ಕೃಷಿ ಕಾಯ್ದೆಗೆ ನೀವಾಗಿಯೇ ತಡೆ ನೀಡುತ್ತೀರಾ ಅಥವಾ ಆ ಕೆಲಸವನ್ನು ನಾವು ಮಾಡಬೇಕೇ?: ಕೇಂದ್ರಕ್ಕೆ ಚಾಟಿ ಬೀಸಿದ ‘ಸುಪ್ರೀಂ’

ನವದೆಹಲಿ: ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆ ಹಾಗು ಕೇಂದ್ರ ಸರಕಾರ ನಡೆದುಕೊಳ್ಳುತ್ತಿರುವ ನಡೆಯ ಕುರಿತು ಗರಂ ಆಗಿರುವ ಸುಪ್ರೀಂ ಕೋರ್ಟ್, ಕೃಷಿ ಕಾಯ್ದೆಗೆ ನೀವಾಗಿಯೇ ತಡೆ ನೀಡುತ್ತೀರಾ ಅಥವಾ ಆ ಕೆಲಸವನ್ನು ನಾವು ಮಾಡಬೇಕೇ ? ಎಂದು ಕೇಂದ್ರ ಸರಕಾರವನ್ನು ಪ್ರಶ್ನಿಸಿದೆ.

ಕೇಂದ್ರದ ಕೃಷಿ ಸುಧಾರಣಾ ಕಾಯಿದೆ, ರೈತರ ಪ್ರತಿಭಟನೆ ಸಂಬಂಧಿಸಿದಂತೆ ಸಲ್ಲಿಸಲಾದ ಮನವಿ ಕುರಿತು ಇಂದು ವಿಚಾರಣೆ ನಡೆಸಿರುವ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಪೀಠ, ಕಾಯ್ದೆ ಕುರಿತು ದೇಶದಲ್ಲಿನ ಬೆಳವಣಿಗೆ ಕುರಿತು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದೆ.

3 ಕಾಯ್ದೆಗಳ ವಜಾ ಬಗ್ಗೆ ಕೇಂದ್ರ ಯಾಕೆ ಪ್ರತಿಕ್ರಿಯೆಗಳನ್ನು ನೀಡುತ್ತಿಲ್ಲ. ರೈತರ ಸಮಸ್ಯೆಗಳಿಗೆ ಇನ್ನು ಪರಿಹಾರ ಸಿಕ್ಕಿಲ್ಲ. ನೀವು ಎಂತಹ ಸಂಧಾನವನ್ನು ನಡೆಸುತ್ತಿದ್ದೀರಿ. ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ಏಕೆ ಪ್ರತಿಷ್ಠೆಯ ವಿಷಯವಾಗಿಸಿಕೊಂಡಿದೆ ಎಂದು ಅರ್ಥವಾಗುತ್ತಿಲ್ಲ.

ರೈತರು ಮತ್ತು ಸರ್ಕಾರದ ನಡುವಿನ ಮಾತುಕತೆ ಪದೇ ಪದೇ ಯಾಕೆ ವಿಫಲವಾಗುತ್ತಿದೆ ಎಂಬುದನ್ನು ನಾವು ವರದಿಗಳಿಂದ ಅರ್ಥ ಮಾಡಿಕೊಂಡ್ದೇವೆ. ಸರ್ಕಾರ ಅನುಚ್ಛೇದಗಳ ಬಗ್ಗೆ ಚರ್ಚೆ ನಡೆಸಲು ಬಯಸುತ್ತದೆ. ಆದರೆ ರೈತರು ಇಡೀ ಕಾನೂನನ್ನು ಹಿಂಪಡೆಯಲು ಒತ್ತಾಯಿಸುತ್ತಿದ್ದಾರೆ. ಆದ್ದರಿಂದ ನಾವು ಕೇಂದ್ರದಿಂದ ನೇಮಕಗೊಂಡ ಸಮಿತಿಯು ಯಾವುದೇ ನಿರ್ಧಾರ ಕೈಗೊಳ್ಳುವವರಗೆ ಹಾಲಿ ಕಾನೂನು ಅನುಷ್ಠಾನಕ್ಕೆ ತಡೆ ನೀಡುತ್ತೇವೆ.

