ಹೊಸ ಇತಿಹಾಸ ಸೃಷ್ಟಿಸಿದ ಏರ್ ಇಂಡಿಯಾ ಮಹಿಳಾ ಪೈಲಟ್ಗಳು ! ಮಾಡಿದ ಸಾಧನೆ ನೋಡಿ ಬೆರಗಾಗುತ್ತೀರಿ…
ಬೆಂಗಳೂರು: ಸ್ಯಾನ್ ಫ್ರಾನ್ಸಿಸ್ಕೋದಿಂದ ಬೆಂಗಳೂರಿಗೆ ವಿಮಾನವನ್ನು ನೇರ ತಡೆರಹಿತವಾಗಿ(Non-stop ) ಹಾರಾಟ ನಡೆಸುವ ಮೂಲಕ ಏರ್ ಇಂಡಿಯಾ ಮಹಿಳಾ ಪೈಲಟ್ಗಳು ಹೊಸ ಇತಿಹಾಸವನ್ನು ಸೃಷ್ಟಿಸಿದ್ದಾರೆ.
ಹೊಸ ಒಂದು ಸಾಧನೆಯನ್ನು ಮಾಡುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ ನಾಲ್ವರು ಪೈಲಟ್ಗಳು. ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯ ಪೈಲಟ್ಗಳಾಗಿರುವ ಕ್ಯಾಪ್ಟನ್ ಜೋಯಾ ಅಗರ್ವಾಲ್, ಕ್ಯಾಪ್ಟನ್ ಪಾಪಗರಿ ತನ್ಮೈ, ಕ್ಯಾಪ್ಟನ್ ಆಕಾಶಾ ಸೋನಾವೇರ್ ಮತ್ತು ಕ್ಯಾಪ್ಟನ್ ಶಿವಾನಿ ಮನ್ಹಾಸ್ ಅವರನ್ನೊಳಗೊಂಡ ತಂಡವು ಹೊಸ ದಾಖಲೆ ನಿರ್ಮಿಸಿದೆ.
ಸ್ಯಾನ್ ಫ್ರಾನ್ಸಿಸ್ಕೊ- ಬೆಂಗಳೂರು ನಡುವಣ ವಿಶ್ವದ ಅತೀ ದೀರ್ಘ ವಾಯು ಮಾರ್ಗದ ವಿಮಾನಯಾನವನ್ನು ಸಂಪೂರ್ಣವಾಗಿ ನಿರ್ವಹಿಸುವ ಮೂಲಕ ಹೊಸ ಇತಿಹಾಸ ದಾಖಲಿಸಿದ್ದಾರೆ. ಸ್ಯಾನ್ ಫ್ರಾನ್ಸಿಸ್ಕೊ – ಬೆಂಗಳೂರು ನಡುವಿನ ಮಾರ್ಗವು ವಿಶ್ವದ ಅತ್ಯಂತ ದೀರ್ಘ ವಾಯು ಮಾರ್ಗವಾಗಿದ್ದು, ಈ ಮಾರ್ಗದಲ್ಲಿ ಸಂಚರಿಸುವ ವಿಮಾನಗಳು ಭೂಮಿಯ ಮೇಲಿನ ದುರ್ಗಮ ಪ್ರದೇಶ ಎನ್ನುವ ಉತ್ತರ ಧ್ರುವವನ್ನು ದಾಟಿ ಬರುತ್ತವೆ.
ಮಹಿಳಾ ಪೈಲಟ್ಗಳ ನಿರ್ವಹಣೆಯ ವಿಮಾನವು ಉತ್ತರ ಧ್ರುವದ ಮೇಲೆ ಹಾರಿ, ಅಟ್ಲಾಂಟಿಕ್ ಮಾರ್ಗದ ಮೂಲಕ, 16,000 ಕಿ.ಮೀ ದೂರವನ್ನು ಕ್ರಮಿಸಿ ಬೆಂಗಳೂರಿಗೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ.
ಶನಿವಾರ ರಾತ್ರಿ 8.30ಕ್ಕೆ (ಸ್ಥಳೀಯ ಸಮಯ) ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೊದಿಂದ ಹೊರಟ ಎಐ 176 ವಿಮಾನ, , ಸೋಮವಾರ (ಸ್ಥಳೀಯ ಸಮಯ) ಮುಂಜಾನೆ 4ಗಂಟೆ ಸುಮಾರಿನಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಿತು.
ತಮ್ಮ ಅನುಭವ….
ಉತ್ತರ ಧ್ರುವವನ್ನು ಹಾದು ಬಂದು ಹೊಸ ಇತಿಹಾಸ ಸೃಷ್ಟಿ ಮಾಡಿದ್ದೇವೆ. ಈ ಸಾಧನೆಯ ಭಾಗವಾಗಿರುವುದಕ್ಕೆ ನಮಗೆ ತುಂಬಾ ಹೆಮ್ಮೆ ಎನಿಸಿದೆ. ಈ ಮಾರ್ಗವು 10 ಟನ್ ಇಂಧನವನ್ನು ಉಳಿಸಿದೆ ಎಂದು ಕ್ಯಾಪ್ಟನ್ ಜೊಯಾ ಅಗರ್ವಾಲ್ ಹೇಳಿದ್ದರೆ, ಇದೊಂದು ರೋಮಾಂಚನಕಾರಿ ಅನುಭವ ನೀಡಿತು ಎಂದಿದ್ದಾರೆ ಶಿವಾನಿ ಮನ್ಹಾಸ್.