ಆಸ್ಟ್ರೇಲಿಯಾ ವಿರುದ್ದದ 4ನೇ ಟೆಸ್ಟ್: ಭಾರತಕ್ಕೆ ಐತಿಹಾಸಿಕ ಸರಣಿ ಜಯ

ಸ್ಬೇನ್: ಆಸ್ಟ್ರೇಲಿಯಾ ವಿರುದ್ದದ 4ನೇ ಮತ್ತು ಅಂತಿಮ ಟೆಸ್ಟ್ ನಲ್ಲಿ ಪ್ರವಾಸಿ ಭಾರತ ತಂಡ ಪ್ರಬಲ ಆಸ್ಟ್ರೇಲಿಯಾ ತಂಡವನ್ನು 3 ವಿಕೆಟ್ ಗಳ ಅಂತರದಲ್ಲಿ ಮಣಿಸಿ ಟೆಸ್ಟ್ ಸರಣಿಯನ್ನು ಕೈ ವಶ ಮಾಡಿಕೊಂಡಿದೆ.

ಬ್ರಿಸ್ಬೇನ್ ನ ಗಬ್ಬಾ ಕ್ರೀಡಾಂಗಣದಲ್ಲಿ ನಡೆದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು 3 ವಿಕೆಟ್‌ಗಳ ಅಂತರದಲ್ಲಿ ಮಣಿಸುವ ಮೂಲಕ ಭಾರತ ತಂಡ 4 ಪಂದ್ಯಗಳ ಟೆಸ್ಟ್ ಸರಣಿಯನ್ನು 2–1 ಅಂತರದಿಂದ ಕೈ ವಶ ಮಾಡಿಕೊಂಡಿದೆ. ಆಸ್ಟ್ರೇಲಿಯಾ ನೀಡಿದ್ದ ಸವಾಲಿನ ಗುರಿಯನ್ನು ಭಾರತ ತಂಡ 7 ವಿಕೆಟ್ ಕಳೆದುಕೊಂಡು ಮೆಟ್ಟಿ ನಿಂತು ಗೆದ್ದು ಬೀಗಿತು.

ಅಂತಿಮ ದಿನವಾದ ಇಂದು ಆರಂಭದಲ್ಲೇ ಭಾರತ ಆಘಾತ ಎದುರಿಸಿತು. ರೋಹಿತ್ ಶರ್ಮಾ ಕೇವಲ 7 ರನ್ ಗಳಿಸಿ ಔಟ್ ಆದರು. ಬಳಿಕ ಜೊತೆಗೂಡಿದ ಗಿಲ್ ಮತ್ತು ಪೂಜಾರ ಜೋಡಿ ಶತಕದ ಜೊತೆಯಾಡುವ ಮೂಲಕ ಭಾರತದ ಇನ್ನಿಂಗ್ಸ್ ಗೆ ಬಲ ತಂದರು. ಈ ಹಂತದಲ್ಲಿ 91 ರನ್ ಗಳಿಸಿ ಶತಕದಂಚಿನಲ್ಲಿದ್ದ ಗಿಲ್ ಲೈಯಾನ್ ಗೆ ವಿಕೆಟ್ ಒಪ್ಪಿಸಿದರು. ಬಳಿಕ ರಹಾನೆ (24 ರನ್), ಪೂಜಾರ (56 ರನ್), ಮಯಾಂಕ್ ಅಗರ್ವಾಲ್ (9 ರನ್) ಔಟ್ ಆದರು. ಈ ವೇಳೆ ಪಂದ್ಯ ಡ್ರಾ ಆಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಕ್ರೀಸ್ ಗೆ ಬಂದ ರಿಷಬ್ ಪಂತ್ 138 ಎಸೆತಗಳಲ್ಲಿ ಅಜೇಯ 89 ರನ್ ಗಳಿಸಿ ಭಾರತವನ್ನು ಗೆಲುವಿನ ದಡ ಸೇರಿಸಿದರು. ಪಂತ್ ಗೆ ವಾಷಿಂಗ್ಟನ್ ಸುಂದರ್ (22 ರನ್) ಅಂತಿಮ ಹಂತದಲ್ಲಿ ಉತ್ತಮ ಸಾಥ್ ನೀಡಿದರು.

