ಸಂಪುಟ ವಿಸ್ತರಣೆಯಿಂದ ಅಧೋಗತಿಗೆ ತಲುಪಲಿದೆ ಬಿಜೆಪಿ: ಸಿದ್ದರಾಮಯ್ಯ

ಮೈಸೂರು: ಬಿಜೆಪಿ ಸರಕಾರದ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಸಂಪುಟ ವಿಸ್ತರಣೆ ಬೆನ್ನಲ್ಲೇ ಬಿಜೆಪಿ ಅಧೋಗತಿಗೆ ತಲುಪಲಿದೆ. ಆದರೆ ಇದರಿಂದ ಯಡಿಯೂರಪ್ಪ ಇನ್ನೂ ಸ್ವಲ್ಪ ದಿನ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ ಎಂದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಸಿದ್ದರಾಮಯ್ಯ, ಈಗ ಸಂಪುಟ ವಿಸ್ತರಣೆ ಆಗುವುದನ್ನು ನೋಡಿದರೆ ಇನ್ನು ಸ್ವಲ್ಪ ದಿನ ಯಡಿಯೂರಪ್ಪನವರೇ ಸಿಎಂ ಆಗಿ ಮುಂದುವರೆಯಬಹುದು. ಬಹುಶಃ ಸಂಪುಟ ವಿಸ್ತರಣೆ ಆದ ನಂತರ ರಾಜೀನಾಮೆ ಕೊಡ್ತೀನಿ ಅಂತ ಹೇಳಿರಬಹುದೇನೋ. ನಮಗಿದ್ದ ಮಾಹಿತಿ ಪ್ರಕಾರ ಹೈಕಮಾಂಡ್ ಸಿಎಂ ಯಡಿಯೂರಪ್ಪನವರ ರಾಜೀನಾಮೆ ಕೇಳಿದ್ದರು. ಬಹುಶಃ ಸಂಪುಟ ವಿಸ್ತರಣೆ ಮಾಡಿದ ನಂತರ ರಾಜೀನಾಮೆ ನೀಡುತ್ತೇನೆ ಎಂದು ಹೇಳಿರಬಹುದು. ಹಾಗಾಗಿ ಇನ್ನು ಸ್ವಲ್ಪ ದಿನ ಅವರೇ ಸಿಎಂ ಆಗಿ ಉಳಿಯುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಇಂದು ಸಂಜೆ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಲಿದೆ. ಈಗಾಗಲೇ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ 7 ನೂತನ ಸಚಿವರ ಪಟ್ಟಿಯನ್ನು ರಾಜಭವನಕ್ಕೆ ಕಳುಹಿಸಿಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, 7 ಜನರನ್ನು ಸಂಪುಟಕ್ಕೆ ಸೇರಿಸಿಕೊಂಡರೂ ಈ ಸರ್ಕಾರ ಟೇಕ್ ಆಫ್ ಆಗೋದಿಲ್ಲ. ಮಂತ್ರಿ ಮಂಡಲ ಪೂರ್ತಿಯಾದ ತಕ್ಷಣ ಈ ಸರ್ಕಾರ ಪರಿಪೂರ್ಣ ಆಗೋದಿಲ್ಲ. ಯಾರ್ಯಾರಿಗೆ ಸಚಿವ ಸ್ಥಾನ ಕೊಟ್ಟಿದ್ದಾರೋ ಅಂತ ನಾನು ನೋಡೋಕೆ ಹೋಗಿಲ್ಲ. ಅಥವಾ ಯಾರಿಗೆ ಮಂತ್ರಿ ಸ್ಥಾನ ಸಿಕ್ಕಿಲ್ಲ ಅಂತಾನೂ ವಿಚಾರಿಸಲು ಹೋಗಿಲ್ಲ. ಅದರ ಬಗ್ಗೆ ನಾನು ಮಾತನಾಡಲು ಹೋಗೋದಿಲ್ಲ ಎಂದಿದ್ದಾರೆ.

ಸಿಎಂ ಯಡಿಯೂರಪ್ಪ ಬಜೆಟ್ ಮಂಡಿಸಲೇಬೇಕು. ಇಲ್ಲದಿದ್ದರೆ ಮಾರ್ಚ್ ನಂತರ ಒಂದು ರೂಪಾಯಿ ಖರ್ಚು ಮಾಡೋಕೂ ಅವರಿಗೆ ಆಗುವುದಿಲ್ಲ ಎಂದು ಮೈಸೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ನನ್ನ ಬಜೆಟ್ ಸ್ಟೈಲ್ ಬೇರೆ ಇತ್ತು, ಇವರ ಬಜೆಟ್ ಸ್ಟೈಲ್ ಬೇರೆ ಇದೆ. ಏನು ಮಾಡುತ್ತಾರೆ ಎಂದು ನೋಡೋಣ ಎಂದಿದ್ದಾರೆ.

