ಕರ್ನಾಟಕಕ್ಕೇ ಮೊದಲ ಹಂತದಲ್ಲಿ 7.95 ಲಕ್ಷ ಕೋವಿಶೀಲ್ಡ್ ಕೊರೊನಾ ಲಸಿಕೆ ಪೂರೈಕೆ

ಬೆಂಗಳೂರು: ದೇಶಾದ್ಯಂತ ಕೋವಿಡ್-19 ಲಸಿಕೆಯನ್ನು ಕೇಂದ್ರ ಸರಕಾರ ಪೊರೈಸುತ್ತಿದ್ದು, ಕರ್ನಾಟಕಕ್ಕೇ ಮೊದಲ ಹಂತದಲ್ಲಿ 7.95 ಲಕ್ಷ ಕೋವಿಶೀಲ್ಡ್ ಕೊರೊನಾ ಲಸಿಕೆಯ ವೈಲ್ ಗಳು ಪೂರೈಕೆಯಾಗುತ್ತಿದೆ. ಈ ಪೈಕಿ ಸದ್ಯ 6 ಲಕ್ಷ 47 ಸಾವಿರದ 500 ಡೋಸ್ ಲಸಿಕೆ ಬೆಂಗಳೂರಿಗೆ ಆಗಮಿಸಿದ್ದು, ಉಳಿದ ಲಸಿಕೆ ನಾಳೆ ಬೆಳಗಾವಿಗೆ ರವಾನೆಯಾಗಲಿದೆ.

ಈ ಬಗ್ಗೆ ವಿವರ ನೀಡಿದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಬೆಂಗಳೂರಿಗೆ ಬಂದಿರುವ ಕೊರೋನಾ ಲಸಿಕೆಯನ್ನು ಆನಂದರಾವ್ ವೃತ್ತದಲ್ಲಿರುವ ಸಂಗ್ರಹಾಗಾರದಲ್ಲಿ ಶೇಖರಣೆ ಮಾಡಿ ಇಡಲಾಗುವುದು ಎಂದರು.

ಮಂಗಳವಾರ ಪುಣೆಯಿಂದ ರಾಜ್ಯಕ್ಕೆ ಬಂದಿರುವ 7.95 ಲಕ್ಷ ‘ಕೋವಿಶೀಲ್ಡ್’ ಲಸಿಕೆಯ ಬಾಟಲಿಗಳನ್ನು ನಗರದ ಆನಂದ ರಾವ್ ವೃತ್ತದಲ್ಲಿರುವ ರಾಜ್ಯಮಟ್ಟದ ದಾಸ್ತಾನು ಕೇಂದ್ರದಲ್ಲಿ ಇರಿಸಲಾಗಿದೆ. ಇದನ್ನು ಚಿತ್ರದುರ್ಗ, ಕಲಬುರಗಿ ಸೇರಿದಂತೆ 5 ಪ್ರಾದೇಶಿಕ ಕೇಂದ್ರಗಳಿಗೆ ರವಾನಿಸಿ, ಅಲ್ಲಿಂದ ಜಿಲ್ಲೆಗಳಲ್ಲಿನ ದಾಸ್ತಾನು ಕೇಂದ್ರಗಳಿಗೆ ರವಾನಿಸಲಾಗುತ್ತದೆ. ರಾಜ್ಯದಲ್ಲಿ 2,767 ಕೋಲ್ಡ್ ಚೈನ್ ಕೇಂದ್ರಗಳನ್ನು ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಒಂದು ವೈಲ್ ನಲ್ಲಿ 10 ಮಂದಿಗೆ ಲಸಿಕೆ ನೀಡಬಹುದು. ಮೊದಲ ಡೋಸ್ ಪಡೆದ 28 ದಿನಗಳ ಬಳಿಕ ಎರಡನೇ ಡೋಸ್ ಪಡೆಯಬೇಕು. ಲಸಿಕೆಯಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಉತ್ಪತ್ತಿಯಾಗುತ್ತದೆ. ಇದು ಸಂಪೂರ್ಣ ಸುರಕ್ಷಿತ ಎಂದರು.

ಪ್ರತಿ ಬಾಟಲಿಯಲ್ಲಿ 5 ಎಂ. ಎಲ್ ಡೋಸ್ ಇರಲಿದೆ. ಡ್ರಗ್ಸ್ ಕಂಟ್ರೋಲ್ ಜನರಲ್ ಆಫ್ ಇಂಡಿಯಾ ಕೋವಿಶೀಲ್ಡ್ ಲಸಿಕೆಗೆ ಈಗಾಗಲೇ ಪರವಾನಿಗೆ ನೀಡಿದೆ. ಕೇಂದ್ರ ಸರ್ಕಾರ 1.1 ಕೋಟಿ ಡೋಸ್ ಲಸಿಕೆ ಖರೀದಿ ಮಾಡಿದೆ. ಒಂದು ಡೋಸ್ ಗೆ 210 ರೂ. ನಿಗದಿ ಮಾಡಿದ್ದು, ಬೇರೆ ಯಾವ ದೇಶವೂ ಇಷ್ಟು ಕಡಿಮೆ ದರ ನಿಗದಿ ಮಾಡಿಲ್ಲ. ಸೀರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ ಲಸಿಕೆ ಖರೀದಿಸಲಾಗಿದೆ. ಲಸಿಕೆ ಖರೀದಿಗೆ ಒಟ್ಟು 231 ಕೋಟಿ ರೂ. ಖರ್ಚು ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.

ಆರೋಗ್ಯ ಕ್ಷೇತ್ರದ ಸಿಬ್ಬಂದಿ, ಕೊರೋನ ನಿಯಂತ್ರಣ ಮಾಡುವ ಅಧಿಕಾರಿ, ಸಿಬ್ಬಂದಿಗೆ ಲಸಿಕೆ ನೀಡಲಾಗುತ್ತದೆ. ಈ ಎಲ್ಲ ಪ್ರಕ್ರಿಯೆ ಮಾರ್ಗಸೂಚಿ ಪ್ರಕಾರ ನಡೆಯಲಿದೆ. ಲಸಿಕೆ ಪಡೆದ ಬಳಿಕ ಅವರ ಮೇಲೆ ಕೆಲ ಸಮಯದವರೆಗೆ ಸೂಕ್ಷ್ಮವಾಗಿ ನಿಗಾ ಇರಿಸಲಾಗುತ್ತದೆ ಎಂದರು.

Leave a Reply

Your email address will not be published. Required fields are marked *