾಟ ಮಾಡುತ್ತೇವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಸಿದ್ದರಾಮಯ್ಯನವರ ನಿವಾಸದಲ್ಲಿ ಇಂದು ಬಿಜೆಪಿ ಸರ್ಕಾರದ ಐದು ಜನ ವಿರೋಧಿ ಕಾಯ್ದೆಗಳ ಬಗ್ಗೆ ಕಿರು ಪುಸ್ತಕ ಬಿಡುಗಡೆ ಮಾಡಲಾಯಿತು. ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಬಿಜೆಪಿ ಸರ್ಕಾರ ಐದು ಕಾಯ್ದೆಗಳನ್ನು ಜಾರಿಗೆ ತಂದಿದೆ. ಇದರಲ್ಲಿ ಸುಳ್ಳು ಯಾವುದು ಸತ್ಯ ಯಾವುದು ಎಂಬ ಅಂಶಗಳನ್ನು ಸೇರಿಸಿ ನಾವು ಒಂದು ಕಿರು ಪುಸ್ತಕವನ್ನು ಹೊರ ತಂದಿದ್ದೇವೆ. ಎಪಿಎಂಸಿ ಕಾಯ್ದೆ ತಿದ್ದುಪಡಿ, ಭೂ ಸುಧಾರಣೆ ಕಾಯ್ದೆ ತಿದ್ದುಪಡಿ, ಜಾನುವಾರು ಹತ್ಯೆ ನಿಷೇಧ ಕಾಯ್ದೆ 2020, ಅಗತ್ಯ ವಸ್ತುಗಳ ಕಾಯ್ದೆ ತಿದ್ದುಪಡಿ, ರೈತರೊಂದಿಗೆ ಕೃಷಿ ಬೆಲೆ ಖಾತ್ರಿ ಒಪ್ಪಂದ ಮತ್ತು ಕೃಷಿ ಸೇವೆಗಳ ಕಾಯ್ದೆ 2020 ಕಾಯ್ದೆಗಳ ಸರಿ -ತಪ್ಪುಗಳ ಅಂಶಗಳನ್ನು ಲಗತ್ತಿಸಿರುವ ಕಿರು ಹೊತ್ತಿಗೆ ಹೊರ ತರಲಾಗಿದೆ ಎಂದರು.

ಎಪಿಎಂಸಿ ಕ್ರಮೇಣ ಸತ್ತು ಹೋಗುತ್ತದೆ. ಎಪಿಎಂಸಿಯನ್ನು ಪೂರ್ತಿಯಾಗಿ ಮುಗಿಸಿಬಿಡುವುದು ಬಿಜೆಪಿ ಉದ್ದೇಶ. ಭೂ ಸುಧಾರಣಾ ಕಾಯ್ದೆಯಲ್ಲಿ ಯಾರು ಬೇಕಾದರೂ ವ್ಯವಸಾಯ ಮಾಡಬಹುದು ಮತ್ತು ಭೂಮಿ ತೆಗೆದುಕೊಳ್ಳಬಹುದು ಎಂದು ಹೇಳುತ್ತಾರೆ. ದೇವರಾಜ ಅರಸು ಅವರು ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ಉಳುವವನೆ ಭೂಮಿ ಒಡೆಯ ಎಂದು ಮಾಡಿದರು. ಅದರಿಂದ ಸಾವಿರಾರು ಜನ ಭೂ ಮಾಲೀಕರಾದರು. ಈಗ ಇದಕ್ಕೆ ತಿದ್ದುಪಡಿ ಮಾಡಿದ್ದಾರೆ. ಈಗ ಯಾರು ಬೇಕಾದರೂ ಭೂಮಿ ತೆಗೆದುಕೊಳ್ಳಬಹುದು ಎಂದು ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.

