ಸಂಪುಟ ವಿಸ್ತರಣೆ ಸರ್ಕಸ್; ಸಿಎಂ ದೆಹಲಿಗೆ ದೌಡು; ಶೀಘ್ರದಲ್ಲೇ ಶುಭ ಸುದ್ದಿ ಸಿಗಲಿದೆ ಎಂದ ಯಡಿಯೂರಪ್ಪ
ನವದೆಹಲಿ: ಬಿಜೆಪಿಗೊಳಗೆ ಸಂಪುಟ ವಿಸ್ತರಣೆಗೆ ಸಂಬಂಧಿಸಿ ಗುದ್ದಾಟ ನಡೆಯುತ್ತಲೇ ಇದ್ದು, ಈ ಮಧ್ಯೆ ಇಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ದೆಹಲಿಗೆ ದೌಡಾಯಿಸಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಈ ವೇಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಉಪಸ್ಥಿತರಿದ್ದರು.
ಚರ್ಚೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಮಂತ್ರಿ ಮಂಡಲ ವಿಸ್ತರಣೆ ಕುರಿತಂತೆ ಕೇಂದ್ರದ ವರಿಷ್ಠರ ಜೊತೆಗೆ ಇಂದು ನಡೆದ ಸಭೆಯಲ್ಲಿ ಚರ್ಚೆ ನಡೆದಿದ್ದು, ಶೀಘ್ರದಲ್ಲೇ ಶುಭ ಸುದ್ದಿ ಸಿಗಲಿದೆ. ಕೇಂದ್ರ ನಾಯಕರ ಜೊತೆಗಿನ ಸಭೆ, ತಮಗೆ ತೃಪ್ತಿ , ಸಮಾಧಾನ ತಂದಿದೆ ಎಂದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನಿವಾಸದಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಸಭೆಯಲ್ಲಿ, ಮಂತ್ರಿ ಮಂಡಲ ವಿಸ್ತರಣೆ ಬಗ್ಗೆ ವಿಸ್ತೃತವಾದ ಚರ್ಚೆ ನಡೆದಿದೆ. ಕೇಂದ್ರ ನಾಯಕರಿಗೆ ಎಲ್ಲಾ ರೀತಿಯ ಮಾಹಿತಿಯನ್ನು ನೀಡಿದ್ದೇವೆ. ಆದಷ್ಟು ಶೀಘ್ರದಲ್ಲಿಯೇ ಶುಭ ಸುದ್ದಿ ಸಿಗುವ ವಿಶ್ವಾಸವಿದೆ ಎಂದರು.
ರಾಜ್ಯ ಸಚಿವ ಸಂಪುಟ ವಿಸ್ತರಣೆ ಕಳೆದ ಒಂದೂವರೆ ವರ್ಷದಿಂದ ಮುಂದೂಡಲ್ಪಡುತ್ತಲೇ ಇದೆ. ಒಂದೆಡೆ ಸಚಿವಾಕಾಂಕ್ಷಿಗಳ ಸಂಖ್ಯೆ ಏರುತ್ತಿದ್ದರೆ, ಮತ್ತೊಂದೆಡೆ ಬಿಜೆಪಿ ಹೈಕಮಾಂಡ್ ಈವರೆಗೆ ಸಂಪುಟವನ್ನು ವಿಸ್ತರಿಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಅವಕಾಶ ನೀಡಿಲ್ಲ. ಪರಿಣಾಮ ಬಿಎಸ್ವೈ ಪರಿಸ್ಥಿತಿ ಅಡಕತ್ತರಿಯಲ್ಲಿ ಸಿಲುಕಿದಂತಾಗಿದೆ. ಈ ನಡುವೆ ಕಳೆದ ವಾರ ಹೇಳಿಕೆ ನೀಡಿದ್ದ ವಿಧಾನ ಪರಿಷತ್ ಸದಸ್ಯ ಆರ್. ಶಂಕರ್ ತಮಗೆ ಖಚಿತವಾಗಿ ಸಚಿವ ಸ್ಥಾನ ನೀಡುವುದಾಗಿ ಬಿಎಸ್ವೈ ಮಾತು ನೀಡಿದ್ದಾರೆ ಎಂದು ತಿಳಿಸಿದ್ದರು.