ಆರ್‌ಎಸ್‌ಎಸ್‌ ಮೂಲಗಳಿಂದ ಬಂದ ಮಾಹಿತಿ ಪ್ರಕಾರ ಏಪ್ರಿಲ್ ಬಳಿಕ‌ ಯಡಿಯೂರಪ್ಪ ತಲೆದಂಡ ಖಚಿತ: ಸಿದ್ದರಾಮಯ್ಯ

ಮೈಸೂರು: ಆರ್‌ಎಸ್‌ಎಸ್‌ ಮೂಲಗಳಿಂದ ಬಂದ ಮಾಹಿತಿ ಪ್ರಕಾರ ಏಪ್ರಿಲ್ ಬಳಿಕ‌ ಮುಖ್ಯಮಂತ್ರಿ ಸ್ಥಾನದಿಂದ ಬಿಎಸ್ ಯಡಿಯೂರಪ್ಪ ಅವರನ್ನು ತೆಗೆಯುವ ಮೂಲಕ ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಆಗಲಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಗಂಭೀರ ವಿಷಯವೊಂದನ್ನು ಹೊರಹಾಕಿದ್ದಾರೆ.

ಮೈಸೂರಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಮುಂದುವರೆಯುತ್ತಾರೆ ಎಂದು ಅಮಿತ್ ಶಾ ಹೇಳಿದ್ದಾರೆ. ಇನ್ನೇನು ಬಂದು ತೆಗೆಯುತ್ತೇನೆಂದು ಹೇಳೊಕಾಗುತ್ತಾ..? ಯಾವುದೇ ಪಕ್ಷದ ಹೈಕಮಾಂಡ್ ಆದ್ರೂ ತೆಗೆಯುತ್ತೇನೆಂದು ಹೇಳಲ್ಲ. ಹೈಕಮಾಂಡ್ ತೆಗೆಯುತ್ತೇನೆಂದ್ರೆ ಸರಕಾರ ನಡೆಯುತ್ತಾ..? ಕೆಲಸ ಮಾಡೋಕಾಗುತ್ತಾ..? ಎಂದು ಪ್ರಶ್ನಿಸಿದರು.

ಅಮಿತ್‌ ಶಾ ಆ ರೀತಿ ಹೇಳಬಹುದು. ಆದರೆ ನನಗಿರುವ ಮಾಹಿತಿ ಬೇರೆ. ನನಗೆ ಆರ್‌ಎಸ್ಎಸ್ ಮೂಲಗಳಿಂದ ಮಾಹಿತಿ ಇದೆ. ಸಿಎಂ ಯಡಿಯೂರಪ್ಪ ಅವರನ್ನು ಏಪ್ರಿಲ್ ಬಳಿಕ ತೆಗೆಯುತ್ತಾರೆ ಎಂದು ಹೇಳಿದರು. ಇನ್ನು, ರಮೇಶ್‌ ಜಾರಕಿಹೊಳಿ ಯೋಗೇಶ್ವರ್‌ 9 ಕೋಟಿ ರೂ. ಸಾಲ ಮಾಡಿದ್ದಾರೆ ಎಂದು ಹೇಳಿದ್ದಾರೆ. ಯೋಗೇಶ್ವರ್‌ಗೆ ಅಷ್ಟೊಂದು ದುಡ್ಡು ಎಲ್ಲಿಂದ ಬಂತು..? ಯಾರಿಗಾಗಿ ಖರ್ಚು ಮಾಡಿದರು ಎಂಬುದು ಕೂಡ ತನಿಖೆಯಾಗಬೇಕು ಎಂದು ತಿಳಿಸಿದರು.

ಸಿದ್ದರಾಮಯ್ಯ ಬೆಂಬಲಿಗರೇ ಆಡಳಿತ ನಡೆಸುತ್ತಿದ್ದಾರೆ ಎಂಬ ಯತ್ನಾಳ್‌ ಹೇಳಿಕೆ ಬಗ್ಗೆ ಮಾತನಾಡಿದ ಅವರು, ವಿರೋಧ ಪಕ್ಷದವರು ಸರಕಾರ ನಡೆಸುತ್ತಾರೆ ಎಂದಾದ ಮೇಲೆ ಯಡಿಯೂರಪ್ಪ ಅವರು ನಾಮಕಾವಸ್ಥೆ ಮುಖ್ಯಮಂತ್ರಿ ಎಂಬುದು ಸಾಬೀತಾಯಿತಲ್ಲವೇ..? ಆದ್ದರಿಂದ ಅವರು ಕುರ್ಚಿಯಿಂದ ಕೆಳಗಿಳಿಯಬೇಕಲ್ಲವೇ ಎಂದು ಮಾಜಿ ಸಿಎಂ ಪ್ರಶ್ನಿಸಿದರು.

ಶೀಘ್ರ ಕಾಂಗ್ರೆಸ್‌ಗೆ ಶರತ್‌..!
ಹೊಸಕೋಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಶರತ್‌ ಬಚ್ಚೇಗೌಡ ಮತ್ತು ನಮ್ಮ ಪಕ್ಷದವರು ಚುನಾವಣೆ ನೇತೃತ್ವ ವಹಿಸಿದ್ದರು. ಹೊಸಕೋಟೆಯಲ್ಲಿ ಶೇ.70 ಭಾಗ ನಮ್ಮ ಪಕ್ಷದ ಬೆಂಬಲಿಗರೇ ಗೆದ್ದಿದ್ದರು. ಈ ಬಗ್ಗೆ ಧನ್ಯವಾದ ಹೇಳಲು ಶರತ್‌ ಬಂದಿದ್ದರು. ಅವರು ಕಾಂಗ್ರೆಸ್‌ ಸೇರೋ ಬಗ್ಗೆ ಚರ್ಚೆ ನಡೆಯುತ್ತಿದೆ. ಮಾತುಕತೆ ಇನ್ನೂ ಪೂರ್ಣಗೊಂಡಿಲ್ಲ. 15 ದಿನದಲ್ಲಿ ಇತ್ಯರ್ಥ ಆಗಬಹುದು ಎಂದು ಹೇಳಿದರು.

Leave a Reply

Your email address will not be published. Required fields are marked *