ಹೊಸ ಕಾಯ್ದೆಯಿಂದ ಅದಾನಿಯಂಥವರು ಬೇಕಾದರೂ ಕೃಷಿ ಭೂಮಿಯನ್ನು ತೆಗೆದುಕೊಳ್ಳಬಹುದು. ಇದು ಪ್ರವಾಹದ ಗೇಟನ್ನು ಓಪನ್ ಮಾಡಿದ ಹಾಗೆ. ಇದರಿಂದ ಸಣ್ಣ ರೈತರು ಜಮೀನು ಮಾರಾಟ ಮಾಡಿ ನಂತರ ದೊಡ್ಡ ಕಂಪನಿಯ ಅಧೀನದಲ್ಲಿ ಕೆಲಸ ಮಾಡುವುದಕ್ಕೆ ಹೋಗುತ್ತಾರೆ. ಈಗ ಉಳ್ಳವನೇ ಭೂಮಿ ಒಡೆಯ ಎಂಬಂತಾಗಿದೆ. ಇದು ಬಹಳ ಅಪಾಯಕಾರಿ. ಕೃಷಿ ಭೂಮಿ ರಿಯಲ್ ಎಸ್ಟೇಟ್, ಮೋಜು ಮಸ್ತಿಗೆ ಉಪಯೋಗವಾಗುತ್ತದೆ. ನಾನು ಕೃಷಿಕನಲ್ಲದವರಿಗೆ ಅವಕಾಶ ಮಾಡಿಕೊಟ್ಟಿರಲಿಲ್ಲ. ಆದರೆ, ಸಿದ್ದರಾಮಯ್ಯ ಅವರೇ 79- ಎ ಮತ್ತು ಬಿಗೆ ತಿದ್ದುಪಡಿ ತರಲು ಹೊರಟಿದ್ದರು ಎಂದು ಬಿಜೆಪಿ ನಾಯಕರು ಅಪಪ್ರಚಾರ ಮಾಡುತ್ತಿದ್ದಾರೆ. ಜನರಿಗೆ ಸುಳ್ಳು ಸುದ್ದಿ ಹರಡುತ್ತಿದ್ದಾರೆ. ನಾನು ಮಾಡಿದ್ದು ಕೃಷಿಯೇತರ ಆದಾಯ 25 ಲಕ್ಷ ಅಂತ. ಆದರೆ, ಬಿಜೆಪಿವರು ಸುಳ್ಳು ಹೇಳುತ್ತಿದ್ದಾರೆ. ಇದೆಲ್ಲವನ್ನೂ ಈ ಕಿರುಹೊತ್ತಿಗೆಯಲ್ಲಿ ಹೇಳಿದ್ದೇವೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಬಿಜೆಪಿಯ ಕಾಯ್ದೆಗಳ ಬಗ್ಗೆ ವಿಪಕ್ಷವಾಗಿರುವ ಕಾಂಗ್ರೆಸ್ ನಿಲುವೇನು ಅನ್ನೋದನ್ನು ಇದರಲ್ಲಿ ಉಲ್ಲೇಖ ಮಾಡಿದ್ದೇವೆ. ಸುಗ್ರೀವಾಜ್ಞೆ ತರುವುದು ಅಗತ್ಯ ಮತ್ತು ಅನಿವಾರ್ಯತೆ ಇದ್ದಾಗ ಮಾತ್ರ. ಆದರೆ, ಯಾವುದೇ ಅಗತ್ಯವಿಲ್ಲದಿದ್ದರೂ ಬಿಜೆಪಿ ಸರ್ಕಾರ ಎಲ್ಲ ಕಾಯ್ದೆಗಳನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರುತ್ತಿದೆ. ಈ ಮೂಲಕ ಸರ್ಕಾರ ರೈತರನ್ನು ನಾಶ ಮಾಡಲು ಹೊರಟಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗೋಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆಯನ್ನು ಸರ್ಕಾರ ಜಾರಿಗೆ ತಂದಿದೆ. ಸಗಣಿ ಎತ್ತುದವರು, ಗಂಜಲ ಎತ್ತದವರು ಹಸುಗಳ ಬಗ್ಗೆ ಮಾತನಾಡ್ತಾರೆ. ಹಾಗಾದರೆ, ವಯಸ್ಸಾದ ಹಸುಗಳನ್ನ ಏನು ಮಾಡಬೇಕು ಹೇಳಿ. ಎತ್ತುಗಳು ಪ್ರಯೋಜನಕ್ಕೆ ಬರಲ್ಲ ಎಂದರೆ ಅವುಗಳನ್ನು ಏನು ಮಾಡಬೇಕು? ಹಸುಗಳನ್ನು ಗೋ ಶಾಲೆಗೆ ಕೊಟ್ಟರೆ ನಾವೇ ದುಡ್ಡು ಕೊಡಬೇಕಂತೆ. ಒಂದು ಹಸು 7 ಕೆಜಿ ಮೇವು ಸೇವಿಸುತ್ತದೆ. ಅದಕ್ಕೆ ಪ್ರತಿದಿನ 100 ರೂ. ಆಗಲಿದೆ. ಗೋಹತ್ಯೆ ನಿಷೇಧ ಮಾಡಬೇಕಾದರೆ ಇಡೀ ದೇಶದಲ್ಲಿ ಬ್ಯಾನ್ ಮಾಡಿ. ದೇಶದಲ್ಲಿ ಗೋ ಮಾಂಸ ರಫ್ತು ಮೊದಲು ನಿಲ್ಲಿಸಿ. ಆ ಗೋಮಾಂಸ ದೇವರಲ್ವಾ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ನಾನು ಬೆಳಿಗ್ಗೆ ಎದ್ದರೆ ಹಸುವಿನ ಮುಖ ನೋಡುತ್ತಿದ್ದೆ. ನಮ್ಮ ತಂದೆ ತಾಯಿ ಇದನ್ನು ಹೇಳಿಕೊಡುತ್ತಿದ್ದರು. ಇದ್ಯಾವುದನ್ನೂ ಮಾಡದ ಬಿಜೆಪಿಯವರು ಈಗ ಗೋವುಗಳ ಬಗ್ಗೆ ಮಾತನಾಡುತ್ತಾರೆ. ಬಿಜೆಪಿ ಸರ್ಕಾರ ಗೋ ಹತ್ಯೆ ನಿಷೇಧ ಕಾಯ್ದೆ ತಂದಿದೆ. ನಾವು ನಿಜವಾದ ಗೋಮಾತೆಯ ಪೂಜೆ ಮಾಡುವವರು. ಚಿಕ್ಕವರಿದ್ದಾಗ ಬೆಳಗೆದ್ದ ತಕ್ಷಣ ಎತ್ತುಗಳ ಮುಖ ನೋಡುತ್ತಿದ್ದೆವು. ನಮ್ಮ ಹಿರಿಯರು ಈ ಸಂಸ್ಕೃತಿ ಹೇಳಿಕೊಟ್ಟಿದ್ದರು. ಎತ್ತಿನ ಮುಖ ನೋಡಬೇಕು ಅಥವಾ ಸೂರ್ಯನ ಮುಖ ನೋಡಬೇಕು ಎಂದು ಹೇಳಿಕೊಟ್ಟಿದ್ದರು. ನಮ್ಮದು ತೊಟ್ಟಿ ಮನೆ, ಎದ್ದ ತಕ್ಷಣ ಎತ್ತು ನೋಡುತ್ತಿದ್ದೆವು. ನಮ್ಮಣ್ಣ ಕೂಡ ಎತ್ತು ಸಾಕಿ ಜಾತ್ರೆಗೆ ಮಾರುತ್ತಿದ್ದ. ಈಗ ಜೋಡೆತ್ತು ಖರೀದಿಸಬೇಕಾದರೆ 2 ಲಕ್ಷ ರೂ. ಬೇಕು. ಯಾವುದೇ ರಾಸು 12 ವರ್ಷವಾದ ನಂತರ ಮುದಿಯಾಗುತ್ತದೆ. ಕರು ಹಾಕದ ಮುದಿ ಹಸುವನ್ನು ಸಾಕಲು