ಅಮೆರಿಕ ಸಂಸತ್ ಭವನದ ಮೇಲೆ ದಾಳಿ ನಡೆಸಿರುವ ಟ್ರಂಪ್ ಹಾಗೂ ಬಿಜೆಪಿ ಬೆಂಬಲಿಗರಿಗೆ ಹೆಚ್ಚೇನು ವ್ಯತ್ಯಾಸ ಇಲ್ಲ: ಮಮತಾ ಬ್ಯಾನರ್ಜಿ ವ್ಯಂಗ್ಯ
ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನಾಯಕರು ಹಾಗು ಬೆಂಬಲಿಗರು ಅಧಿಕಾರ ಪಡೆಯಲು ನಡೆಸುತ್ತಿರುವ ವಾಮಮಾರ್ಗ ಹಾಗು ದಾಂಧಲೆಯ ವಿರುದ್ಧ ಸದಾ ವಿರೋಧಿಸುತ್ತ ಬಂದಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಈ ಬಾರಿ ತನ್ನದೇ ದಾಟಿಯಲ್ಲಿ ವ್ಯಂಮ್ಗ್ಯವಾಡಿದ್ದಾರೆ.
ತನ್ನ ಚುನಾವಣಾ ಸೋಲನ್ನು ಒಪ್ಪದೆ ಅಮೆರಿಕ ಸಂಸತ್ ಭವನದ ಮೇಲೆ ದಾಳಿ ನಡೆಸಿರುವ ಡೊನಾಲ್ಡ್ ಟ್ರಂಪ್ ಹಾಗೂ ಬಿಜೆಪಿ ಬೆಂಬಲಿಗರ ವರ್ತನೆಗೂ ಹೆಚ್ಚೇನು ವ್ಯತ್ಯಾಸ ಇಲ್ಲ. ಮುಂದಿನ ದಿನಗಳಲ್ಲಿ ಬಿಜೆಪಿ ಸೋಲನುಭವಿಸಿದರೆ ಆ ಪಕ್ಷದ ಬೆಂಬಲಿಗರೂ ಇದೇ ರೀತಿ ವರ್ತನೆ ಮಾಡುತ್ತಾರೆ ಎಂದು ಮಮತಾ ಬ್ಯಾನರ್ಜಿ ವ್ಯಂಗ್ಯವಾಡಿದ್ದಾರೆ.
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈವರೆಗೆ ತಮ್ಮ ಸೋಲನ್ನು ಒಪ್ಪಿಕೊಂಡಿಲ್ಲ. ಅಲ್ಲದೆ, ಚುನಾವಣಾ ಅಧಿಕಾರಿಗಳು ಫಲಿತಾಂಶವನ್ನು ತಿರುಚಿದ್ದಾರೆ ಎಂದು ನಿರಂತರವಾಗಿ ಆರೋಪಿಸುತ್ತಲೇ ಇದ್ದರು. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲೂ ಹೇಳಿಕೆಗಳನ್ನು ಬಿಡುಗಡೆ ಮಾಡುತ್ತಲೇ ಇದ್ದರು. ಪರಿಣಾಮ ಕಳೆದ ಬುಧವಾರ ಟ್ರಂಪ್ ಬೆಂಬಲಿಗರು ಏಕಾಏಕಿ ವಾಷಿಂಗ್ಟನ್ನ ಅಮೆರಿಕ ಸಂಸತ್ (Mob at US Capitol) ಮೇಲೆ ಅನಿರೀಕ್ಷಿತ ದಾಳಿ ನಡೆಸುವ ಮೂಲಕ ಗಲಭೆಗೆ ಕಾರಣರಾಗಿದ್ದರು. ಈ ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದ್ದರು. ಈ ಘಟನೆಯನ್ನು ಇಡೀ ವಿಶ್ವದ ಪ್ರಮುಖ ನಾಯಕರು ಖಂಡಿಸಿದ್ದರು. ಆದರೆ, ಮಮತಾ ಬ್ಯಾನರ್ಜಿ ಇದೀಗ ಬಿಜೆಪಿ ಬೆಂಬಲಿಗರನ್ನು ಡೊನಾಲ್ಡ್ ಟ್ರಂಪ್ ಅಭಿಮಾನಿಗಳಿಗೆ ಹೋಲಿಕೆ ಮಾಡಿ ಮಾತನಾಡುವ ಮೂಲಕ ಬಿಜೆಪಿಯನ್ನು ಅಪಹಾಸ್ಯಕ್ಕೆ ಗುರಿಮಾಡಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಈಗಾಗಲೇ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಟಿಎಂಸಿ ಪಕ್ಷ ನಿನ್ನೆ ನಾಡಿಯಾ ಜಿಲ್ಲೆಯಲ್ಲಿ ಸಾರ್ವಜನಿಕ ರ್ಯಾಲಿಯನ್ನು ಆಯೋಜಿಸಿತ್ತು. ಈ ರ್ಯಾಲಿಯಲ್ಲಿ ಮಾತನಾಡಿರುವ ಮಮತಾ ಬ್ಯಾನರ್ಜಿ, “ನೀವು ಅವರನ್ನು ನೋಡಲಿಲ್ಲವೇ? ಸೋತರೂ ತಾನು ಗೆದ್ದಿದ್ದೇನೆ ಎಂದು ಟ್ರಂಪ್ ಹೇಳುತ್ತಲೇ ಇದ್ದಾರೆ. ಅವರ ಬೆಂಬಲಿಗರು ಅಮೆರಿಕ ಸಂಸತ್ ಭವನದ ಮೇಲೆ ದಾಳಿ ನಡೆಸಿದ್ದಾರೆ.
