ರಾಹುಲ್ ಗಾಂಧಿ ಮೇಲಿದ್ದ ನಿರೀಕ್ಷೆಗಳೆಲ್ಲಾ ಹುಸಿಯಾಗಿದೆ: ಶೋಭಾ ಕರಂದ್ಲಾಜೆ
ನ್ಯೂಸ್ ಕನ್ನಡ ವರದಿ-(09.04.18): ಕೋಲಾರ -ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ರಾಹುಲ್ ಗಾಂಧಿ ಪ್ರವಾಸ ಮಾಡಿದಾಗ ಶಾಶ್ವತ ನೀರಾವರಿ ಯೋಜನೆ ಬಗ್ಗೆ ಮಾತನಾಡದೆ, ಕೇವಲ ರಾಜಕೀಯ ಟೀಕೆಗೆ ಸೀಮಿತವಾಗಿದ್ದು ಜನರ ಸಮಸ್ಯೆಗಳ ಬಗ್ಗೆ ಅವರಿಗೆ ಇರುವ ಕಾಳಜಿಗೆ ಸಾಕ್ಷಿ ಎಂದು ಸಂಸದೆ ಶೋಭಾ ಕರಂದ್ಲಾಜೆ ಟೀಕಿಸಿದ್ದಾರೆ.
ಭಾನುವಾರ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಹುಲ್ಗಾಂಧಿ ಪ್ರವಾಸ ಸಂದರ್ಭದಲ್ಲಿ ಆ ಭಾಗದ ಕುಡಿಯುವ ನೀರಿನ ಸಮಸ್ಯೆ, ಶಾಶ್ವತ ನೀರಾವರಿ ಸಮಸ್ಯೆ ನಿವಾರಣೆ ಬಗ್ಗೆ ಮಾತನಾಡಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ ಎಂದು ದೂರಿದರು.
ಎತ್ತಿನಹೊಳೆ ಯೋಜನೆಯಡಿ ನೀರು ಕೊಡುತ್ತೇವೆಂದು ಸಾವಿರಾರು ಕೋಟಿ ರೂ.ವೆಚ್ಚದಲ್ಲಿ ಯೋಜನೆ ರೂಪಿಸಿದ ರಾಜ್ಯ ಸರ್ಕಾರ ಇದುವರೆಗೂ ನೀರು ಕೊಡುವುದಿರಲಿ, ಕಾಮಗಾರಿಯನ್ನೂ ಪೂರ್ಣ ಪ್ರಮಾಣದಲ್ಲಿ ಮುಗಿಸಿಲ್ಲ ಎಂದು ಹೇಳಿದರು. ಸಿಎಂ ಸಿದ್ದರಾಮಯ್ಯ ರೈತರ ಮೇಲಿನ ಪ್ರಕರಣ ವಾಪಸ್ ಪಡೆಯಲು ಹೋಗಿಲ್ಲ. ಆದರೆ, ಅಲ್ಪಸಂಖ್ಯಾತರ ಮೇಲಿನ ಪ್ರಕರಣ ವಾಪಸ್ ಪಡೆಯಲು ತೀರ್ಮಾನಿಸಿದ್ದಾರೆ. ಇದು ಓಟ್ ಬ್ಯಾಂಕ್ ರಾಜಕಾರಣವಾಗಿದೆ ಎಂದು ಹೇಳಿದರು.