ಖಾತೆ ಮರು ಹಂಚಿಕೆಯಿಂದ ಬಿಜೆಪಿಯೊಳಗೆ ಭುಗಿಲೆದ್ದ ಅಸಮಾಧಾನ; ಕೈಗೂಡದ ಸಿಎಂ ತಂತ್ರ: ಸಂಕಷ್ಟದಲ್ಲಿ ಯಡಿಯೂರಪ್ಪ

ಬೆಂಗಳೂರು: ಸಂಪುಟ ವಿಸ್ತರಣೆಯೊಂದಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಖಾತೆ ಮರು ಹಂಚಿಕೆ ಮಾಡಿರುವುದು ಬಿಜೆಪಿಯೊಳಗೆ ಅಸಮಾಧಾನ ಭುಗಿಲೇಳುವಂತೆ ಮಾಡಿದ್ದು, ಶಮನಕ್ಕೆ ಸಿಎಂ ಮಾಡಿರುವ ತಂತ್ರ ವಿಫಲಗೊಂಡಿದೆ.

ಖಾತೆ ಮರು ಹಂಚಿಕೆಯಿಂದ ಅಸಮಾಧಾನಗೊಂಡಿರುವ ಸಚಿವರು ಬಹಿರಂಗವಾಗಿ ಯಡಿಯೂರಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಬಿಜೆಪಿಯೊಳಗೆ ಮತ್ತಷ್ಟು ಸಂಕಷ್ಟವನ್ನು ತಂದೊಡ್ಡಿದೆ.

ಎಂಟಿಬಿ ನಾಗರಾಜ್​, ಕೆ ಗೋಪಾಲಯ್ಯ ಸೇರಿದಂತೆ ಕೆಲ ಸಚಿವರ ಮನವೊಲಿಸುವ ಪ್ರಯತ್ನವನ್ನು ಮುಖ್ಯಮಂತ್ರಿಗಳು ಮಾಡಿದರು. ಆದರೆ, ಅದು ಯಶಸ್ವಿಯಾಗಲಿಲ್ಲ. ಸಂಪುಟ ಸಭೆಗೆ ಗೈರಾಗುವ ಮೂಲಕ ಅವರು ಅಸಮಾಧಾನವನ್ನು ಮುಂದುವರೆಸಿದರು. ಗುರುವಾರದ ಬೆಳವಣಿಗೆ ಬೆನ್ನಲ್ಲೆ ಶುಕ್ರವಾರ ಮತ್ತೆ ಮುಖ್ಯಮಂತ್ರಿಗಳು ಆರು ಸಚಿವರ ಖಾತೆ ಮತ್ತೆ ಮರು ಬದಲಾವಣೆ ಮಾಡಿದ್ದಾರೆ. ಈ ಮೂಲಕ ಸಚಿವರ ಅಸಮಾಧಾನವನ್ನು ಶಮನ ಮಾಡುವ ಅವರ ತಂತ್ರ ಮತ್ತೊಮ್ಮೆ ವಿಫಲಗೊಂಡಿದೆ. ಅಲ್ಲದೇ ಈ ಖಾತೆ ಹಂಚಿಕೆ ಕಗ್ಗಂಟು ಹೆಚ್ಚಾಗಿದ್ದು, ಸಿಎಂ ಮತ್ತೆ ಸಚಿವರ ಮುನಿಸು ಸ್ಪೋಟಗೊಂಡಿದೆ.

ಮತ್ತೆ ಆರು ಸಚಿವರ ಖಾತೆ ಅದಲು ಬದಲು ಮಾಡಲಾಗಿದೆ. ಕೆಲ ಸಚಿವರಿಗೆ ಮತ್ತೆ ಹೆಚ್ಚುವರಿ ಖಾತೆಯನ್ನು ನೀಡುವ ಮೂಲಕ ಅವರ ಸಮಾಧಾನ ಮಾಡುವ ಯತ್ನ ನಡೆಸಲಾಗಿದೆ.

ಅರವಿಂದ ಲಿಂಬಾವಳಿ-ಅರಣ್ಯ, ಕನ್ನಡ-ಸಂಸ್ಕೃತಿ ಇಲಾಖೆ
ಜೆ.ಮಾಧುಸ್ವಾಮಿ-ವೈದ್ಯಕೀಯ ಶಿಕ್ಷಣ, ವಕ್ಫ್
ಕೆ.ಗೋಪಾಲಯ್ಯ- ಅಬಕಾರಿ ಖಾತೆ
ಎಂಟಿಬಿ ನಾಗರಾಜ್ -ಪೌರಾಡಳಿತ, ಸಕ್ಕರೆ
ಆರ್.ಶಂಕರ್‌ ಬಳಿ ಇದ್ದ ಖಾತೆ ಎಂಟಿಬಿಗೆ
ಆರ್.ಶಂಕರ್-ತೋಟಗಾರಿಕೆ, ರೇಷ್ಮೆ ಖಾತೆ

ಎರಡನೇ ಬಾರಿ ಖಾತೆ ಹಂಚಿಕೆಯಿಂದಾಗಿ ಆರ್​ ಶಂಕರ್​ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಪೌರಾಡಳಿತ ಖಾತೆ ಹೊಣೆ ನೀಡಿದ್ದ ಸಿಎಂ, ಈಗ ಅವರಿಗೆ ತೋಟಗಾರಿಕೆ ಮತ್ತು ಸಕ್ಕರೆ ಖಾತೆ ನೀಡಿದ್ದಾರೆ. ಈ ಖಾತೆ ಬದಲಾವಣೆ ಪಟ್ಟಿ ಪ್ರಕಟವಾಗುತ್ತಿದ್ದಂತೆ ಮುಖ್ಯಮಂತ್ರಿಗಳ ನಿವಾಸಕ್ಕೆ ಶಂಕರ್​ ಆಗಮಿಸಿದ್ದು, ಅವರ ಮುಂದೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಮುಂಚೆ ತಾವು ನಿರ್ವಹಣೆ ಮಾಡುತ್ತಿದ್ದ ಖಾತೆಯನ್ನು ನೀಡುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಎರಡನೇ ಬಾರಿ ಖಾತೆ ಬದಲಾವಣೆಯಿಂದ ಅಸಮಾಧಾನಗೊಂಡಿರುವ ಸಚಿವ ಆರ್​ ಶಂಕರ್ ಸರ್ಕಾರಿ ಕಾರು ಬಿಟ್ಟು , ಖಾಸಗಿ ಕಾರಿನಲ್ಲಿ ಓಡಾಡುವ ಮೂಲಕ ಮುನಿಸು ವ್ಯಕ್ತಪಡಿಸಿದ್ದಾರೆ. ಬೆಳಿಗ್ಗೆಯಿಂದಲೂ ಶಂಕರ್​​ ಖಾಸಗಿ ಕಾರಿನಲ್ಲಿಯೇ ಓಡಾಡುತ್ತಿದ್ದಾರೆ. ತಮ್ಮ ಖಾತೆ ಬದಲಾವಣೆ ಮಾಡುತ್ತಿದ್ದಂತೆ ಸರ್ಕಾರಿ ವಾಹನವನ್ನು ಅವರು ತೊರೆಯುವ ಮೂಲಕ ಮುನಿಸು ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *