ದನದ ಮಾಂಸ ತಿನ್ನೋರನ್ನು ಜೈಲಿಗೆ ಹಾಕ್ತಿನಿ ಅನ್ನೋರು ಮಾಂಸ ರಫ್ತು ಮಾಡೋರನ್ನ ಯಾಕೆ ಜೈಲಿಗೆ ಹಾಕಲ್ಲ?
ಕೊಪ್ಪಳ: ಈ ಬಿಜೆಪಿ ಸರಕಾರಕ್ಕೆ ದಪ್ಪಚರ್ಮ. ವಿರೋಧ ಪಕ್ಷವಾಗಿ ಕಾಂಗ್ರೆಸ್ ಸಮರ್ಥವಾಗಿ ಕೆಲಸ ಮಾಡ್ತಿದೆ. ದನದ ಮಾಂಸ ತಿನ್ನೋರನ್ನು ಜೈಲಿಗೆ ಹಾಕ್ತಿನಿ ಅನ್ನೋರು ಮಾಂಸ ರಫ್ತು ಮಾಡೋರನ್ನ ಯಾಕೆ ಜೈಲಿಗೆ ಹಾಕಲ್ಲ? ದನದ ಮಾಂಸ ಅತಿ ಹೆಚ್ಚು ರಫ್ತು ಮಾಡುವ ರಾಜ್ಯ ಯಾವುದು ಗೊತ್ತಿಲ್ವಾ? ಎಂದು ಶಾಸಕ ಹಿಟ್ನಾಳ ಪ್ರಶ್ನಿಸಿದ್ದಾರೆ.
ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಸಮಾಧಾನ ಬರೀ ಕಾಂಗ್ರೆಸ್ನಲ್ಲಲ್ಲ, ಬಿಜೆಪಿಯಲ್ಲಿ ಎಷ್ಟು ಜನ ಅಸಮಾಧಾನಿತರು ಇದ್ದಾರೆ ಅನ್ನೋದನ್ನು ಮಾಧ್ಯಮದಲ್ಲಿ ನೀವೇ ತೋರಿಸ್ತಿದ್ದಿರಲ್ಲ. ಅನುದಾನ ಹಂಚಿಕೆಯಲ್ಲಿ ಸರಕಾರ ಎಷ್ಟು ತಾರತಮ್ಯ ಮಾಡ್ತಿದೆ ಅನ್ನೋದನ್ನ ಸ್ವತಃ ಬಿಜೆಪಿ ಶಾಸಕ ಯತ್ನಾಳ ಅವರೇ ಹೇಳಿದ್ದಾರೆ ಎಂದು ತಿಳಿಸಿದರು.
ಸಿಡಿ ವಿಚಾರ ತನಿಖೆ ಆಗಲಿ…
ಸಿಡಿ ವಿಚಾರದ ಬಗ್ಗೆ ನನಗೆ ಮಾಹಿತಿ ಇಲ್ಲ. ಇದನ್ನ ಸ್ವತಃ ಬಿಜೆಪಿ ಶಾಸಕರೇ ಹೇಳಿದ್ದಾರೆ. ಅದೇನು ಅನ್ನೋದು ಮೊದಲು ತನಿಖೆ ಆಗಲಿ. ಸಿಡಿ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಯಡಿಯೂರಪ್ಪ ಯಾಕಿಷ್ಡು ವೀಕ್ ಆಗಿದ್ದಾರೊ ಗೊತ್ತಿಲ್ಲ ಎಂದು ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದ್ದಾರೆ.
ಬಿಜೆಪಿಯಲ್ಲಿ ಕೆಸರೆರಚಾಟ ಶುರುವಾಗಿದೆ. ಈ ಸರಕಾರ ಬಹಳ ದಿನ ಉಳಿಯಲ್ಲ ಅಂತ ಬಿಜೆಪಿ ಶಾಸಕರೇ ಹೇಳ್ತಿದ್ದಾರೆ. ಸಿಡಿ ಇದ್ದರೆ ಬಿಡುಗಡೆ ಮಾಡಲಿ. ಸತ್ಯಾಸತ್ಯತೆ ಹೊರಗೆ ಬರಲಿ. ಸಿಡಿ ವಿಚಾರವಾಗಿ ನನಗೆ ಗೊತ್ತಿಲ್ಲ. ಬಿಜೆಪಿ ಶಾಸಕರೇ ಸಿಡಿ ವಿಚಾರ ಬಹಿರಂಗಪಡಿಸಿದ್ದಾರೆ. ನಮಗೂ ಸಂಶಯ ಬಂದಿದೆ. ಈ ಬಗ್ಗೆ ತನಿಖೆಯಾಗಲಿ ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಬಿಜೆಪಿ ಸರಕಾರ ಬಂದ ನಂತರ ಹೈದರಾಬಾದ್ ಕರ್ನಾಟಕ ಭಾಗವನ್ನು ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿತು. ಕಲ್ಯಾಣ ಕರ್ನಾಟಕ ಎಂದು ಹೆಸರಿಟ್ಟು ವರ್ಷವಾದರೂ ಒಂದು ರೂಪಾಯಿ ಅನುದಾನ ಕೊಡಲಿಲ್ಲ. ಹೈದ್ರಾಬಾದ್ ಕರ್ನಾಟಕ ಹೆಸರಿದ್ದಾಗ ಪ್ರತಿ ವರ್ಷ 1,100 ಕೋಟಿ ರೂಪಾಯಿ ಅನುದಾನ ಬರುತ್ತಿತ್ತು. ಈ ಭಾಗ ಕಲ್ಯಾಣ ಕರ್ನಾಟಕ ಆದ ನಂತರ ಅಭಿವೃದ್ಧಿಯಲ್ಲಿ ಒಂದು ವರ್ಷ ಹಿಂದುಳಿದಂತಾಗಿದೆ. ಈ ಸರಕಾರ ಕೊರೋನಾ ನೆಪದಲ್ಲಿ 8 ತಿಂಗಳು ಕಳೆದಿದೆ. ಕೊರೋನಾ ಕ್ರಮಕ್ಕಾಗಿ ಸುಮಾರು 5 ಸಾವಿರ ಕೋಟಿ ರೂ. ಖರ್ಚು ಮಾಡಿರುವ ಸರಕಾರ ಅಭಿವೃದ್ಧಿಗೆ ಆದ್ಯತೆ ನೀಡುತ್ತಿಲ್ಲ ಎಂದು ಅವರು ಆರೋಪಿಸಿದರು.
ದೇಶದ ಪ್ರತಿಯೊಬ್ಬರಿಗೂ ಲಸಿಕೆ ಸಿಗುವಂತಾಗಲಿ. ಅನೇಕರು ಕೋವಿಡ್ನಿಂದಾಗಿ ಜೀವ ಕಳೆದುಕೊಂಡಿದ್ದಾರೆ. ಈಗ ಲಸಿಕೆ ಬಂದಿರುವುದು ಸ್ವಾಗತಾರ್ಹ. ಶೀಘ್ರವೇ ಎಲ್ಲರಿಗೂ ಲಸಿಕೆ ಸಿಗುವಂತೆ ರಾಜ್ಯ ಮತ್ತು ಕೇಂದ್ರ ಸರಕಾರ ಮಾಡಲಿ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಒತ್ತಾಯಿಸಿದರು.