“ನಾನು ಸೈನಿಕರ ಮೇಲೆ ಕಲ್ಲು ತೂರಾಟ ನಡೆಸಿದ್ದೆನೆಂದು ಸಾಬೀತಾದರೆ ನನ್ನನ್ನು ಗಲ್ಲಿಗೇರಿಸಿ”!

ನ್ಯೂಸ್ ಕನ್ನಡ ವರದಿ-(09.04.18): ಕಾಶ್ಮೀರದಲ್ಲಿ ಸೇನೆಯ ಮೇಲೆ ಕಲ್ಲು ತೂರಾಟ ನಡೆಸಿದನೆಂಬ ಆರೋಪದ ಮೇಲೆ ಸೇನೆಯು ಜೀಪಿಗೆ ಕಟ್ಟಿ ಮೆರವಣಿಗೆ ನಡೆಸಿದ ಫಾರೂಕ್ ಅಹ್ಮದ್ ದರ್ ಎಂಬ ಯುವಕ ಈಗ ಕಂಗಾಲಾಗಿದ್ದಾನೆ. ಮಿತ್ರರೂ ಕುಟುಂಬಸ್ಥರೂ ಸೇರಿದಂತೆ ಊರವರು ಹೋದಲ್ಲೆಲ್ಲಾ ಈತನನ್ನು ಸಂಶಯಾಸ್ಪದ ದೃಷ್ಟಿಯಲ್ಲಿ ನೋಡುತ್ತಿದ್ದಾರೆ ಎಂದು ಯುವಕ ಹೇಳುತ್ತಿದ್ದಾನೆ.

ಘಟನೆಯ ನಂತರ ತನಿಖೆ ನಡೆಸಿದ ಮಾನವ ಹಕ್ಕುಗಳ ಆಯೋಗವು ಯುವಕನಿಗೆ ಹತ್ತು ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂದು ಅಲ್ಲಿನ ಸರಕಾರಕ್ಕೆ ಸೂಚನೆ ನೀಡಿತ್ತು. ಯುವಕನಿಗೆ ಪರಿಹಾರ ನೀಡಲು ಯಾವುದೇ ಕಾನೂನು ಹೇಳುವುದಿಲ್ಲ ಎಂದು ಸರಕಾರವು ಮಾನವ ಹಕ್ಕುಗಳ ಆಯೋಗದ ಸೂಚನೆಯನ್ನು ತಿರಸ್ಕರಿಸಿತ್ತು. ನಂತರ ಕಾಶ್ಮೀರದ ಹ್ಯೂಮನ್ ರೈಟ್ಸ್ ಗ್ರೂಪ್ ಎಂಬ ಸಂಘಟನೆಯು ಸರಕಾರದ ನಿರ್ಧಾರದ ವಿರುದ್ಧ ಹೈಕೋರ್ಟ್ ಮೆಟ್ಟಲೇರಿದೆ.

ತನ್ನ ಪಾಡಿಗೆ ಉದ್ಯೋಗ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಅಹ್ಮದ್ ದರ್ ಘಟನೆಯ ನಂತರ ಖಿನ್ನತೆಯಿಂದ ಬಳಲುತ್ತಿದ್ದು, ಮಾನಸಿಕವಾಗಿ ಕುಗ್ಗಿಹೋಗಿದ್ದಾನೆ. ಯಾವುದೇ ಸಣ್ಣ ಕೆಲಸವನ್ನು ನಿರ್ವಹಿಸಲು ಆತನಿಂದ ಸಾಧ್ಯವಾಗುತ್ತಿಲ್ಲ.

ಆ ಘಟನೆಯ ಕುರಿತು ಪ್ರತಿಕ್ರಯಿಸಿದ 28 ವರ್ಷದ ಫಾರೂಕ್ ಅಹ್ಮದ್ ದರ್ “ ಕಲ್ಲು ತೂರಾಟದ ಘಟನೆಯ ಯಾವುದೇ ತನಿಖೆಗೂ ನಾನು ಸಿದ್ಧ. ಒಂದು ವೇಳೆ ನಾನೇ ಕಲ್ಲು ತೂರಾಟ ನಡೆಸಿದ್ದು ಎಂದು ದೃಢಪಟ್ಟರೆ ನೀವು ನನ್ನನ್ನು ಗಲ್ಲಿಗೇರಿಸಿ. ನಾನು ನಿರಪರಾಧಿ ಎಂದು ಸಾಬೀತಾದರೆ ನನ್ನ ಇಂದಿನ ಸ್ಥಿತಿಗೆ ಕಾರಣರಾದವರನ್ನು ಶಿಕ್ಷಿಸಬೇಕು” ಎನ್ನುತ್ತಾನೆ.

Leave a Reply

Your email address will not be published. Required fields are marked *