ಗೋಮಾಂಸ ಬೇಕೆನಿಸಿದರೆ ತಿನ್ನುತ್ತೇನೆ:
ನಾನು ಇಲ್ಲಿಯವರೆಗೆ ಗೋಮಾಂಸ ತಿಂದಿಲ್ಲ. ಆದರೆ, ನನಗೆ ತಿನ್ನಬೇಕು ಅನಿಸಿದರೆ ಖಂಡಿತ ತಿನ್ನುತ್ತೇನೆ. ಅದನ್ನು ಕೇಳೋಕೆ ಇವರ್ಯಾರು? ಆಹಾರ ನನ್ನ ಹಕ್ಕು. ಎನ್ನುವ ಮೂಲಕ ಮತ್ತೆ ಗೋಮಾಂಸ ಸೇವನೆ ಕುರಿತು ಬಿಜೆಪಿಗೆ ಸಿದ್ದರಾಮಯ್ಯ ಕುಟುಕಿದ್ದಾರೆ.

ಅದನ್ನು ಪ್ರಶ್ನಿಸಲು ಯಾರಿಗೂ ಹಕ್ಕಿಲ್ಲ. ನಾನು ಈವರೆಗೆ ಗೋಮಾಂಸ ತಿಂದಿಲ್ಲ, ಹಂದಿ ಮಾಂಸ ತಿಂದಿಲ್ಲ. ಆದರೆ, ತಿನ್ನಬೇಕು ಅನ್ನಿಸಿದ್ರೆ ತಿನ್ನುತ್ತೇನೆ. ನಾನು ತಿಂದಿರೋದು ಕೋಳಿ ಮಾಂಸ, ಕುರಿ ಮಾಂಸ, ಆಡಿನ ಮಾಂಸ ಮಾತ್ರ. ಆದರೆ, ನಮ್ಮ ಆಹಾರ ಪದ್ಧತಿಯನ್ನು ಪ್ರಶ್ನಿಸುವ ಹಕ್ಕು ಇಲ್ಯಾರಿಗೂ ಇಲ್ಲ. ನನಗೆ ಸೊಪ್ಪು ತಿನ್ನಬೇಕು ಅನಿಸಿದರೆ ಸೊಪ್ಪು ತಿನ್ನುತ್ತೇನೆ, ಮಾಂಸ ಬೇಕು ಅನಿಸಿದರೆ ಮಾಂಸ ತಿನ್ನುತ್ತೇನೆ. ನಾನೇನಾದರೂ ಯಡಿಯೂರಪ್ಪನಿಗೆ ಮಾಂಸ ತಿನ್ನು ಎಂದು ಒತ್ತಾಯ ಮಾಡಿದ್ದೇನಾ? ಹಾಗೇ ಅವರೂ ನನ್ನನ್ನು ಮಾಂಸ ತಿನ್ನಬೇಡ ಎಂದು ಒತ್ತಾಯ ಮಾಡುವಂತಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಜಗತ್ತಿನಲ್ಲಿ ಮಾಂಸಹಾರಿಗಳೇ ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಚೀನಾದಲ್ಲಿ‌ ನಾಲ್ಕು ಕಾಲಿನ ಮಂಚವೊಂದನ್ನ ಬಿಟ್ಟು ಇನ್ನೆಲ್ಲವನ್ನು ತಿಂತಾರೆ. ಅಮೆರಿಕ, ಇಂಗ್ಲೆಂಡ್, ಬ್ರಿಟನ್, ಸೇರಿದಂತೆ ಬೇರೆ ದೇಶದಲ್ಲಿರೋರು ದನ ತಿಂತಾರೆ. ಹಾಗಾದರೆ, ಅವರೆಲ್ಲರೂ ಮನುಷ್ಯರಲ್ಲವಾ? ನಿನಗೆ ಸೊಪ್ಪು ಇಷ್ಟವಿದ್ದರೆ ತಿನ್ನಯ್ಯಾ. ಹಾಗೇ ಬೇರೆಯವರಿಗೆ ಏನು ಇಷ್ಟ ಇದೆಯೋ ಅದನ್ನು ತಿನ್ನಲು ಬಿಡು ಎಂದು ಮೈಸೂರಿನಲ್ಲಿ ಸಿಎಂ ಯಡಿಯೂರಪ್ಪನವರ ವಿರುದ್ದ ಸಿದ್ದರಾಮಯ್ಯ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.

Leave a Reply

Your email address will not be published. Required fields are marked *