ಗುಜರಾತ್ ಬಳಿಕ ಇದೀಗ ಮಧ್ಯಪ್ರದೇಶದಲ್ಲೂ ಕಾಂಗ್ರೆಸ್ ಬೆಂಬಲಿಸಲು ನಿರ್ಧರಿಸಿದ ಹಾರ್ದಿಕ್ ಪಟೇಲ್!
ನ್ಯೂಸ್ ಕನ್ನಡ ವರದಿ(09-04-2018): ಗುಜರಾತಿನಲ್ಲಿ ಬೆಂಬಲಿಸಿದಂತೆ ಮಧ್ಯ ಪ್ರದೇಶ ಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲು ಸಿದ್ಧ ಎಂದು ಗುಜರಾತಿನ ಪಾಟಿದಾರ್ ಮುಖಂಡ ಹಾರ್ಧಿಕ್ ಪಟೇಲ್ ಹೇಳಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷವು ನಮ್ಮ ಸಹಾಯವನ್ನು ಯಾಚಿಸಬೇಕು ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.
ಗುಜರಾತ್ ಮಾದರಿಯಲ್ಲೇ ಮಧ್ಯಪ್ರದೇಶದಲ್ಲೂ ದಲಿತ ಮುಖಂಡ ಜಿಗ್ನೇಶ್ ಮೆವಾನಿ, ಒಬಿಸಿ ಮುಖಂಡ ಅಲ್ಪೇಶ್ ಥಕೋರೆ ಹಾಗೂ ನಾನು ಜೊತೆಯಾಗಿ ಕೆಲಸ ನಿರ್ವಹಿಸಲು ಸಿದ್ಧ ಎಂದು ಪಾಟೀದಾರ್ ಸಮುದಾಯದ ಮುಖಂಡ ಹಾರ್ದಿಕ್ ಪಟೇಲ್ ಹೇಳಿದ್ದಾರೆ. ನಾನು ಹಿಂದುಳಿದ ವರ್ಗದವನಾಗಿದ್ದು, ಒಂದು ವೇಳೆ ಕಾಂಗ್ರೆಸ್ ಬೆಂಬಲ ಕೇಳಿದರೆ ನಾನು ಬೆಂಬಲಿಸಲು ಸಿದ್ಧನಿದ್ದೇನೆ ಎಂದರು.
ದೇಶವನ್ನು ವಿಭಜಿಸುವ ಫ್ಯಾಶಿಸ್ಟ್ ಶಕ್ತಿಗಳ ವಿರುದ್ಧ ಹೋರಾಟ ಮಾಡುವವರ ಜೊತೆಯಲ್ಲಿ ನಾನು ಎಂದಿಗೂ ಕೈಜೋಡಿಸುತ್ತೇನೆ. ಸಂವಿಧಾನವನ್ನು ತಿರುಚುವ ಹಾಗೂ ತಿದ್ದುಪಡಿ ಮಾಡುವ ವಿಚಿದ್ರಕಾರಿ ಶಕ್ತಿಗಳ ವಿರುದ್ಧ ದೇಶವನ್ನು ರಕ್ಷಿಸುವ ಕೆಲಸವನ್ನು ನಾವು ಮಾಡಬೇಕಾಗಿದೆ ಎಂದು ಹಾರ್ದಿಕ್ ಪಟೇಲ್ ಹೇಳಿದರು.