ಇಂದು ಯಾರೆಲ್ಲ ನೂತನ ಸಚಿವರಾಗಲಿದ್ದಾರೆ….ಪಟ್ಟಿ ನೋಡಿ….!

ಬೆಂಗಳೂರು: ಕೊನೆಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರ್ಕಾರದ ಸಂಪುಟ ವಿಸ್ತರಣೆಗೆ ಕ್ಷಣಗಣನೆ ಆರಂಭವಾಗಿದ್ದು, ಇಂದು ಮಧ್ಯಾಹ್ನ 3.50ರ ಶುಭ ಮುಹೂರ್ತದಲ್ಲಿ 7 ಮಂದಿ ಶಾಸಕರು ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ನೂತನ ಸಚಿವರಾಗಿ ಎಂಟಿಬಿ ನಾಗರಾಜ್, ಆರ್ ಆಂಕರ್, ಸಿ.ಪಿ. ಯೋಗೇಶ್ವರ್, ಅರವಿಂದ್ ಲಿಂಬಾವಳಿ, ಎಸ್ ಅಂಗಾರ, ಉಮೇಶ್ ಕತ್ತಿ, ಮುರುಗೇಶ್ ಆರ್ ನಿರಾಣಿ ಅವರಿಗೆ ಸಚಿವ ಸ್ಥಾನ ದೊರಕಿದೆ.

ಸದ್ಯ ಯಡಿಯೂರಪ್ಪ ಅವರ ಸರ್ಕಾರದಲ್ಲಿ ಖಾಲಿ ಉಳಿದಿರುವುದು ಏಳು ಸ್ಥಾನ ಮಾತ್ರ. ಅಬಕಾರಿ ಸಚಿವ ಆರ್ ನಾಗೇಶ್ ಅವರನ್ನ ಸಂಪುಟದಿಂದ ಕೈಬಿಡಲು ನಿರ್ಧರಿಸಲಾಗಿದೆ. ಅವರು ರಾಜೀನಾಮೆ ನೀಡಿದರೆ ಎಂಟು ಖಾತೆಗಳು ಖಾಲಿ ಉಳಿಯುತ್ತವೆ. ಈಗ ಏಳು ಮಂದಿಯನ್ನ ಸಂಪುಟಕ್ಕೆ ಸೇರ್ಪಡೆ ಮಾಡಲಾಗುತ್ತಿದೆ. ಇನ್ನೊಂದು ಖಾತೆ ಖಾಲಿ ಉಳಿಯಲಿದೆ.

ಇತ್ತ, ಮುನಿರತ್ನ ಅವರು ಮಂತ್ರಿಸ್ಥಾನಕ್ಕಾಗಿ ಕೊನೆಯ ಕ್ಷಣದವರೆಗೂ ಪ್ರಯತ್ನ ಮುಂದುವರಿಸರಾದರೂ ಫಲ ಸಿಕ್ಕಿಲ್ಲ. ಮೈತ್ರಿಪಾಳಯದಿಂದ ಬಂದ 17 ಮಂದಿಯಲ್ಲಿ ಮುಂಚೂಣಿಯಲ್ಲಿದ್ದವರಲ್ಲಿ ಮುನಿರತ್ನ ಕೂಡ ಒಬ್ಬರು. ಆದರೆ, ಎಸ್.ಟಿ. ಸೋಮಶೇಖರ್, ಎಂಟಿಬಿ ನಾಗರಾಜ್, ಬೈರತಿ ಬಸವರಾಜ್ ಅವರೊಂದಿಗೆ ಇದ್ದ ಮುನಿರತ್ನ ಮಾರ್ಗಮಧ್ಯೆ ಏಕಾಂಗಿಯಾಗಿ ಹೋದರು. ತಮ್ಮ ಸ್ನೇಹಿತರ ಬಳಗ ಬಿಟ್ಟು ತಾವೊಬ್ಬರೇ ಲಾಬಿಗೆ ಯತ್ನಿಸಿದ್ದರು. ಹೀಗಾಗಿ ತಮ್ಮ ಗೆಳೆಯರ ಬಳಗದಿಂದ ಈವರೆಗೆ ಮುನಿರತ್ನಗೆ ಯಾವ ನೆರವೂ ಆಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಮುನಿರತ್ನ ಅವರು ಆರ್ ಅಶೋಕ್, ಬಸವರಾಜ ಬೊಮ್ಮಾಯಿ ಮೊದಲಾದ ಹಿರಿಯ ಬಿಜೆಪಿ ನಾಯಕರ ಮೂಲಕ ಮಂತ್ರಿಸ್ಥಾನಕ್ಕಾಗಿ ಕಸರತ್ತು ನಡೆಸಿದ್ದಾರೆ. ಇದ್ಯಾವುದಕ್ಕೂ ಯಡಿಯೂರಪ್ಪ ಜಗ್ಗಿದಂತೆ ಕಾಣುತ್ತಿಲ್ಲ. ತನ್ನ ಕೈಯಲ್ಲಿ ಏನೂ ಇಲ್ಲ, ಎಲ್ಲವೂ ಹೈಕಮಾಂಡ್ ನಿರ್ಧಾರ ಎಂದು ಹೇಳಿ ಯಡಿಯೂರಪ್ಪ ಕೈಚೆಲ್ಲಿದ್ದಾರೆಂಬ ಮಾತು ಕೇಳಿಬರುತ್ತಿದೆ. ಹಾಗೆಯೇ, ಕೆಲವೇ ತಿಂಗಳಲ್ಲಿ ಸಂಪುಟ ಪುನಾರಚನೆ ನಡೆಯಲಿದ್ದು ಆಗ ಮುನಿರತ್ನ ಅವರನ್ನ ಸೇರಿಸಿಕೊಳ್ಳುವುದಾಗಿಯೂ ಯಡಿಯೂರಪ್ಪ ಅಭಯ ನೀಡಿರುವ ವಿಚಾರ ಕೇಳಿಬಂದಿದೆ.

