ಫ್ಯಾಕ್ಟರಿಯಲ್ಲಿ ಬೆಂಕಿ: ಬಿದಿರಿನ ಏಣಿಯನ್ನು ಬಳಸಿ 20 ಮಂದಿಯನ್ನು ರಕ್ಷಿಸಿದ ಮಹಿಳೆ!
ನ್ಯೂಸ್ ಕನ್ನಡ ವರದಿ-(10.04.18): ನಾಲ್ಕು ಅಂತಸ್ತಿನ ಪಾದರಕ್ಷೆ ತಯಾರಿಕಾ ಕಂಪೆನಿಯ ಕಟ್ಟಡವೊಂದು ಅಗ್ನಿಗಾಹುತಿಯಾಗಿದ್ದು, ಈ ಸಂದರ್ಭದಲ್ಲಿ 58 ವರ್ಷದ ಮಹಿಳೆಯೊಬ್ಬರು ತೋರಿದ ಸಮಯಪ್ರಜ್ಞೆಯಿಂದಾಗಿ ಕಟ್ಟಡದೊಳಗಿದ್ದ 20 ಮಂದಿ ಪ್ರಾಣಾಪಾಯದಿಂದ ಪಾರಾದ ಘಟನೆಯು ದೆಹಲಿಯ ಸುಲ್ತಾನ್ ಪುರಿಯಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ. ಕಟ್ಟಡವು ಅಗ್ನಿಗಾಹುತಿಯಾದ ಸಂದರ್ಭ ಜ್ಯೋತಿ ವರ್ಮಾ ಎಂಬ ಮಹಿಳೆಯೊಬ್ಬರು ಬಿದಿರಿನ ಏಣಿಯನ್ನು ಬಳಸಿ ಸುಮಾರು 20 ಮಂದಿಯನ್ನು ರಕ್ಷಿಸಿದ್ದಾರೆ. ಇವರ ಈ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಈ ಕುರಿತು ಮಾತನಾಡಿದ ಜ್ಯೋತಿ ವರ್ಮಾ, “ಬೆಳಗ್ಗೆ 6:30 ರ ಸಂದರ್ಬದಲ್ಲಿ ನಾನು ಬೆಳಗ್ಗಿನ ತಿಂಡಿ ತಯಾರಿಸುತ್ತಿದ್ದ ವೇಳೆ ಪಕ್ಕದ ಮನೆಯ ಮಹಿಳೆಯೋರ್ವರು ಪಾದರಕ್ಷೆ ತಯಾರಿಕಾ ಕಂಪೆನಿಯಲ್ಲಿ ಅಗ್ನಿ ಅನಾಹುತ ಉಂಟಾಗಿದ್ದು, ಅದರೊಳಗೆ ಹಲವು ಕಾರ್ಮಿಕರು ಸಿಲುಕಿಕೊಂಡಿದ್ದಾರೆ ಎಂದು ತಿಳಿಸಿದರು. ಸ್ಥಳಕ್ಕೆ ತೆರಳಿದಾಗ ಮೂರನೇ ಅಂತಸ್ತಿನಲ್ಲೆಲ್ಲಾ ಜನರು ಬೊಬ್ಬಿಡುವ ಶಬ್ಧ ಕೇಳಿಸುತ್ತಿತ್ತು. ಕೂಡಲೇ ನಾನು ಬಿದಿರಿನ ಏಣಿಯನ್ನು ತಂದು ಸಾಧ್ಯವಾದಷ್ಟು ಪ್ರಯತ್ನಿಸಿ 20 ಮಂದಿಯನ್ನು ಕೆಳಗಿಸಿದೆ ಎಂದು ಜ್ಯೋತಿ ವರ್ಮಾ ಹೇಳಿದರು. ಪ್ರಕರಣದಲ್ಲಿ ಒಟ್ಟು ನಾಲ್ಕು ಮಂದಿ ಮೃತಪಟ್ಟಿದ್ದಾರೆ.