ಪ್ರತಿಪಕ್ಷಗಳೆಲ್ಲಾ ಒಂದಾಗಿ ಹೋರಾಡಿದರೆ ಮೋದಿಗೆ ಸೋಲು ಖಚಿತ: ರಾಹುಲ್ ಗಾಂಧಿ
ನ್ಯೂಸ್ ಕನ್ನಡ ವರದಿ-(09.04.18): “2019ರ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಗೆಲ್ಲುವ ಮಾತು ಹಾಗಿರಲಿ; ಪ್ರಧಾನಿ ಮೋದಿ ಅವರ ವಾರಾಣಸಿ ಕ್ಷೇತ್ರವನ್ನು ಕೂಡ ಬಿಜೆಪಿ ಕಳೆದುಕೊಳ್ಳುವುದು ನಿಶ್ಚಿತ ‘ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಈಗಲೇ ಭವಿಷ್ಯ ನುಡಿದಿದ್ದಾರೆ. ಉತ್ತರ ಪ್ರದೇಶದಲ್ಲಿ ಸಮಾಜವಾದಿ ಮತ್ತು ಬಿಎಸ್ಪಿ ಜತೆಗೂಡಿರುವುದರಿಂದ ವಾರಾಣಸಿ ಕ್ಷೇತ್ರದಲ್ಲಿ ಪ್ರಧಾನಿ ಮೋದಿಗೆ ಸೋಲಾಗುವುದು ಖಚಿತ ಎಂದು ರಾಹುಲ್ ಹೇಳಿದರು.
“ದೇಶದಲ್ಲಿ ದಲಿತರ ಆಕ್ರೋಶ ವ್ಯಕ್ತವಾಗಿರುವುದರ ರಾಜಕೀಯ ಪರಿಣಾಮ ಏನು?’ ಎಂಬ ಮಾಧ್ಯಮ ಪ್ರಶ್ನೆಗೆ ಉತ್ತರಿಸುತ್ತಿದ್ದ ರಾಹುಲ್ ಗಾಂಧಿ, “ಮುಂಬರುವ 2019ರ ಲೋಕಸಭಾ ಚುನಾವಣೆಗೆ ಎಲ್ಲ ಪ್ರತಿಪಕ್ಷಗಳು ಒಗ್ಗೂಡಿ ಹೋರಾಟ ನೀಡುವುದರಿಂದ ಬಿಜೆಪಿಗೆ ಭಾರೀ ಸೋಲಾಗುವುದು ನಿಶ್ಚಿತ. ಕಳೆದ ಹಲವು ವರ್ಷಗಳಲ್ಲಿ ಕಾಣದಂತಹ ಅಭೂತಪೂರ್ವ ಸೋಲನ್ನು ಬಿಜೆಪಿ ಮುಂದಿನ ಲೋಕಸಭಾ ಚುನವಾಣೆಯಲ್ಲಿ ಕಾಣಲಿದೆ ಮತ್ತು ಆ ಮೂಲಕ ನಾವು ಹಿಂದಿನ ನೆಮ್ಮದಿಯ ಮಾಮೂಲಿ ಸ್ಥಿತಿಗೆ ಮತ್ತೆ ಹೋಗಲಿದ್ದೇವೆ; ವಿರೋಧ ಪಕ್ಷಗಳ ಒಗ್ಗಟ್ಟಿನ ಹೋರಾಟದ ಫಲವಾಗಿ ಬಿಜೆಪಿಗೆ ಸೋಲಾಗುವುದು ನಿಶ್ಚಿತ’ ಎಂದು ಉತ್ತರಿಸಿದರು.