ನಿಮಗೆ ಸರ್ಕಾರದ ಮೇಲೆ ನಂಬಿಕೆ ಇದೆಯೋ ಇಲ್ಲವೋ ಎಂಬುದಕ್ಕೆ ಪ್ರಾಧಾನ್ಯವಿಲ್ಲ. ಸುಪ್ರೀಂಕೋರ್ಟ್, ನಾವೇನು ಮಾಡಬೇಕೋ ಅದನ್ನು ನಾವು ಮಾಡುತ್ತೇವೆ. ಈ ಕಾನೂನು ಉತ್ತಮವಾಗಿದೆ ಎಂದು ಹೇಳುವ ಯಾವುದೇ ಅರ್ಜಿ ನಮ್ಮ ಮುಂದೆ ಬಂದಿಲ್ಲ. ಪ್ರತಿಭಟನೆಯಲ್ಲಿ ಹಿರಿಯ ನಾಗರಿಕರು ಮತ್ತು ಮಹಿಳೆಯರು ಸಹ ಭಾಗವಹಿಸುತ್ತಿದ್ದಾರೆ. ಕಳೆದ ಬಾರಿ ಸರ್ಕಾರವನ್ನು ಇದೇ ವಿಷಯದ ಕುರಿತು ಪ್ರಶ್ನಿಸಿದರೂ ಉತ್ತರ ಬಂದಿಲ್ಲ. ಈಗ ಪರಿಸ್ಥಿತಿ ಬಿಗಡಾಯಿಸುತ್ತಿದೆ, ಕೆಲವು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚಳಿಯಿಂದ ತೊಂದರೆ ಅನುಭವಿಸುತ್ತಿದ್ದಾರೆ. ಕಾನೂನು ಜಾರಿಗೊಳಿಸದೇ ಇದ್ದರೆ ಏನಾಗಲಿದೆ ಎಂದು ನ್ಯಾಯಾಲಯಕ್ಕೂ ಅರ್ಥವಾಗಿಲ್ಲ. ಏನಾಗುತ್ತಿದೆ ಇಲ್ಲಿ? ಎಂದು ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೊಬ್ಡೆ ಪ್ರಶ್ನಿಸಿದರು.

ಧರಣಿ ಸ್ಥಳ ಬದಲಾಯಿಸಿ ಎಂದು ಹೇಳಬಹುದು. ಆದರೆ, ಧರಣಿ ಮಾಡಬೇಡಿ ಎಂದು ನಾವು ಹೇಳಲು ಸಾಧ್ಯವಿಲ್ಲ. ಧರಣಿ ಸ್ಥಳದಲ್ಲಿ ಹಲವು ರೈತರು ಆತ್ಮಹತ್ಯೆ, ಸಾವು ಸಂಭವಿಸುತ್ತಿದೆ. ದುರಂತ ಸಂಭವಿಸಿದರೆ ಎಲ್ಲರೂ ಹೊಣೆಯಾಗುತ್ತಾರೆ?

ಇಲ್ಲಿ ಯಾವ ಮಾತುಕತೆಗಳು ನಡೆಯುತ್ತಿವೆಯೋ ನಮಗೆ ಗೊತ್ತಿಲ್ಲ. ಕೆಲವು ಸಮಯದವರೆಗೆ ಕೃಷಿ ಕಾಯ್ದೆಗಳನ್ನು ತಡೆಹಿಡಿಯಬಹುದೇ? ಎಂದು ನ್ಯಾಯಮೂರ್ತಿಗಳಾದ ಎಎಸ್ ಬೋಪಣ್ಣ ಮತ್ತು ವಿ ರಮಣ ಅವರನ್ನು ಒಳಗೊಂಡ ನ್ಯಾಯಪೀಠ ಪ್ರಶ್ನಿಸಿತು.

ನಮ್ಮ ಕೈಗಳು ರಕ್ತಸಿಕ್ತವಾಗಲು ನಾವು ಬಯಸುವುದಿಲ್ಲ. ನಿಮಗೆ ಜವಾಬ್ದಾರಿಯಿದ್ದರೆ, ಕಾನೂನಿನ ಅನುಷ್ಠಾನವನ್ನು ತಡೆ ಹಿಡಿಯಿರಿ. ಕಾಯ್ದೆಗೆ ನೀವಾಗಿಯೇ ತಡೆ ನೀಡುತ್ತೀರಾ ಅಥವಾ ಆ ಕೆಲಸವನ್ನು ನಾವು ಮಾಡಬೇಕೇ? ಎಂದು ಪ್ರಶ್ನಿಸಿದ ನ್ಯಾಯಾಲಯ, ಕಾಯ್ದೆ ತಡೆಹಿಡಿದಿದ್ದೇ ಆದರೆ, ಈ ಬಗ್ಗೆ ನಿರ್ಧರಿಸಲು ತಜ್ಞರ ಸಮಿತಿ ರೂಪಿಸುತ್ತೇವೆಂದು ಹೇಳಿದೆ.

Leave a Reply

Your email address will not be published. Required fields are marked *