ಯಡಿಯೂರಪ್ಪ ಪುತ್ರನ ಹಸ್ತಕ್ಷೇಪಕ್ಕೆ ಕಡಿವಾಣ ಹಾಕಲು ಯತ್ನಾಳ್ ಗೆ ಸಚಿವ ಸ್ಥಾನ ! ಸಚಿವ ಸ್ಥಾನದ ಪಟ್ಟಿಯಲ್ಲಿ ಯಾರೆಲ್ಲ ಇದ್ದಾರೆ ನೋಡಿ…
ಬೆಂಗಳೂರು: ಯಡಿಯೂರಪ್ಪ ನೇತೃತ್ವದ ರಾಜ್ಯ ಬಿಜೆಪಿ ಸರಕಾರದ ವಿರುದ್ಧ ಒಂದಲ್ಲ ಒಂದು ರೀತಿಯ ಕಿರಿಕ್ ಮಾಡುತ್ತಲೇ ಬಂದಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್’ಗೆ ಈ ಬಾರಿ ಸಚಿವ ಸ್ಥಾನ ಒಲಿದಿರುವುದು ಖಚಿತವಾಗಿದ್ದು, ಇದು ಯಡಿಯೂರಪ್ಪರನ್ನು ಕಟ್ಟಿಹಾಕುವ ತಂತ್ರ ಎನ್ನಲಾಗುತ್ತಿದೆ.
ಬಿಜೆಪಿ ಸರಕಾರಕ್ಕೆ ನುಂಗಲಾರದ ತುತ್ತಾಗಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ನೇರವಾಗಿ ಯಡಿಯೂರಪ್ಪ ಹಾಗು ಅವರ ಆಪ್ತರ ಮೇಲೆ ಟೀಕೆ-ಟಿಪ್ಪಣಿ ಮಾಡುತ್ತಿದ್ದು, ಇದೀಗ ನೂತನ ಸಚಿವರ ಪಟ್ಟಿಯಲ್ಲಿ ಅವರ ಹೆಸರಿರುವುದು ಬಿಜೆಪಿ ಒಳಗೆ ಮತ್ತಷ್ಟು ಗುದ್ದಾಟ ನಡೆಯುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.
ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಸಂಪುಟಕ್ಕೆ ಸೇರಿಸುವುದರ ಹಿಂದೆ ಪಕ್ಷದ ಕೆಲವು ನಾಯಕರ ಕೈವಾಡವಿದ್ದು, ಯಡಿಯೂರಪ್ಪ ಅವರ ಪುತ್ರ ಬಿವೈ ವಿಜಯೇಂದ್ರ ಅವರ ಹಸ್ತಕ್ಷೇಪಕ್ಕೆ ಕಡಿವಾಣ ಹಾಕುವ ತಂತ್ರ ಎಂದು ಹೇಳಲಾಗುತ್ತಿದೆ.
ಐಎಎನ್ಎಸ್ ವರದಿಯ ಪ್ರಕಾರ ಜ.13 ರಂದು ನಿಗದಿಯಾಗಿರುವ ಸಚಿವ ಸಂಪುಟ ವಿಸ್ತರಣೆಯಲ್ಲಿ ಯತ್ನಾಳ್ ಗೆ ಸ್ಥಾನ ಸಿಗುವ ಸಾಧ್ಯತೆ ಹೆಚ್ಚಾಗಿದ್ದು, ಪಕ್ಷದ ಮೂಲಗಳ ಪ್ರಕಾರ ಯಡಿಯೂರಪ್ಪ ಅವರ ಪುತ್ರ ಬಿವೈ ವಿಜಯೇಂದ್ರ ಅವರ ಹಸ್ತಕ್ಷೇಪಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಯತ್ನಾಳ್ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಲಾಗುತ್ತಿದೆ ಎಂದು ವಿಶ್ಲೇಷಿಸಲಾಗಿದೆ.
ಯತ್ನಾಳ್ ಜೊತೆಗೆ ಅರವಿಂದ ಲಿಂಬಾವಳಿ (ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಉರುಳಿಸಲು ಸಹಕಾರ) ಕಾರವಾರದ ಶಾಸಕಿ ರೂಪಾಲಿ ನಾಯಕ್ ಗೆ ಮಹಿಳಾ ಕೋಟಾದಲ್ಲಿ, ಲಿಂಗಾಯತರ ಕೋಟಾದ ಅಡಿಯಲ್ಲಿ ಉಮೇಶ್ ಕತ್ತಿಗೆ, ಇತ್ತೀಚೆಗೆ ಕಾಂಗ್ರೆಸ್ ನಿಂದ ಬಿಜೆಪಿಗೆ ಸೇರ್ಪಡೆಯಾದ ಮುನಿರತ್ನ ನಾಯ್ಡು, ಯಡಿಯೂರಪ್ಪ ಅವರ ನಿಷ್ಠಾವಂತರಾದ ಎಂಪಿ ರೇಣುಕಾಚಾರ್ಯ ಹಾಗೂ ಎಸ್ಆರ್ ವಿಶ್ವನಾಥ್ ಗೆ ಸಚಿವ ಸ್ಥಾನ ಸಿಗುವುದು ಖಚಿತವಾಗಿದೆ.
ಸಿಎಂ ಯಡಿಯೂರಪ್ಪ ಅಮಿತ್ ಶಾ ಹಾಗೂ ಜೆಪಿ ನಡ್ಡಾಗೆ ನೀಡಿದ್ದ ಸಂಭಾವ್ಯ ಸಚಿವರ ಪಟ್ಟಿಗೆ ಹೈಕಮಾಂಡ್ ಒಪ್ಪಿಗೆ ಸೂಚಿಸಿದೆ.