ಧಾರವಾಡ ಬಳಿ ಟಿಪ್ಪರ್ ಲಾರಿ ಮತ್ತು ಟೆಂಪೋ ಟ್ರಾವೆಲರ್ ಮಧ್ಯೆ ನಡೆದ ಭೀಕರ ಅಪಘಾತ; ದಾವಣೆಗೆರೆ ಮೂಲದ 11 ಮಂದಿ ಸಾವು

ಧಾರವಾಡ: ಇಲ್ಲಿನ ಇಟ್ಟಿಗಟ್ಟಿ ಬಳಿ ಮರಳು ಸಾಗಿಸುವ ಟಿಪ್ಪರ್ ಲಾರಿ ಮತ್ತು ಟೆಂಪೋ ಟ್ರಾವೆಲರ್ ಮಧ್ಯೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ದಾವಣೆಗೆರೆ ಮೂಲದ 10 ಮಹಿಳೆಯರು ಸೇರಿ ಒಟ್ಟು 11 ಮಂದಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ.

ಧಾರವಾಡದ ಇಟ್ಟಿಗಟ್ಟಿ-ಯರಿಕೊಪ್ಪ‌ ಮಧ್ಯದ ಪುಣೆ – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮರಳು ಸಾಗಿಸುವ ಟಿಪ್ಪರ್ ಲಾರಿ ಮತ್ತು ಟೆಂಪೋ ಟ್ರಾವೆಲರ್ ಮಧ್ಯೆ ಈ ಅಪಘಾತ ಸಂಭವಿಸಿದ್ದು, ಟಿಟಿ ಚಾಲಕ ಸೇರಿದಂತೆ ಹನ್ನೊಂದು ಜನ ಮೃತಪಟ್ಟಿದ್ದಾರೆ. ನಾಲ್ವರು ಗಾಯಾಳುಗಳ ಸ್ಥಿತಿ ಚಿಂತಾಜನಕವಾಗಿದ್ದು, ಹುಬ್ಬಳ್ಳಿಯ ಕಿಮ್ಸ್ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮೃತಪಟ್ಟವರ ಪೈಕಿ ರಜನಿ, ಪ್ರೀತಿ, ಪರಮಜ್ಯೋತಿ, ವೀಣಾ,ರಾಜೇಶ್ವರಿ, ಮಂಜುಳಾ ಎಂದು ಗುರುತಿಸಲಾಗಿದ್ದು, ಉಳಿದವರ ಹೆಸರು ಇನ್ನೂ ಗೊತ್ತಾಗಿಲ್ಲ. ದಾವಣಗೆರೆ ಮೂಲದ ಇವರೆಲ್ಲ ಚೀಟಿ ಹಣ ಸಂಗ್ರಹದ ತಂಡವರಾಗಿದ್ದು, ಬೆಳಗಾವಿ, ಬೆಂಗಳೂರು, ಧಾರವಾಡದ ಸ್ನೇಹಿತರೆಲ್ಲ ಗೋವಾದ ಪಣಜಿಯಲ್ಲಿ ಸೇರುವ ಪ್ಲ್ಯಾನ್ ಮಾಡಿಕೊಂಡಿದ್ದರು.

ಇಂದು ನಸುಕಿನ ಜಾವ 3ಕ್ಕೆ ಟಿಟಿಯಲ್ಲಿ ದಾವಣಗೆರೆ ಬಿಟ್ಟಿದ್ದ ಇವರೆಲ್ಲ ಧಾರವಾಡ ನಗರಕ್ಕೆ ಆಗಮಿಸಿ ಉಪಹಾರ ಮುಗಿಸಿ ಪಣಜಿ ಪ್ರವಾಸ ಮುಂದುವರೆಸುವವರಿದ್ದರು. ಆದರೆ ಧಾರವಾಡ ನಗರ ಪ್ರವೇಶಿಸುವ ರಸ್ತೆ ಎರಡ್ಮೂರು ಕಿ.ಮಿ ಇರೋ ಮುಂಚೆಯೇ ಈ ಅಪಘಾತಕ್ಕೀಡಾಗಿದ್ದಾರೆ.

ಎದುರಿನ ವಾಹನ ಓವರ್ ಟೇಕ್ ಮಾಡುವ ಭರದಲ್ಲಿ ಟಿಪ್ಪರ್ ಲಾರಿ ರಾಂಗ್ ಸೈಡ್‌ನಲ್ಲಿ ವೇಗವಾಗಿ ಬಂದ ಪರಿಣಾಮವೇ ಈ ಅಪಘಾತ ಸಂಭವಿಸಿದೆ ಸಂಭವಿಸಿದೆ ಎಂದು ಎಸ್​ಪಿ ಕೃಷ್ಣಕಾಂತ ಹೇಳಿದ್ದಾರೆ.

ಮೋದಿ ಸಂತಾಪ…
ಧಾರವಾಡದಲ್ಲಿ ನಡೆದ ಅಪಘಾತದಲ್ಲಿ 11ಸಾವನಪ್ಪಿದ ಘಟನೆಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಮೃತರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ, ಗಾಯಾಳುಗಳು ಶೀಘ್ರವಾಗಿ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.

Leave a Reply

Your email address will not be published. Required fields are marked *