ತಾಯ್ನಾಡಿಗೆ ಬಂದಿಳಿಯುತ್ತಿದ್ದಂತೆ ನೇರವಾಗಿ ವಿಮಾನ ನಿಲ್ದಾಣದಿಂದ ತಂದೆಯ ಸಮಾಧಿಗೆ ತೆರಳಿ ಕಣ್ಣೀರಿಟ್ಟ ಸಿರಾಜ್!

ಟೆಸ್ಟ್​​ ಕ್ರಿಕೆಟ್​ನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬೌಲರ್​ ಮೊಹಮದ್​ ಸಿರಾಜ್​ ತುಂಬಾನೇ ಭಾವನಾತ್ಮಕ ವ್ಯಕ್ತಿ. ಎದುರಾಳಿ ಮುಖಕ್ಕೆ ಚೆಂಡು ಬಡಿದಾಗ ಮೊಹಮದ್​ ಸಿರಾಜ್​ ಓಡೋಡಿ ಹೋಗಿ, ಸಂತೈಸಿದ್ದರು. ರಾಷ್ಟ್ರಗೀತೆ ಹಾಡುವಾಗ ಕಣ್ಣೀರಿಟ್ಟಿದ್ದರು. ಈಗ ಅವರು ಭಾರತಕ್ಕೆ ವಾಪಾಸಾಗಿದ್ದಾರೆ. ವಿಮಾನ ನಿಲ್ದಾಣದಲ್ಲಿಳಿದು ತಾಯ್ನಾಡಿನಲ್ಲಿ ಕಾಲಿಟ್ಟವರೆ ನೇರವಾಗಿ ತಂದೆಯ ಸಮಾಧಿಗೆ ತೆರಳಿ ನಮನ ಸಲ್ಲಿಸಿ, ಕಣ್ಣೀರಿಟ್ಟಿದ್ದಾರೆ.

ಮೊಹಮದ್​ ಸಿರಾಜ್​ ಆಸ್ಟ್ರೇಲಿಯಾದಲ್ಲಿರುವಾಗಲೇ ಹೈದರಾಬಾದ್​ನಲ್ಲಿದ್ದ ಅವರ ತಂದೆ ಮೃತಪಟ್ಟಿದ್ದರು. ಆದಾಗ್ಯೂ ಸಿರಾಜ್​ ತಾಯ್ನಾಡಿಗೆ ಬಾರದೇ ಟೀಂ ಇಂಡಿಯಾ ಪರವಾಗಿ ಆಡಿದ್ದರು. ಮೊಹಮದ್​ ಸಿರಾಜ್​ ಗಾಬಾದಲ್ಲಿ ನಡೆದ ಟೆಸ್ಟ್​ನ ಕೊನೆಯ ಪಂದ್ಯದಲ್ಲಿ ಸಿರಾಜ್​ ಐದು ವಿಕೆಟ್​ ಕಿತ್ತು ಪ್ರಮುಖ ಆಟಗಾರ ಎನಿಸಿಕೊಂಡಿದ್ದರು. ಈಗ ಟೆಸ್ಟ್​​ ಮುಗಿಸಿ ಭಾರತಕ್ಕೆ ವಾಪಾಸಾಗಿರುವ ಅವರು ನೇರವಾಗಿ ತಂದೆಯ ಅಂತ್ಯ ಸಂಸ್ಕಾರ ನಡೆದ ಜಾಗಕ್ಕೆ ತೆರಳಿದ್ದಾರೆ. ಈ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ದುಃಖದ ಕಟ್ಟೆ ಒಡೆದಿತ್ತು..
ತಂದೆಯನ್ನು ಕಳೆದುಕೊಂಡು ಅಲ್ಲೇ ಇರುವುದು ಕಠಿಣ ಸಂದರ್ಭವಾಗಿತ್ತು. ಆದರೆ, ತಾಯಿ ಜೊತೆ ಮಾತನಾಡಿದಾಗ ನನ್ನಲ್ಲಿ ಹೊಸ ಸ್ಫೂರ್ತಿ ಬಂದಿತ್ತು. ಕ್ರಿಕೆಟ್​ನಲ್ಲಿ ಸಾಧನೆ ಮಾಡಬೇಕು ಎನ್ನುವುದು ನನ್ನ ತಂದೆಯ ಕನಸು. ಹೀಗಾಗಿ, ನಾನು ಮಾನಸಿಕವಾಗಿ ಗಟ್ಟಿಯಾದೆ. ಕ್ರಿಕೆಟ್​ನಲ್ಲಿ ಒಂದು ಹಂತದಲ್ಲಿ ಸಾಧನೆ ಮಾಡಿ, ತಂದೆಯ ಕನಸನ್ನು ಈಡೇರಿಸುತ್ತೇನೆ ಎಂದರು ಸಿರಾಜ್.

Leave a Reply

Your email address will not be published. Required fields are marked *