ಕೊರೋನಾ ಕುರಿತಂತೆ ವಿಶ್ವ ಆರೋಗ್ಯ ಸಂಸ್ಥೆ, ಚೀನಾ ಬೇಗನೇ ಕಾರ್ಯಪ್ರವೃತ್ತವಾಗದಿರುವುದು ಜಾಗತಿಕ ಹರಡುವಿಕೆಗೆ ಕಾರಣ: ತನಿಖಾ ತಂಡ

ಜಿನೀವಾ: ಜಗತ್ತಿಗೇ ಮಾರಕವಾಗಿ ಪರಿಣಮಿಸಿರುವ ಮಾರಕ ಕೊರೋನಾ ವೈರಸ್ ಕುರಿತಂತೆ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಚೀನಾ ಸರ್ಕಾರ ಇನ್ನೂ ಬೇಗನೇ ಕಾರ್ಯಪ್ರವೃತ್ತವಾಗಬಹುದಿತ್ತು ಎಂದು ಕೊರೋನಾ ವೈರಸ್ ಮೂಲ ಶೋಧ ಮಾಡಲು ಚೀನಾಗೆ ತೆರಳಿರುವ ಜಾಗತಿಕ ತಜ್ಞರ ತಂಡ ಅಭಿಪ್ರಾಯಪಟ್ಟಿದೆ.

ಆರಂಭಿಕ ಲಕ್ಷಣಗಳು ಅತಿವೇಗವಾಗಿ ಬೆಳವಣಿಗೆ ಹೊಂದಲು ಪೂರಕವಾದ ಅಂಶಗಳಿದ್ದವು ಎಂಬುದು ಪಿಡುಗಿನ ಆರಂಭಿಕ ಕಾಲಾನುಕ್ರಮಣಿಕೆಯನ್ನು ಅಧ್ಯಯನ ಮಾಡಿದಾಗ ಗೊತ್ತಾಗಿದೆ. ಕೊರೊನಾ ವೈರಸ್ ಮೊದಲು ಪತ್ತೆಯಾದಾಗ ಚೀನಾ ಮತ್ತು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಇನ್ನಷ್ಟು ತ್ವರಿತವಾಗಿ ಕಾರ್ಯಪ್ರವೃತ್ತವಾಗಬಹುದಿತ್ತು. ಸಾಂಕ್ರಾಮಿಕದ ಬಗ್ಗೆ ಮರೆಮಾಚಿದ್ದು ಜಾಗತಿಕ ಹರಡುವಿಕೆಗೆ ಕಾರಣವಾಯಿತು ಎಂದು ‘ಸಾಂಕ್ರಾಮಿಕ ತಡೆ ಸಿದ್ಧತೆ ಮತ್ತು ಪ್ರತಿಕ್ರಿಯೆ ಸ್ವತಂತ್ರ ತಂಡ (ಐಪಿಪಿಆರ್)ವು ಎರಡನೇ ವರದಿಯಲ್ಲಿ ಉಲ್ಲೇಖಿಸಿದೆ.