ಆ ಮೂಲಕ ಕಳೆದ ಮೂರು ದಶಕಗಳಿಂದ ಅಬೇಧ್ಯವಾಗಿದ್ದ ಗಾಬಾದಲ್ಲಿ ಆಸ್ಟ್ರೇಲಿಯನ್ನರಿಗೆ ಮರೆಯಲಾಗದ ಸೋಲುಣಿಸಿದೆ.

ಐಸಿಸಿ ಟೆಸ್ಟ್‌ ರ‍್ಯಾಂಕಿಂಗ್‌ (ತಂಡಗಳ ವಿಭಾಗ)

  1. ನ್ಯೂಜಿಲೆಂಡ್ (118.44 ರೇಟಿಂಗ್)
  2. ಟೀಮ್ ಇಂಡಿಯಾ (117.65 ರೇಟಿಂಗ್)
  3. ಆಸ್ಟ್ರೇಲಿಯಾ (113 ರೇಟಿಂಗ್)
  4. ಇಂಗ್ಲೆಂಡ್ (106 ರೇಟಿಂಗ್‌)
  5. ದಕ್ಷಿಣ ಆಫ್ರಿಕಾ (96 ರೇಟಿಂಗ್)
  6. ಶ್ರೀಲಂಕಾ (86 ರೇಟಿಂಗ್)
  7. ಪಾಕಿಸ್ತಾನ (82 ರೇಟಿಂಗ್)
  8. ವೆಸ್ಟ್‌ ಇಂಡೀಸ್‌ (77 ರೇಟಿಂಗ್)
  9. ಬಾಂಗ್ಲಾದೇಶ (55 ರೇಟಿಂಗ್)

ಟೆಸ್ಟ್‌ ಚಾಂಪಿಯನ್‌ಷಿಪ್‌ ರೇಸ್‌ನಲ್ಲೂ ಭಾರತ ಮುಂದು…
ಟೀಮ್ ಇಂಡಿಯಾ ಈ ಜಯದೊಂದಿಗೆ ಐಸಿಸಿ ಟೆಸ್ಟ್‌ ಚಾಂಪಿಯನ್‌ಷಿಪ್‌ ಟೂರ್ನಿಯಲ್ಲಿ ತನ್ನ 2ನೇ ಸ್ಥಾನವನ್ನು ಮತ್ತಷ್ಟು ಬಲಪಡಿಸಿಕೊಂಡಿದ್ದು, ಈ ಚಾಂಪಿಯನ್‌ಷಿಪ್‌ನ ಫೈನಲ್‌ ತಲುಪಲು ಮತ್ತಷ್ಟು ಹತ್ತಿರವಾಗಿದೆ. ಆಸ್ಟ್ರೇಲಿಯಾ ಮತ್ತು ಭಾರತ ತಂಡಗಳು ಸದ್ಯ ಈ ಪಟ್ಟಿಯಲ್ಲಿ ಮೊದಲ ಎರಡು ಸ್ಥಾನಗಳಲ್ಲಿದ್ದು, ಕ್ರಮವಾಗಿ 3ನೇ ಮತ್ತು ನಾಲ್ಕನೇ ಸ್ಥಾನ ಪಡೆದುಕೊಂಡಿರುವ ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್‌ ತಂಡಗಳಿಂದ ಪ್ರಬಲ ಪೈಪೋಟಿಯಿದೆ.

ಟೀಮ್ ಇಂಡಿಯಾ ಇದೀಗ ತಾಯ್ನಾಡಿನಲ್ಲಿ ಪ್ರವಾಸಿ ಇಂಗ್ಲೆಂಡ್ ವಿರುದ್ಧ 4 ಪಂದ್ಯಗಳ ಟೆಸ್ಟ್‌ ಸರಣಿಯನ್ನಾಡಲಿದ್ದು, ಇಲ್ಲಿ ಗೆದ್ದರೆ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ ಸ್ಥಾನ ಖಾತ್ರಿಯಾಗಲಿದೆ. ಭಾರತ ಈವರೆಗೆ 5 ಸರಣಿಗಳಿಂದ 13 ಪಂದ್ಯಗಳನ್ನು ಆಡಿದ್ದು9 ಜಯ, 3 ಸೋಲು ಮತ್ತು 1 ಸೋಲಿನೊಂದಿಗೆ 430 ಅಂಕಗಳನ್ನು ಗಳಿಸಿದೆ. ಜೊತೆಗೆ 1.619 ರಷ್ಟು ವಿನ್ನಿಂಗ್‌ ರೇಟ್‌ ಹೊಂದಿದೆ.

Leave a Reply

Your email address will not be published. Required fields are marked *