ಬಿಜೆಪಿ ಶಾಸಕನ ಮೇಲೆ ರೇಪ್ ಆರೋಪ ಮಾಡಿದ ಯುವತಿಯ ತಂದೆಯ ಲಾಕಪ್ ಡೆತ್! 6 ಪೊಲೀಸರು ಸಸ್ಪೆಂಡ್
ನ್ಯೂಸ್ ಕನ್ನಡ ವರದಿ: ಉತ್ತರಪ್ರದೇಶದಲ್ಲಿ ಸಂಚಲನ ಮೂಡಿಸಿದ ಆಘಾತಕಾರಿ ಅತ್ಯಾಚಾರ ಆರೋಪ ಪ್ರಕರಣ ಇದೀಗ ಮತ್ತಷ್ಟು ಕಗ್ಗಂಟಾಗಿದ್ದು, ಬಿಜೆಪಿ ಶಾಸಕ ಕುಲ್ದೀಪ್ ಸಿಂಗ್ ಸೇಂಗರ್ ವಿರುದ್ಧ ಮಹಿಳೆಯೊಬ್ಬಳು ಅತ್ಯಾಚಾರ ಆರೋಪ ಮಾಡಿ ಭಾನುವಾರ ಸಿಎಂ ಯೋಗಿ ಆದಿತ್ಯನಾಥ್ ನಿವಾಸದ ಎದುರು ಸಂತ್ರಸ್ತೆ ಕುಟುಂಬ ಸಮೇತ ಆತ್ಮಹತ್ಯೆಗೆ ಮುಂದಾಗಿದ್ದಳು.
ಈ ಪ್ರತಿಭಟನೆ ನಂತರ ನ್ಯಾಯ ನೀಡಬೇಕಾದ ಪೊಲೀಸರು ಅತ್ಯಾಚಾರ ಸಂತ್ರಸ್ತೆ ಮಹಿಳೆಯ ತಂದೆಯನ್ನು ಪೊಲೀಸರು ಬಂಧಿಸಿದ್ದರು. ಆದರೆ, ಪೊಲೀಸ್ ಕಸ್ಟಡಿಯಲ್ಲಿದ್ದ ಆಕೆಯ ತಂದೆ ಸಾವನ್ನಪ್ಪಿದ್ದು, ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ, ಬಹಳಷ್ಟು ಹಿಂಸೆ ನೀಡಿದ ಕಾರಣವೇ ಸಂತ್ರಸ್ತೆಯ ತಂದೆಯ ಸಾವು ಉಂಟಾಗಿದೆ ಎಂಬ ಅನುಮಾನ ನಿಜವಾಗುತ್ತಿದೆ.
ಇದರ ಬೆನ್ನಲ್ಲೇ ಇಬ್ಬರು ಪೊಲೀಸ್ ಅಧಿಕಾರಿಗಳು ಹಾಗೂ ನಾಲ್ವರು ಪೇದೆಗಳನ್ನು ಅಮಾನತು ಮಾಡಲಾಗಿದೆ. ಅಲ್ಲದೇ, ಈ ಘಟನೆ ಸಂಬಂಧ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಅತ್ಯಾಚಾರ ಸಂತ್ರಸ್ತೆಯ ತಂದೆ ಸಾವಿಗೆ ಸಂತಾಪ ಸೂಚಿಸಿರುವ ಸಿಎಂ ಯೋಗಿ ಆದಿತ್ಯನಾಥ್, ಇದೊಂದು ದುರದೃಷ್ಟಕರ ಘಟನೆಯಾಗಿದ್ದು, ಈ ಪ್ರಕರಣದ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಎಡಿಜಿಗೆ ಸೂಚಿಸಿದ್ದಾರೆ. ತಪ್ಪಿಸ್ಥರು ಯಾರೇ ಆದರೂ ಬಿಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ. ಆದರೂ ಈ ಪ್ರಕರಣದಲ್ಲಿ ಬಿಜೆಪಿ ನಾಯಕನನ್ನು ಯೋಗಿ ಆದಿತ್ಯನಾಥ್ ಸರ್ಕಾರ ರಕ್ಷಿಸುತ್ತಿದೆ ಮತ್ತು ಅತ್ಯಾಚಾರ ಸಂತ್ರಸ್ತೆಗೇ ಬೆದರಿಕೆ ಹಾಕುತ್ತಿದೆ ಎಂದು ಬಹಳಷ್ಟು ಟೀಕೆ ಕೇಳಿ ಬರುತ್ತಿದ್ದು, ದೆಹಲಿಯ ಬಿಜೆಪಿ ವರಿಷ್ಠರೂ ಯೋಗಿ ಆದಿತ್ಯನಾಥ್ ರವರಿಗೆ ಸರಿಯಾಗಿ ಈ ಪ್ರಕರಣ ನಿಭಾಯಿಸಿ ಎಂದು ತಾಕೀತು ಮಾಡಿದ್ದಾರೆ ಎನ್ನಲಾಗಿದೆ.