ಕಷ್ಟವಾಗುತ್ತದೆ. ಒಂದು ಹಸುಗೆ 7 ಕೆಜಿ ಹುಲ್ಲು ಬೇಕಾಗುತ್ತದೆ. ಬಿಜೆಪಿಯವರು ಸಗಣಿ ಎತ್ತಿಲ್ಲ, ಗಂಜಲ ಬಾಚಿಲ್ಲ. ಆದರೆ ಗೋಮಾತೆ ಪೂಜೆ ಮಾಡುತ್ತೇವೆ ಎನ್ನುತ್ತಾರೆ. ಆದರೆ ಬಿಜೆಪಿ ಬೆಂಬಲಿಗರೇ ದನದ ಮಾಂಸ ರಫ್ತು ಮಾಡುತ್ತಾರೆ. ಮೊದಲು ದನದ ಮಾಂಸ ಆಮದು ನಿಲ್ಲಿಸಿ ಎಂದು ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.

ಬಿಜೆಪಿಯವರು ದರಿದ್ರದವರು. ಅವರದ್ದು ದರಿದ್ರ ಸರ್ಕಾರ. ನಮ್ಮ ಹಳ್ಳಿಯಲ್ಲಿ ‘ನೀನು ತಂದಾಕು ನಾನು‌ ಉಂಡಾಕ್ತೀನಿ’ ಅನ್ನೋ ಜಾಯಮಾನ ಬಿಜೆಪಿಯವರದ್ದು. ಬಿಜೆಪಿ ಅವರೇ ಗೋಮಾಂಸವನ್ನು ರಪ್ತು ಮಾಡುವವರು. ಗೋ ಹತ್ಯೆ ನಿಷೇಧದಿಂದ ಹಳ್ಳಿಯ ರೈತರ ಆರ್ಥಿಕತೆ ಮೇಲೆ ದುಷ್ಪರಿಣಾಮ ಬೀರುತ್ತದೆ. ಚರ್ಮೋದ್ಯಮದ ಮೇಲೂ ದುಷ್ಪರಿಣಾಮ ಬೀರುತ್ತದೆ. ನರೇಂದ್ರ ಮೋದಿ ಅವರು ಗ್ಯಾಸ್ ಮತ್ತು ಪೆಟ್ರೋಲ್ ಬಗ್ಗೆ ಮಾತನಾಡುವುದಿಲ್ಲ. ಇವರು ಬರುವ ಮುನ್ನ 300 ರೂಪಾಯಿ ಗ್ಯಾಸ್ ರೇಟ್ ಇತ್ತು. ಈಗ 700 ರೂ. ಆಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧವೂ ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ನಾನು ಶಾದಿ ಭಾಗ್ಯ ಯೋಜನೆ ತಂದಾಗ ಯಡಿಯೂರಪ್ಪ ವಿರೋಧ ಮಾಡಿದ್ದರು. ಆದರೆ, ಈಗ ಬ್ರಾಹ್ಮಣರಿಗೆ ಕೊಡುತ್ತಾ ಇದ್ದಾರೆ. ಅದಕ್ಕೆ ನಾನು ವಿರೋಧ ವ್ಯಕ್ತಪಡಿಸಿಲ್ಲ. ಎಲ್ಲಾ ಬಡವರಿಗೆ ನೀಡಲಿ ಎಂದು ಹೇಳುತ್ತಿದ್ದೇನೆ ಎಂದು ರಾಜ್ಯ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

Leave a Reply

Your email address will not be published. Required fields are marked *