ನಿನ್ನೆ ಕೇಳಿಬಂದ ಹೆಸರುಗಳಲ್ಲಿ ಪೂರ್ಣಿಮಾ ಶ್ರೀನಿವಾಸ್ ಅವರ ಹೆಸರು ಇತ್ತು. ಶಶಿಕಲಾ ಜೊಲ್ಲೆಯವರನ್ನ ಕೈಬಿಟ್ಟು ಪೂರ್ಣಿಮಾ ಅವರನ್ನ ಸೇರಿಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿತ್ತು. ಆದರೆ, ಪೂರ್ಣಿಮಾ ಅವರ ಪತಿ ಶ್ರೀನಿವಾಸ್ ಅವರು ಪದವೀಧರ ಚುನಾವಣೆಯಲ್ಲಿ ಪಕ್ಷವಿರೋಧಿ ಚಟುವಟಿಕೆ ಮಾಡಿದ ಹಿನ್ನೆಲೆಯಲ್ಲಿ ಪೂರ್ಣಿಮಾ ಅವರಿಗೆ ಮಂತ್ರಿಭಾಗ್ಯ ತಪ್ಪಿದೆ ಎನ್ನಲಾಗುತ್ತಿದೆ. ನಿನ್ನೆ ಪೂರ್ಣಿಮಾ ಮತ್ತವರ ಪತಿಯನ್ನು ಭೇಟಿ ಮಾಡಿದ ಆರ್ ಅಶೋಕ್ ಇದೇ ವಿಷಯವನ್ನು ಅವರಿಗೆ ತಿಳಿದು ಬೇಸರ ವ್ಯಕ್ತಪಡಿಸಿದ್ದು ಮಾಧ್ಯಮಗಳಲ್ಲಿ ವರದಿಯಾಗಿತ್ತು.

ಇನ್ನು, ಮುಖ್ಯಮಂತ್ರಿ ಯಡಿಯೂರಪ್ಪನವರ ಆಪ್ತವಲಯದಲ್ಲಿರುವ ಹಾಗೂ ರಾಜಕೀಯ ಕಾರ್ಯದರ್ಶಿಯಾಗಿರುವ ಎಂ.ಪಿ. ರೇಣುಕಾಚಾರ್ಯ ಕೂಡ ಮಂತ್ರಿಸ್ಥಾನಕ್ಕೆ ಒಳಗಿಂದೊಳಗೆ ಪ್ರಯತ್ನ ಮಾಡುತ್ತಿದ್ದಾರೆ. ಈ ಹಗ್ಗ-ಜಗ್ಗಾಟದ ಒತ್ತಡದಲ್ಲಿ ತಮ್ಮ ಆಪ್ತನ ಮಾತು ಕೇಳಿಸಿಕೊಳ್ಳುವ ಪರಿಸ್ಥಿತಿಯಲ್ಲಿ ಯಡಿಯೂರಪ್ಪ ಅವರಿಲ್ಲ. ಆದರೂ ರೇಣುಕಾಚಾರ್ಯ ತಮ್ಮ ಪ್ರಯತ್ನ ಬಿಡದೆ ನೇರ ಅರುಣ್ ಸಿಂಗ್ ಬಳಿಯೇ ಲಾಬಿ ಮಾಡಲಿದ್ದಾರೆ ಎಂಬ ಮಾತು ದಟ್ಟವಾಗಿ ಹಬ್ಬುತ್ತಿದೆ.ಚಿತ್ರದುರ್ಗ ಜಿಲ್ಲೆಯ ತಿಪ್ಪಾರೆಡ್ಡಿ, ಕೊಡಗಿನ ಬೋಪಯ್ಯ, ವಿಜಯಪುರದ ಮುಖಂಡರು ಹೀಗೆ ಸಚಿವಾಕಾಂಕ್ಷಿಗಳ ಪಟ್ಟಿ ಬಿಜೆಪಿಯೊಳಗೆ ಬಹಳ ಇದೆ. ಮುಂದಿನ ದಿನಗಳಲ್ಲಿ ಈ ಅಸಮಾಧಾನದ ಹೊಗೆ ಬಿಜೆಪಿಗೆ ಉಸಿರುಗಟ್ಟಿಸುವಂತೆ ಮಾಡುತ್ತದಾ ಎಂದು ಕಾದುನೋಡಬೇಕು.

Leave a Reply

Your email address will not be published. Required fields are marked *