ಇಂಡೋನೇಷ್ಯಾದಲ್ಲಿ 62 ಪ್ರಯಾಣಿಕರಿದ್ದ ವಿಮಾನ ಪತನ; ಸಮುದ್ರದಲ್ಲಿ ದೇಹಗಳ ಭಾಗಗಳು, ಅವಶೇಷಗಳು ಪತ್ತೆ

ಜಕಾರ್ತ: ಇಂಡೋನೇಷ್ಯಾದ ರಾಜಧಾನಿ ಜಕಾರ್ತದಲ್ಲಿ 62 ಪ್ರಯಾಣಿಕರನ್ನು ಹೊತ್ತೊಯ್ದಿದ್ದ ವಿಮಾನವೊಂದು ನಿನ್ನೆ ಹಾರಾಟ ಆರಂಭಿಸಿದ ನಾಲ್ಕೇ ನಿಮಿಷಗಳಲ್ಲಿ ರಾಡಾರ್​ ಸಂಪರ್ಕ ಕಡಿತಗೊಂಡು ಸ್ವಲ್ಪ ಹೊತ್ತಿನಲ್ಲೇ ಪತನಗೊಂಡಿದೆ. ಶ್ರೀವಿಜಯ ಎಂಬ ವಿಮಾನ ಶನಿವಾರ ಸಂಜೆ ಜಕಾರ್ತದಿಂದ ಪೋಂಟಿಯಾನಕ್​ಗೆ ಹೊರಟಿತ್ತು. ಆದರೆ, ಟೇಕಾಫ್ ಆದ ಕೆಲವು ಸಮಯದಲ್ಲೇ ವಿಮಾನ ಪತನಗೊಂಡಿದೆ.

ಶ್ರೀವಿಜಯ ವಿಮಾನ ಟೇಕಾಫ್ ಆಗುತ್ತಿದ್ದಂತೆ ಸಂಪರ್ಕ ಕಡಿದುಕೊಂಡಿತ್ತು. ನಾಪತ್ತೆಯಾಗಿದ್ದ ಆ ವಿಮಾನ ಪತನಗೊಂಡಿರುವ ಶಂಕೆ ವ್ಯಕ್ತವಾಗಿತ್ತು. ಇದೀಗ ವಿಮಾನ ಪತನಗೊಂಡಿರುವುದು ಖಚಿತವಾಗಿದೆ. ಇಂಡೋನೇಷ್ಯಾದ ದ್ವೀಪದ ಬಳಿ ವಿಮಾನದ ಅವಶೇಷಗಳು ಪತ್ತೆಯಾಗಿವೆ. 11 ಸಾವಿರ ಅಡಿ ಎತ್ತರದಿಂದ ಕೆಳಕ್ಕೆ ಉರುಳಿದ ಶ್ರೀವಿಜಯ ವಿಮಾನದಲ್ಲಿದ್ದ ಪ್ರಯಾಣಿಕರು ಬದುಕಿರುವ ಸಾಧ್ಯತೆಯಿಲ್ಲ.

ಇಂಡೋನೇಷ್ಯಾದ ದ್ವೀಪಗಳಾದ ಲಕಿ ಮತ್ತು ಲಾಂಕಾಂಗ್ ನಡುವೆ ವಿಮಾನ ಪತನಗೊಂಡಿರುವ ಸಾಧ್ಯತೆಯಿದೆ. ಬಸರ್ನಾಸ್​ ಏಜೆನ್ಸಿಯಿಂದ ವಿಮಾನ ಪತನಗೊಂಡಿದೆ ಎನ್ನಲಾದ ಜಾಗದಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಲಾಂಕಾಂಗ್ ದ್ವೀಪದ ಮೀನುಗಾರರು ವಿಮಾನದ ಅವಶೇಷಗಳು ಸಿಕ್ಕಿರುವ ಬಗ್ಗೆ ಮಾಹಿತಿ ನೀಡಿದ್ದು, ನಮಗೆ ಭಾರೀ ಸ್ಫೋಟದ ಸದ್ದು ಕೇಳಿಸಿತು. ಬಾಂಬ್ ಸ್ಫೋಟವಾದಂತೆ ನಮಗೆ ಭಾಸವಾಯಿತು. ವಿಮಾನ ನಾಪತ್ತೆಯಾದ ಸಮಯದಲ್ಲೇ ಸಮುದ್ರದಲ್ಲಿ 2 ಮೀಟರ್ ಎತ್ತರದ ಅಲೆಗಳು ಎದ್ದಿತ್ತು. ಆ ಅಲೆಗಳು ನಮ್ಮ ಬೋಟಿಗೆ ಅಪ್ಪಳಿಸಿತ್ತು. ಹೀಗಾಗಿ, ವಿಮಾನ ಸಮುದ್ರದೊಳಗೆ ಬಿದ್ದಿರುವ ಸಾಧ್ಯತೆಯಿದೆ ಎಂದಿದ್ದಾರೆ.

ಪತನಗೊಂಡಿರುವ ವಿಮಾನದಲ್ಲಿ 7 ಮಕ್ಕಳು, 43 ಪ್ರಯಾಣಿಕರು ಹಾಗೂ 12 ಸಿಬ್ಬಂದಿಗಳಿದ್ದರು. ವಿಮಾನ ಪತನಕ್ಕೆ ಇನ್ನೂ ಕಾರಣಗಳು ತಿಳಿದುಬಂದಿಲ್ಲ. ಇದುವರೆಗೂ ಯಾರ ಮೃತದೇಹಗಳೂ ಪತ್ತೆಯಾಗಿಲ್ಲ. ಹಾಗೇ, ವಿಮಾನದ ಪೂರ್ತಿ ಕಳೆಬರ ಕೂಡ ಪತ್ತೆಯಾಗಿಲ್ಲ. ಜಕಾರ್ತ ವಿಮಾನ ನಿಲ್ದಾಣದಿಂದ 20 ಕಿ.ಮೀ. ದೂರದಲ್ಲಿ ಪತ್ತೆಯಾಗಿರುವ ವಿಮಾನದ ಅವಶೇಷಗಳು ಶ್ರೀವಿಜಯ ವಿಮಾನದ ಅವಶೇಷಗಳೇ ಎನ್ನಲಾಗಿದ್ದು, ಅಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ.

Leave a Reply

Your email address will not be published. Required fields are marked *