ಬಿಜೆಪಿಯ ‘ಸುವರ್ಣ ಯುಗ’ ಅಂತ್ಯಗೊಂಡಿದೆ, ಅದು ರೆಕ್ಕೆಯಿಲ್ಲದ ವಿಮಾನದಲ್ಲಿ ಹಾರುತ್ತಿದೆ!: ಶಿವಸೇನೆ
ನ್ಯೂಸ್ ಕನ್ನಡ ವರದಿ: ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟದ ಮಿತ್ರಪಕ್ಷವಾಗಿದ್ದರೂ, ಮಹಾರಾಷ್ಟ್ರದಲ್ಲಿಯೂ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಸರಕಾರ ನಡೆಸುತ್ತಿದ್ದರೂ ಸತತವಾಗಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಮತ್ತು ಕೇಂದ್ರದ ಹಲವು ನೀತಿಯನ್ನು ವಿರೋಧಿಸುತ್ತಾ ಪ್ರಮುಖ ಟೀಕಾಕಾರರಲ್ಲಿ ಒಬ್ಬರಾಗಿರುವ ಶಿವಸೇನೆ ಇದೀಗ ಮತ್ತೊಮ್ಮೆ ಬಿಜೆಪಿ ವಿರುದ್ಧ ಹರಿಹಾಯ್ದಿದೆ.
ಶಿವಸೇನೆ ಪಕ್ಷದ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಬಿಜೆಪಿಗೆ ಟಾಂಗ್ ನೀಡಿರುವ ಶಿವಸೇನೆ ‘ಉತ್ತರ ಪ್ರದೇಶ ಉಪಚುನಾವಣೆಯಲ್ಲಿ ಸೋಲುಂಡ ನಂತರ ಬಿಜೆಪಿಗೆ ನಾವೆಲ್ಲರೂ ಒಗ್ಗಟ್ಟಾಗಿ ಹೋರಾಟ ನಡೆಸಬೇಕು ಎಂಬ ಆಲೋಚನೆಗಳು ಬಂದಿವೆ ಎಂದು ಶಿವಸೇನೆ ಮತ್ತು ಬಿಜೆಪಿ ಒಗ್ಗಟ್ಟಿನಿಂದಿರಬೇಕೆಂಬ ಬಿಜೆಪಿ ಅಧ್ಯಕ್ಷ ಅಮಿತ್ ಷಾ ನೀಡಿರುವ ಸಲಹೆಯನ್ನು ಸ್ಪಷ್ಟವಾಗಿ ವಿರೋಧಿಸಿ ಬರೆದಿದೆ.
ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯ ಚಿತ್ರಣವು 2014ರ ಚಿತ್ರಣದಿಂದ ಸಂಪೂರ್ಣ ಭಿನ್ನವಾಗಲಿದೆ, ಆದರೆ ಬಿಜೆಪಿ ಮಾತ್ರ ಸುವರ್ಣ ಯುಗದ ಕನಸನ್ನೇ ಕಾಣುತ್ತಿದೆ. ಬಿಜೆಪಿಯ ಸುವರ್ಣ ಯುಗ ಈಗಾಗಲೇ ಅಂತ್ಯಗೊಂಡಿದೆ. ಶಿವಸೇನಾ ತಮ್ಮ ಜತೆಗೇ ಇರಬೇಕು ಎಂದು ಬಿಜೆಪಿ ಅಧ್ಯಕ್ಷರು ಹೇಳಿದ್ದಾರೆ. ಆದರೆ 2014ರಲ್ಲಿ ಅಥವಾ ತಾವು ಅಧಿಕಾರಕ್ಕೆ ಬಂದಾಗ ಅವರು ಈ ಬಗೆಗೆ ಯೋಚಿಸಿರಲಿಲ್ಲ ಎಂದು ಹೇಳಿದೆ. ಬಿಜೆಪಿ ತನ್ನ ನಿಯಂತ್ರಣವನ್ನು, ಮೈತ್ರಿಕೂಟದಲ್ಲಿ ಸಮತೋಲನವನ್ನು ಕಳೆದುಕೊಂಡಿದೆ ಹಾಗೂ ರೆಕ್ಕೆಗಳಿಲ್ಲದ ವಿಮಾನದಲ್ಲಿ ಹಾರುತ್ತಿದೆ ಎಂದು ಶಿವಸೇನೆ, ವಿಪಕ್ಷಗಳನ್ನು ಪ್ರಾಣಿಗಳಿಗೆ ಹೋಲಿಸಿದ ಅಮಿತ್ ಷಾ ಅವರನ್ನು ಕಟುವಾಗಿ ಟೀಕಿಸಿದೆ.