2019ರ ಅಂತ್ಯದಲ್ಲಿ ಮೊದಲ ಬಾರಿಗೆ ಕೋವಿಡ್ ಸೋಂಕು ವುಹಾನ್ ನಲ್ಲಿ ಕಾಣಿಸಿಕೊಂಡಿತ್ತು. ಆ ಬಳಿಕ ಕ್ರಮೇಣ ಜಾಗತಿಕ ಸಾಂಕ್ರಾಮಿಕವಾಗಿ ಮಾರ್ಪಟ್ಟಿತು. ಆರಂಭದಲ್ಲೇ ವುಹಾನ್ ಆಡಳಿತ ಪರಿಣಾಮಕಾರಿ ಕ್ರಮಗಳಿಂದ ಸೋಂಕು ವುಹಾನ್ ನಿಂದ ಹೊರಗೆ ಹೋಗದಂತೆ ತಡೆಯಬಹುದಿತ್ತು. ಆದರೆ ಈ ವಿಚಾರದಲ್ಲಿ ವುಹಾನ್ ಆಡಳಿತ ಸಂಪೂರ್ಣ ವಿಫಲಾಗಿದೆ. ಕೇವಲ ಚೀನಾ ಸರ್ಕಾರ ಮಾತ್ರವಲ್ಲ ವಿಶ್ವ ಆರೋಗ್ಯ ಸಂಸ್ಥೆ ಕೂಡ ಇದರಲ್ಲಿ ಸಂಪೂರ್ಣ ವಿಫಲವಾಗಿದೆ. ವುಹಾನ್ ನಲ್ಲೇ 100 ಮಿಲಿಯನ್ ಗೂ ಅಧಿಕ ಮಂದಿ ಸೋಂಕಿಗೆ ತುತ್ತಾಗಿದ್ದರು. ಅಲ್ಲದೆ 2 ಮಿಲಿಯನ್ ಗೂ ಅಧಿಕ ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಚೀನಾ ಸರ್ಕಾರ ತೋರಿಸಿರುವ ಸಂಖ್ಯೆಗೂ ವಾಸ್ತವಾಂಶಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಸಾಕಷ್ಟು ಪುರಾವೆ ಮತ್ತು ಮಾಹಿತಿಗಳು ಇದ್ದರೂ ವಿಶ್ವ ಆರೋಗ್ಯ ಸಂಸ್ಥೆ ತನ್ನ ತುರ್ತು ಸಮಿತಿಯನ್ನು ಜನವರಿ 22, 2020 ರವರೆಗೆ ಕರೆಯಲಿಲ್ಲ ಎಂದು ತಂಡ ತನ್ನ 2ನೇ ವರದಿಯಲ್ಲಿ ಹೇಳಿದೆ.

ಅಲ್ಲದೆ ಸಮಿತಿಯ ಪುನರಾವಲೋಕನದಲ್ಲಿ, ಎಲ್ಲಾ ದೇಶಗಳಲ್ಲಿ ಸಾಂಕ್ರಾಮಿಕ ರೋಗದ ಆರಂಭಿಕ ಅವಧಿಯಲ್ಲಿ ಸೋಂಕಿನ ಪ್ರಮಾಣವು ವರದಿಯಾಗಿರುವುದಕ್ಕಿಂತ ಹೆಚ್ಚಾಗಿದೆ ಎಂಬುದು ಸ್ಪಷ್ಟವಾಗಿದೆ. ಹೆಚ್ಚಾಗಿ ಹರಡಿರುವ ಸಾಂಕ್ರಾಮಿಕ ರೋಗವು ಜಾಗತಿಕ ಹರಡುವಿಕೆಗೆ ಕಾರಣವಾಗಿದೆ. ರೋಗಲಕ್ಷಣಗಳಿಲ್ಲದವರು ಸೇರಿದಂತೆ ಜನರ ನಡುವೆ ವೈರಸ್ ಹರಡಬಹುದು ಎಂದು ಎಚ್ಚರಿಸಲು ವಿಶ್ವ ಆರೋಗ್ಯ ಸಂಸ್ಥೆ ಮತ್ತು ಚೀನಾ ರಾಷ್ಟ್ರೀಯ ಅಧಿಕಾರಿಗಳು ಶೀಘ್ರವಾಗಿ ಮುಂದಾಗಿಲ್ಲ. ಇದು ಸೋಂಕು ಪ್ರಸರಣ ಹೆಚ್ಚಾಗಲು ಕಾರಣವಾಗಿತ್ತು.

WHO ಕೊರೋನಾ ವೈರಸ್ ಸಾಂಕ್ರಾಮಿಕ ಪದವನ್ನು ಮೊದಲೇ ಬಳಸಬಹುದಿತ್ತು. ಆದರೆ ಕಳೆದ ವರ್ಷ ಮಾರ್ಚ್ 11 ರವರೆಗೆ ಈ ಪದವನ್ನು ಬಳಸಲಿಲ್ಲ, ಆದರೆ ಈ ಪದವನ್ನು ಬಳಸಿದ್ದರೆ ದೇಶಗಳು ಪರಿಸ್ಥಿತಿಯನ್ನು ಹೆಚ್ಚು ಗಂಭೀರವಾಗಿ ಪರಿಗಣಿಸಿರಬಹುದಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ.

Leave a Reply

Your email address will not be published. Required fields are marked *