ಕೇಂದ್ರ-ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿಗಳ ವಿರುದ್ಧ ಬೀದಿಗಿಳಿದ ಕಾಂಗ್ರೆಸ್; ಬೆಂಗಳೂರಿನಲ್ಲಿ ಬೃಹತ್ ಜಾಥಾ

ಬೆಂಗಳೂರು: ಅತ್ತ ದಿಲ್ಲಿಯಲ್ಲಿ ಕೇಂದ್ರದ ನೂತನ ಕೃಷಿ ಕಾಯ್ದೆ ವಿರೋಧಿಸಿ ರೈತರು ಬೀದಿಗಿಳಿದು ಅಹೋರಾತ್ರಿ ಪ್ರತಿಭಟಿಸುತ್ತಿದ್ದರೆ, ಇತ್ತ ರಾಜ್ಯದಲ್ಲಿ ಕಾಂಗ್ರೆಸ್ ಪ್ರತಿಭಟನೆಗೆ ಸಾಥ್ ನೀಡಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿಗಳನ್ನ ವಿರೋಧಿಸಿ ಕಾಂಗ್ರೆಸ್ ಪಕ್ಷ ಇಂದು ನಗರದಲ್ಲಿ ಬೃಹತ್ ರಾಲಿ, ರಾಜಭವನ ಚಲೋ ನಡೆಸಿದೆ.

ಕಾಂಗ್ರೆಸ್ ಪಕ್ಷದ ರೈತ ಘಟಕದಿಂದ ಆಯೋಜಿಸಲಾಗಿರುವ ಈ ಜಾಥಾದಲ್ಲಿ 12 ಜಿಲ್ಲೆಗಳಿಂದ ರೈತರು ನಗರಕ್ಕೆ ಆಗಮಿಸಿ ಪಾಲ್ಗೊಂಡಿದ್ದಾರೆ. ಫ್ರೀಡಂ ಪಾರ್ಕ್​ವರೆಗೂ ಪ್ರತಿಭಟನಾ ಮೆರವಣಿಗೆ ಸಾಗಿ ಸೇರಲಿದೆ. ಅಲ್ಲಿ ಬೃಹತ್ ಸಮಾವೇಶವಾಗಲಿದೆ.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಮೆಜೆಸ್ಟಿಕ್ ಬಳಿ ರ್ಯಾಲಿಗೆ ಚಾಲನೆ ನೀಡಿದರು. ಸಿದ್ದರಾಮಯ್ಯ ನೇತೃತ್ವದಲ್ಲಿ ಈ ಹೋರಾಟ ನಡೆಯಲಿದೆ ಎಂದು ಈ ಸಂದರ್ಭದಲ್ಲಿ ಡಿಕೆಶಿ ಘೋಷಿಸಿದರು. ಕಾಂಗ್ರೆಸ್ ಪಕ್ಷದ ಕಿಸಾನ್ ಘಟಕ ಮಾತ್ರವಲ್ಲದೆ ಎನ್​ಎಸ್​ಯುಐ, ಸೇವಾದಳ ಸೇರಿದಂತೆ ಕಾಂಗ್ರೆಸ್ ಪಕ್ಷದ ಇತರ ಘಟಕಗಳೂ ಈ ಪ್ರತಿಭಟನೆಯಲ್ಲಿ ಭಾಗಿಯಾಗಿವೆ.

ನಿನ್ನೆ ರಾತ್ರಿಯಿಂದಲೇ ವಿವಿಧ ಜಿಲ್ಲೆಗಳಿಂದ ರೈತರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಬಸ್ಸು, ರೈಲು ಹೀಗೆ ವಿವಿಧ ವಾಹನಗಳಿಂದ ಬೆಂಗಳೂರಿಗೆ ಆಗಮಿಸಿದ್ದರು. ದಾವಣಗೆರೆ, ಮಂಡ್ಯ ಜಿಲ್ಲೆಗಳಿಂದ ಕೆಲ ರೈತರು ಟ್ರ್ಯಾಕ್ಟರ್​ಗಳಲ್ಲೇ ಬಂದು ಬೆಂಗಳೂರಿನ ರಸ್ತೆಯಲ್ಲಿ ಇಂದು ಮೆರವಣಿಗೆ ನಡೆಸಿ ಪ್ರೀಡಂ ಪಾರ್ಕ್​ನಲ್ಲಿ ಜವಾವಣೆಗೊಂಡಿದ್ದಾರೆ. ಫ್ರೀಡಂ ಪಾರ್ಕ್​ನಲ್ಲಿ ಸಾವಿರಾರು ಮಂದಿಯ ಸಮಾವೇಶಕ್ಕೆ ವೇದಿಕೆ ಸಜ್ಜುಗೊಳಿಸಲಾಗಿದೆ.

ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರಲ್ಲದೆ, ಜಿ. ಪರಮೇಶ್ವರ್, ಕೆ.ಜೆ. ಜಾರ್ಜ್, ಡಿಕೆ ಸುರೇಶ್, ಮಾಜಿ ಮೇಯರ್ ರಾಮಚಂದ್ರಪ್ಪ, ಭವ್ಯಾ ನರಸಿಂಹಮೂರ್ತಿ, ಕವಿತಾ ನಾಯ್ಡು, ಉಮಾ ಶಂಕರ್, ಕನೀಜ್ ಫಾತಿಮಾ ಮೊದಲಾದ ಮುಖಂಡರು ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.

ಈ ನಡುವೆ ಬೃಹತ್ ಪ್ರತಿಭಟನೆ ಹಿನ್ನೆಲೆಯಲ್ಲಿ ಸಿಟಿ ರೈಲ್ವೆ ನಿಲ್ದಾಣದಿಂದ ಫ್ರೀಡಂಪಾರ್ಕ್ ವರೆಗೂ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

Leave a Reply

Your email address will not be published. Required fields are marked *