ಸಚಿವ ಸ್ಥಾನ ವಂಚಿತರು ಏನೇ ವಿರೋಧವಿದ್ದರೂ ಕೇಂದ್ರ ನಾಯಕರಿಗೆ ದೂರು ನೀಡಲಿ, ಸುಮ್ಮನೆ ಆರೋಪ ಮಾಡಬೇಡಿ: ಯಡಿಯೂರಪ್ಪ ಎಚ್ಚರಿಕೆ
ದಾವಣಗೆರೆ: ಸಚಿವ ಸ್ಥಾನ ವಂಚಿತರು ಮಾಡುತ್ತಿರುವ ಆರೋಪದ ಕುರಿತು ಗರಂ ಆಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಏನೇ ವಿರೋಧವಿದ್ದರೂ ಕೇಂದ್ರ ನಾಯಕರಿಗೆ ದೂರು ನೀಡಲಿ. ಹೀಗೆ ಸುಮ್ಮನೆ ಬಹಿರಂಗವಾಗಿ ಮಾತನಾಡಿ ಪಕ್ಷಕ್ಕೆ ಮುಜುಗರ ತರಬೇಡಿ ಎಂದು ತಿರುಗೇಟು ನೀಡಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪನವರ ಸಂಪುಟಕ್ಕೆ ನಿನ್ನೆ 7 ಸಚಿವರು ಸೇರ್ಪಡೆಯಾಗಿದ್ದಾರೆ. ಇದರ ಬೆನ್ನಲ್ಲೇ ಬಿಜೆಪಿಯಲ್ಲಿ ಅಸಮಾಧಾನ ಭುಗಿಲೆದ್ದಿದ್ದು, ಹೆಚ್. ವಿಶ್ವನಾಥ್, ಮುನಿರತ್ನ, ಸಿಎಂ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ, ಬಸನಗೌಡ ಪಾಟೀಲ್ ಯತ್ನಾಳ್, ರಾಮದಾಸ್ ಸೇರಿದಂತೆ 10ಕ್ಕೂ ಹೆಚ್ಚು ಶಾಸಕರು ಬಹಿರಂಗವಾಗಿಯೇ ಸಿಎಂ ವಿರುದ್ಧ ಅಸಮಾಧಾನ, ಆಕ್ರೋಶ ಹೊರಹಾಕಿದ್ದರು.
ಇದರಿಂದ ಸಂಕಷ್ಟಕ್ಕೀಡಾಗಿರುವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ್ದು, ಸಂಪುಟ ವಿಸ್ತರಣೆಯ ಬಗ್ಗೆ ಬಿಜೆಪಿಯ ಯಾವುದೇ ಶಾಸಕರಿಗೆ ಏನೇ ವಿರೋಧವಿದ್ದರೂ ದೆಹಲಿಯ ನಾಯಕರಿಗೆ ದೂರು ನೀಡಲಿ. ಹೀಗೆ ಸುಮ್ಮನೆ ಬಹಿರಂಗವಾಗಿ ಮಾತನಾಡಿ ಪಕ್ಷಕ್ಕೆ ಮುಜುಗರ ತರಬೇಡಿ ಎಂದು ಸೂಚಿಸಿದ್ದಾರೆ.
ಸಿಗದವರು ತಮ್ಮ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ, ಇಂತಹವರು ಕೇಂದ್ರದ ನಾಯಕರೊಂದಿಗೆ ದೂರು ನೀಡಬಹುದು. ಅವರನ್ನು ಯಾರು ಕೂಡ ತಡೆಯುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ.
ಕೇಂದ್ರದ ನಾಯಕರ ಅಪೇಕ್ಷೆಯಂತೆ ಒಂದು ಸ್ಥಾನ ಖಾಲಿ ಇಟ್ಟು ಸಚಿವ ಸಂಪುಟ ವಿಸ್ತರಣೆ ಮಾಡಲಾಗಿದೆ. ಸಚಿವ ಸ್ಥಾನ ಸಿಗದ 10-12 ಶಾಸಕರು ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ತಮ್ಮ ಇತಿ ಮಿತಿಗಳಲ್ಲಿ ಸಚಿವ ಸಂಪುಟ ವಿಸ್ತರಣೆ ಮಾಡಿದ್ದೇನೆ. ಆರೋಪ ಮಾಡುವವರು ಕೇಂದ್ರದ ನಾಯಕರೊಂದಿಗೆ ತಿಳಿಸಬಹುದು. ಅವರಿಗೆ ಯಾರು ಕೂಡ ಅಡ್ಡಿ ಮಾಡುವುದಿಲ್ಲ ಎಂದರು.
ಸುಳ್ಳು ಆರೋಪಗಳನ್ನು ಹೇಳಿ ಗೊಂದಲ ಸೃಷ್ಟಿಸಬಾರದು, ಈ ಮೂಲಕ ಪಕ್ಷದ ಶಿಸ್ತಿಗೆ ಧಕ್ಕೆ ತರಬಾರದು. ಕೇಂದ್ರದ ಆಶೀರ್ವಾದ ಇರುವುದರಿಂದ ಮುಂದಿನ ಎರಡೂವರೆ ವರ್ಷಗಳಲ್ಲಿ ರಾಜ್ಯದ ಅಭಿವೃದ್ಧಿಗೆ ಶ್ರಮಿಸಲಾಗುವುದು. ಜನವರಿ ತಿಂಗಳಾಂತ್ಯಕ್ಕೆ ಬಜೆಟ್ ಅಧಿವೇಶನ ಆರಂಭಗೊಳ್ಳಲಿದ್ದು, ಮಾರ್ಚ್ ನಲ್ಲಿ ರಾಜ್ಯದ ಆರ್ಥಿಕ ಸ್ಥಿತಿಗತಿಗಳನ್ನು ನೋಡಿಕೊಂಡು ಉತ್ತಮವಾದ, ರೈತ ಪರವಾದ ಬಜೆಟ್ ಮಂಡಿಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.