ಯಾವಾಗ ಬಿಜೆಪಿ ಸೋಲುತ್ತದೆಯೋ ಅಂದು ’ನಾವು ಗೆದ್ದಿದ್ದೇವೆ, ನಾವು ಗೆದ್ದಿದ್ದೇವೆ’ ಎಂದು ಬಿಜೆಪಿ ಬೆಂಬಲಿಗರೂ ಇದೇ ರೀತಿ ಹೇಳುತ್ತಾ, ಇಂತಹದ್ದೇ ವರ್ತನೆ ತೋರುತ್ತಾರೆ. ಇದರಲ್ಲಿ ಯಾವುದೇ ವ್ಯತ್ಯಾಸವಿಲ್ಲ” ಎಂದು ಲೇವಡಿ ಮಾಡಿದ್ದಾರೆ.
ಕೇಂದ್ರ ಸರ್ಕಾರದ ನೂತನ ಮೂರು ಕೃಷಿ ಕಾಯ್ದೆಯ ವಿರುದ್ಧವೂ ಕಿಡಿಕಾರಿರುವ ಮಮತಾ ಬ್ಯಾನರ್ಜಿ, “ಹರಿಯಾಣ ಪಂಜಾಬ್ ರೈತರು ಕಳೆದ ಒಂದು ತಿಂಗಳಿನಿಂದ ಬಿಸಿಲು ಮತ್ತು ಮಳೆಯೆನ್ನದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಕೆಲವರು ಚಳಿಯಲ್ಲಿ ಮೃತಪಟ್ಟಿದ್ದಾರೆ, ಆದರೆ, ನಮ್ಮ ರೈತ ಬಾಂಧವರಿಗೆ ಈವರೆಗೆ ನ್ಯಾಯ ಧಕ್ಕಿಲ್ಲ” ಎಂದು ಕಿಡಿಕಾರಿದ್ದಾರೆ.
ಇನ್ನೂ ಬಿಜೆಪಿಯನ್ನು ಜಂಕ್ ಪಾರ್ಟಿ ಎಂದು ಜರೆದಿರುವ ಅವರು, “ಬಿಜೆಪಿ ಪಕ್ಷಕ್ಕೆ ನನ್ನ ಬಗ್ಗೆ ಭಯಭೀತವಾಗಿದೆ. ಏಕೆಂದರೆ ನನ್ನನ್ನು ಖರೀದಿಸಲು ಸಾಧ್ಯವಿಲ್ಲ ಎಂದು ಅವರಿಗೆ ಚೆನ್ನಾಗಿ ತಿಳಿದಿದೆ. ನಾನು ಹೋರಾಟದಲ್ಲಿ ಮುಂದೆಯೆ ನಿಲ್ಲುತ್ತೇನೆ. ಅವರಿಗೆ ಬಂಗಾಳವನ್ನು ಮಾರಾಟ ಮಾಡಲು ನಾನು ಬದುಕಿರುವವರೆಗೆ ಬಿಡುವುದಿಲ್ಲ” ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸವಾಲು ಹಾಕಿದ್ದಾರೆ.