ಗಲ್ಫ್ ರಾಷ್ಟ್ರಗಳಲ್ಲೂ ಕಾಂಗ್ರೆಸ್ ಮುಖಂಡರಿಂದ ಮತಭೇಟೆ: ಪ್ರಚಾರಕ್ಕಾಗಿ ಸೌದಿಗೆ ತೆರಳಿದ ಕರಾವಳಿಯ ಕೈ ನಾಯಕರು!
ನ್ಯೂಸ್ ಕನ್ನಡ ವರದಿ(09-04/2018): ಚುನಾವಣೆ ಸಮೀಪಿಸುತ್ತಿರುವಂತೆ ಮತದಾರರನ್ನು ಓಲೈಸಲು ತಂತ್ರಗಾರಿಕೆಯಲ್ಲಿ ನಿರತರಾದ ಕರಾವಳಿಯ ಕಾಂಗ್ರೆಸ್ ನಾಯಕರು ಗಲ್ಫ್ ರಾಷ್ಟ್ರಗಳಲ್ಲಿ ಪ್ರಚಾರ ಸಭೆಗಳಲ್ಲಿ ಭಾಗವಹಿಸುವ ಮೂಲಕ ಮತ ಭೇಟೆಯಲ್ಲಿ ತೊಡಗಿದ್ದಾರೆ.
ಕರಾವಳಿ ಭಾಗದ ಸಾಕಷ್ಟು ಜನರು ಗಲ್ಫ್ ರಾಷ್ಟ್ರಗಳಾದ ಸೌದಿ, ಯುಎಇ, ಕುವೈತ್,ಬಹರೈನ್ ಹಾಗೂ ಕತಾರ್ ದೇಶಗಳಲ್ಲಿ ಉದ್ಯೋಗದಲ್ಲಿ ತೊಡಗಿಕೊಂಡಿದ್ದು, ಇವರನ್ನು ಓಲೈಸುವ ಸಲುವಾಗಿ ಕರಾವಳಿಯ ಸಚಿವರು ಹಾಗೂ ಶಾಸಕರು ಅಲ್ಲಿ ಪ್ರಚಾರ ಸಭೆಗಳನ್ನು ನಡೆಸುತ್ತಿದ್ದಾರೆ ಎಂದು ವರದಿಗಳು ತಿಳಿಸಿದೆ .ಕರಾವಳಿಯ ಸಚಿವರಾದ ರಮಾನಾಥ ರೈ, ಯು.ಟಿ.ಕಾದರ್ ಹಾಗೂ ಶಾಸಕರಾದ ಮೊಯ್ದಿನ್ ಬಾವ ಮತ್ತು ವಿನಯ ಕುಮಾರ್ ಸೊರಕೆ ಮತಭೇಟೆಗಾಗಿ ಗಲ್ಫ್ ಪ್ರವಾಸ ಕೈಗೊಂಡ ಪ್ರಮುಖರಾಗಿದ್ದಾರೆ.
ಸೌದಿ ಅರೇಬಿಯಾದ ಜೆಡ್ಡಾದ ಇಂಪಾಲಾ ಗಾರ್ಡನ್ನಲ್ಲಿ ಇದೇ 6ರಂದು ಸಂಜೆ 4 ಗಂಟೆಗೆ ಕಾಂಗ್ರೆಸ್ ಪ್ರಚಾರ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಇದಲ್ಲಿ ಸಚಿವ ರಮಾನಾಥ ರೈ, ಯು.ಟಿ.ಕಾದರ್ ಶಾಸಕರಾದ ಮೊಯ್ದಿನ್ ಬಾವ ಹಾಗೂ ವಿನಯ ಕುಮಾರ್ ಸೊರಕೆ ಪಾಲ್ಗೊಂಡಿದ್ದರು. ಈ ಕುರಿತು ಬ್ಯಾನರ್ವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಅದಲ್ಲದೇ ಪ್ರಚಾರ ಸಭೆಯ ವಿಡಿಯೊ ತುಣುಕುಗಳು ಸಚಿವರ ಶಾಸಕರ ಫೇಸ್ ಬುಕ್ ಪೇಜ್ ಗಳಲ್ಲೂ ರಾರಾಜಿಸುತ್ತಿದೆ.